Advertisement

ಗಡಿ ಭಾಗಗಳ ಸಂಗಮ ಸ್ಥಾನಕ್ಕೆ ಪ್ರಗತಿಯೂ ಕೂಡಲಿ !

10:26 AM Jul 19, 2022 | Team Udayavani |

ಪುಂಜಾಲಕಟ್ಟೆ: ಸಂಗಬೆಟ್ಟು ಮೂರು ತಾಲೂಕುಗಳ ಗಡಿ ಭಾಗವೂ ಹೌದು, ಸಂಪರ್ಕ ಕಲ್ಪಿಸುವ ಜಂಕ್ಷನ್‌ ಮಾದರಿಯೂ ಹೌದು. ಮೂಡುಬಿದಿರೆ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳ ಗಡಿಭಾಗವಾಗಿದೆ ಈ ಗ್ರಾಮ.

Advertisement

ಸಂಗಬೆಟ್ಟು ಗ್ರಾಮ ಸುಮಾರು 1,431.54 ಹೆಕ್ಟೇರ್‌ ಪ್ರದೇಶದ ವ್ಯಾಪ್ತಿಯಿದೆ. 2011ರ ಜನಗಣತಿಯ ಪ್ರಕಾರ ಒಟ್ಟು 1,288 ಕುಟುಂಬಗಳು ವಾಸಿಸುತ್ತಿದ್ದು, ಜನಸಂ ಖ್ಯೆ 4,400. ಸಂಗಬೆಟ್ಟು ಗ್ರಾಮ ಪಂಚಾಯತ್‌ನಡಿ ಬರುವ ಗ್ರಾಮಗಳು ಸಂಗಬೆಟ್ಟು ಮತ್ತು ಕರ್ಪೆ. ಇದರಲ್ಲಿ ಸಂಗಬೆಟ್ಟು ಪಂಚಾಯತ್‌ನ ಕೇಂದ್ರ ಸ್ಥಾನವಾಗಿ ಬೆಳೆದ ಪರಿಣಾಮ ಒಂದಿಷ್ಟು ಸೌಕರ್ಯಗಳು ಲಭ್ಯವಿವೆ. ಇದರ ಅಕ್ಕಪಕ್ಕದಲ್ಲಿ ಪುಚ್ಚೆಮೊಗರು, ಆರಂಬೋಡಿ, ಕುಕ್ಕಿಪಾಡಿ, ಕರ್ಪೆ ಗ್ರಾಮಗಳಿವೆ. ಫಲ್ಗುಣಿ ನದಿ ಗ್ರಾಮದ ಸರಹದ್ದಿನಲ್ಲಿ ಹರಿಯುತ್ತಿದ್ದು, ಗ್ರಾಮದ ಕೃಷಿಕರ ಜೀವನದಿ. ಫಲ್ಗುಣಿ ನದಿಯ ನೀರನ್ನವಲಂಬಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಾವರ ಸಂಗಬೆಟ್ಟುವಿನಲ್ಲಿದೆ.

ಸಂಕಪ್ಪಣ್ಣನ ಬೆಟ್ಟು ಕ್ರಮೇಣ ಸಂಗಬೆಟ್ಟು ಆಗಿರಬಹುದೆಂಬ ಮಾತೂ ಪ್ರಚಲಿತದಲ್ಲಿದೆ. ಸಂಗಬೆಟ್ಟುವಿನಲ್ಲಿ ಮೈದಾನವೊಂದಿದ್ದು ಇಲ್ಲಿಗೆ ಈಗಲೂ ಬಾಕಿಯಾರು ಎಂದೇ ಕರೆದು ರೂಢಿ. ಇದರೊಂದಿಗೆ ಸಿದ್ದಣ್ಣ ಎಂಬವರು ಕಟ್ಟೆಯಲ್ಲಿ ವ್ಯಾಪಾರದೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಂತೆ. ಹಾಗಾಗಿ ಅವರ ಹೆಸರೇ ಈ ಪ್ರದೇಶಕ್ಕೆ ಬಂದಿದೆ. ಅದೇ ಸಿದ್ದಕಟ್ಟೆ. ಸಂಗಬೆಟ್ಟು ಗ್ರಾಮ ಪಂಚಾಯತ್‌ನ 15 ಸ್ಥಾನಗಳಲ್ಲಿ ಸಂಗಬೆಟ್ಟು ವಿನಿಂದ 11 ಮಂದಿ ಸದಸ್ಯರಿದ್ದು, ಅಧ್ಯಕ್ಷ, ಉಪಾಧ್ಯಕ್ಷರೂ ಇದೇ ಗ್ರಾಮದವರು. ಇದೇ ಗ್ರಾಮದ ಹೆಸರಿನಲ್ಲಿ ತಾ.ಪಂ ಹಾಗೂ ಜಿ.ಪಂ. ಕ್ಷೇತ್ರಗಳಿವೆ.

