Advertisement

ಸಂಗಮ್‌ ರಸ್ತೆ ಸಂಚಾರ ಸ್ಥಗಿತ ; ಸಾರ್ವಜನಿಕರ ಆಕ್ರೋಶ

02:41 AM May 26, 2019 | Team Udayavani |

ಕುಂದಾಪುರ: ಇಲ್ಲಿನ ಸಂಗಮ್‌ ಜಂಕ್ಷನ್‌ ಬಳಿ ಕುಂದಾಪುರ ನಗರದಿಂದ ಆನಗಳ್ಳಿಗೆ ಸಂಚರಿಸುವ ಮಾರ್ಗವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಗಿತಗೊಳಿಸಲಾಗಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಸದ್ಯದ ಮಟ್ಟಿಗೆ ಯಾವುದೇ ಅವಘಢ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಸಿ ಡಾ| ಎಸ್‌. ಮಧುಕೇಶ್ವರ್‌ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಂಗಮ್‌ ಜಂಕ್ಷನ್‌ ಬಳಿ ಕುಂದಾಪುರದ ಅಂಚೆ ಕಚೇರಿ ಮಾರ್ಗದಿಂದ ಆನಗಳ್ಳಿಗೆ ಸಂಚರಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ತಡೆಗೋಡೆಯಿಟ್ಟು ಶುಕ್ರವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ.

ಎಸಿಯವರ ಈ ನಿರ್ಧಾರದಿಂದ ಸಂಗಮ್‌, ಆನಗಳ್ಳಿ ಕಡೆಗೆ ಹಾಗೂ ಬೈಂದೂರು ಕಡೆಯಿಂದ ನೇರವಾಗಿ ನಗರಕ್ಕೆ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗ ಹೆಮ್ಮಾಡಿ, ತಲ್ಲೂರು, ಆನಗಳ್ಳಿ ಕಡೆಯಿಂದ ಬರುವ ವಾಹನ ಸವಾರರು ಕುಂದಾಪುರ ನಗರಕ್ಕೆ ಬರಬೇಕಾದರೆ ಸಂತೆ ಮಾರುಕಟ್ಟೆ ಬಳಿ ಅಥವಾ ಶಾಸ್ತ್ರಿ ಸರ್ಕಲ್ ಮೂಲಕವಾಗಿ ಸುತ್ತು ಬಳಸಿ ಬರಬೇಕಿದೆ.

ತಡೆ ತೆರವಿಗೆ ಆಗ್ರಹ

ಸಂಗಮ್‌ ಜಂಕ್ಷನ್‌ ಬಳಿ ಅಳವಡಿಸಿರುವ ತಾತ್ಕಾಲಿಕ ತಡೆಗೋಡೆಯನ್ನು ತತ್‌ಕ್ಷಣ ತೆರವು ಮಾಡಬೇಕು, ಇಲ್ಲದಿದ್ದರೆ ಇಲ್ಲಿ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಪ್ರಯಾಸ ಪಡಬೇಕಾಗುತ್ತದೆ. ಅದಲ್ಲದೆ ಹೆದ್ದಾರಿಯಲ್ಲಿ ಆಗಾಗ ಟ್ರಾಫಿಕ್‌ ಜಾಂ ಕೂಡ ಆಗುತ್ತಿರುತ್ತದೆ. ಇದಲ್ಲದೆ ಆದರ್ಶ ಆಸ್ಪತ್ರೆಗೆ ಹೋಗಬೇಕಾದರೂ ಸುತ್ತುಬಳಸಿ ತೆರಳಬೇಕಾಗಿದೆ. ಶುಕ್ರವಾರ ಸಂಜೆ ವೇಳೆಗೆ ಇಲ್ಲಿ ಸೇರಿದ ಸಾರ್ವಜನಿಕರು ಕೂಡಲೇ ಇದನ್ನು ತೆರವು ಮಾಡಬೇಕು ಹಾಗೂ ಇಲ್ಲಿ ಅಗತ್ಯವಿರುವ ಅಂಡರ್‌ಪಾಸ್‌ ನಿರ್ಮಾಣಕ್ಕೆ ಕೂಡ ಎಸಿಯವರಿಗೆ ಆಗ್ರಹಿಸಿದ್ದಾರೆ.

Advertisement

ಪತ್ರಿಕೆ ಸರಣಿ ವರದಿ

ಸಂಗಮ್‌ ಜಂಕ್ಷನ್‌ನಲ್ಲಿರುವ ವಾಹನ ಸಂಚಾರದ ಗೊಂದಲಗಳ ಬಗ್ಗೆ ‘ಉದಯವಾಣಿ’ ಪತ್ರಿಕೆಯು ಕೆಲ ದಿನಗಳಿಂದ ನಿರಂತರವಾಗಿ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ.

ಅಂಡರ್‌ಪಾಸ್‌ ನಿರ್ಮಿಸಲಿ

ಸಂಗಮ್‌ ಜಂಕ್ಷನ್‌ ಬಳಿಯ ಸಂಚಾರ ಗೊಂದಲಕ್ಕೆ ಅಂಡರ್‌ಪಾಸ್‌ ನಿರ್ಮಾಣವೇ ಪರಿಹಾರವಾಗಿದೆ. ಇಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಏನೂ ಪ್ರಯೋಜನವಿಲ್ಲ. ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಿ. ಸಂಚಾರ ಸ್ಥಗಿತಗೊಳಿಸುವುದರಿಂದ ಸಾಕಷ್ಟು ತೊಂದರೆಯಾಗಲಿದೆ.
-ಶ್ರೀಧರ್‌ ಶೇರಿಗಾರ್‌, ಪುರಸಭೆ ಸದಸ್ಯ
ತಾತ್ಕಾಲಿಕ ಕ್ರಮವಷ್ಟೇ

ಈಗ ಸದ್ಯದ ಮಟ್ಟಿಗೆ ಅಪಘಾತ ಸಂಭವಿಸದಂತೆ ಈ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವರು ಇದಕ್ಕಿಂತ ಉತ್ತಮ ಸಲಹೆಯಿದ್ದರೆ ನೀಡಬಹುದು. ಅದರಂತೆ ಮುಂದುವರಿಯಲಾಗುವುದು. ಅಲ್ಲಿನ ಸೇತುವೆ ಸಂಚಾರಕ್ಕೆ ಮುಕ್ತವಾಗುವವರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆ ಬಳಿಕ ತೆರವುಗೊಳಿಸಲಾಗುವುದು.
– ಬಿ.ಪಿ. ದಿನೇಶ್‌ ಕುಮಾರ್‌, ಕುಂದಾಪುರ ಡಿವೈಎಸ್‌ಪಿ
Advertisement

Udayavani is now on Telegram. Click here to join our channel and stay updated with the latest news.

Next