ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆದ್ದಾರಿ 66 ರ ಸಂಗಮ್ ಜಂಕ್ಷನ್ ಬಳಿಯ ವಾಹನ ಸಂಚಾರದಲ್ಲಿ ಉಂಟಾಗುತ್ತಿದ್ದ ಗೊಂದಲವನ್ನು ಮನಗಂಡು, ಸುಗಮ ವಾಹನ ಸಂಚಾರ ವ್ಯವಸ್ಥೆ ನೋಡಿಕೊಳ್ಳಲು ಬುಧವಾರ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ.
ಇಲ್ಲಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ರಸ್ತೆ ಕ್ರಾಸ್ ಮಾಡುವುದು ದೊಡ್ಡ ಸವಾಲಾಗಿದ್ದು, ಈ ಕುರಿತಂತೆ “ಉದಯವಾಣಿ’ಯು ನಿರಂತರವಾಗಿ ವರದಿ ಮೂಲಕ ಗಮನ ಸೆಳೆಯುತ್ತಿತ್ತು.
ಇದಕ್ಕೆ ಸ್ಪಂದಿಸಿದ ಪೊಲೀಸ್ ಇಲಾಖೆ ತಾತ್ಕಲಿಕವಾಗಿ ಇಲ್ಲಿ ಓರ್ವ ಪೊಲೀಸ್ ಸಿಬಂದಿಯನ್ನು ನಿಯೋಜಿಸುವ ಮೂಲಕ ಕ್ರಮಕೈಗೊಂಡಿದೆ.
ಕುಂದಾಪುರ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದು, ಕಳೆದೆರಡು ದಿನಗಳಿಂದ ಇಲ್ಲಿಗೆ ಭೇಟಿ ನೀಡಿ, ಅಲ್ಲಿನ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು.
ಮಂಗಳವಾರ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಮಧುಕೇಶ್ವರ್ ಕೂಡ ಭೇಟಿ ನೀಡಿ, ಸೂಕ್ತ ಸಲಹೆ ನೀಡಿದ್ದರು.
ಈ ಬಗ್ಗೆ ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಅವರು ಕೂಡ ಡಿವೈಎಸ್‌ಪಿ ಅವರಿಗೆ ಮನವಿ ಸಲ್ಲಿಸಿದ್ದರು.