ಸಿದ್ದಕಟ್ಟೆಯಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಹಬ್ಬ, ಆಚರಣೆಗಳು, ಕ್ರೀಡಾ ಕೂಟಗಳು, ನಾಟಕ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ರಾಜಕೀಯ ಕಾರ್ಯಕ್ರಮಗಳಿಗೆ ಆಶ್ರಯ ತಾಣ ಇಲ್ಲಿನ ಕೇಂದ್ರ ಮೈದಾನ. ಸಾರ್ವಜನಿಕ ಶ್ರೀ ಗಣೇಶೋತ್ಸವ, ಮೊಸರು ಕುಡಿಕೆ ಉತ್ಸವ, ಶ್ರೀ ಶಾರದೋತ್ಸವಗಳಲ್ಲದೆ ಕಬಡ್ಡಿ, ಹಗ್ಗ ಜಗ್ಗಾಟ, ಯಕ್ಷಗಾನ, ನಾಟಕಗಳು ಇಲ್ಲಿ ನಡೆಯುತ್ತಿರುತ್ತವೆ. ಇದರ ಪಕ್ಕದಲ್ಲಿ ಸಂತೆ ಮಾರುಕಟ್ಟೆಯಿದ್ದು, ಮಂಗಳವಾರ ವಾರದ ಸಂತೆ ನಡೆಯುತ್ತದೆ. ಸಂಗಬೆಟ್ಟು ಗ್ರಾಮದ ಕೇಂದ್ರಸ್ಥಾನ ಸಿದ್ದಕಟ್ಟೆ ಪೇಟೆ. ಇಲ್ಲಿ ಆಗಬೇಕಾದ ಕೆಲಸ ಸಾಕಷ್ಟಿವೆ. ಮೊದಲನೆಯದಾಗಿ ಈ ಪೇಟೆಯಲ್ಲಿ ಜನ ಸಂದಣಿ ಹೆಚ್ಚು. ಸುತ್ತಲಿನ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ ಪೇಟೆಯೂ ಆಗಿರುವ ಕಾರಣ ವಾಣಿಜ್ಯ ಚಟುವಟಿಕೆಯೂ ಸಾಕಷ್ಟಿದೆ. ಮೂರೂ ತಾಲೂಕುಗಳ ರಸ್ತೆ ಕೂಡುವ ಕಡೆ ಸುಸಜ್ಜಿತ ಸರ್ಕಲ್‌ ಆಗಬೇಕು. ಅದರೊಂದಿಗೆ ಬಸ್ಸು ನಿಲ್ದಾಣ ಬೇಕು. ಪೇಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ರಸ್ತೆ ವಿಭಜಕದೊಂದಿಗೆ ವಾಹನ ನಿಲುಗಡೆಗೆ ಒಂದು ಪದ್ಧತಿ ಜಾರಿಗೆ ತಂದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜನ ಸಂದಣಿ ಹೆಚ್ಚಿರುವ ಕಾರಣ ಪೇಟೆಗೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ತೀರಾ ಅವಶ್ಯ. ಇವಿಷ್ಟು ಬೇಡಿಕೆಗಳು ತ್ವರಿತಗತಿಯಲ್ಲಿ ಈಡೇರಿದರೆ ಗ್ರಾಮದ ಅಭಿವೃದ್ಧಿಗೆ ಅನುಕೂಲವಾಗಲಿದೆ.

3 ತಾಲೂಕುಗಳ ಗಡಿ ಭಾಗವಷ್ಟೇ ಅಲ್ಲ, ಸಂಗಮ ಸ್ಥಾನವೂ ಈ ಸಂಗಬೆಟ್ಟು. ಜನ ಸಂದಣಿಗೆ ತಕ್ಕಂತೆ ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದರೂ, ಸೌಲಭ್ಯ ಇನ್ನಷ್ಟು ಬರಬೇಕಿದೆ. ಸುಸಜ್ಜಿತ ಸರ್ಕಲ್‌, ವಾಹನ ನಿಲುಗಡೆ ವ್ಯವಸ್ಥೆಯಂಥವುಗಳೊಂದಿಗೆ ಸಾರ್ವಜನಿಕ ಶೌಚಾಲಯದಂಥ ಪ್ರಾಥಮಿಕ ಸೌಲಭ್ಯ ಕಲ್ಪಿಸಬೇಕಿದೆ.

Advertisement

ಘನ ತ್ಯಾಜ್ಯ ವಿಲೇವಾರಿ ಕೇಂದ್ರ

ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಶ್ರೀ ಮಹಮ್ಮಾಯಿ ವೀರಭದ್ರ ದೇವಸ್ಥಾನ ಗ್ರಾಮಸ್ಥರ ಆರಾಧ್ಯ ಕ್ಷೇತ್ರ. ಮಸೀದಿಗಳು, ಭಜನ ಮಂದಿರಗಳು, ಜೈನ ಬಸದಿ, ದೈವಸ್ಥಾನಗಳು ಮೊದಲಾದ ಆರಾಧನಾ ಕೇಂದ್ರಗಳಿವೆ. ಅಂಗನವಾಡಿ ಕೇಂದ್ರಗಳು, ಸರಕಾರಿ ಕಿ.ಪ್ರಾ.ಶಾಲೆ, ಹಿ.ಪ್ರಾ.ಶಾಲೆ, ಪ್ರೌಢಶಾಲೆ, ಪ.ಪೂ ಹಾಗೂ ಪದವಿ ಕಾಲೇಜು, ಖಾಸಗಿ ಅನುದಾನಿತ ಹಿ.ಪ್ರಾ.ಶಾಲೆ, ರಾಷ್ಟ್ರೀಕೃತ ಬ್ಯಾಂಕ್‌, ಸೇವಾ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘ, ಪಶು ಚಿಕಿತ್ಸಾಲಯ, ಪ್ರಾಥ ಮಿಕ ಉಪ ಆರೋಗ್ಯ ಕೇಂದ್ರವಿದೆ. ಇದಲ್ಲದೇ ಖಾಸಗಿ ಚಿಕಿತ್ಸಾಲಯಗಳಿವೆ. ಅಂಚೆ ಕಚೇರಿ ಉಪ ಕೇಂದ್ರ, ಗ್ರಂಥಾಲಯವಲ್ಲದೇ ಮೆಸ್ಕಾಂ ಉಪ ವಿಭಾಗವಿದೆ. ಹೊರ ಪೊಲೀಸ್‌ ಠಾಣೆಯೂ ಇದೆ. ಘನ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ಹೊಂದಿರುವುದು ವಿಶೇಷ.

ಅಭಿವೃದ್ಧಿ ಕಾಮಗಾರಿ: ಸಂಗಬೆಟ್ಟು ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಕೇಂದ್ರಸ್ಥಾನ ಸಿದ್ದಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಶೌಚಾಲಯ ನಿರ್ಮಿಸಲು ಸೂಕ್ತ ಸರಕಾರಿ ಜಾಗ ವಿಲ್ಲದಿರುವುದು ಸಮಸ್ಯೆಯಾಗಿದೆ. -ಸತೀಶ್‌ ಪೂಜಾರಿ ಹಲಕ್ಕೆ, ಅಧ್ಯಕ್ಷರು, ಸಂಗಬೆಟ್ಟು ಗ್ರಾ.ಪಂ.

ಯಾವುದೇ ಅಭಿವೃದ್ಧಿ ಇಲ್ಲ: ಸಂಗಬೆಟ್ಟು ಗ್ರಾಮಕ್ಕೆ ಸಂಬಂಧಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾಗಬೇಕಿದೆ. ಸಿದ್ದಕಟ್ಟೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ತೀರಾ ನಿಧಾನಗತಿಯಲ್ಲಿದೆ. –ಪ್ರದೀಪ್‌ ಸಿದ್ದಕಟ್ಟೆ, ಸ್ಥಳೀಯರು

-ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next