1,50,000 ಪೌಂಡ್ ವರ್ಷದಲ್ಲಿ ಪ್ಲಾಸ್ಟಿಕ್ ಹೆಕ್ಕಿ ತೆಗೆಯುವ ಗುರಿ
144 ಕೋಟಿ ರೂ ತಗುಲಬಹುದಾದ ವೆಚ್ಚ
1.8 ಲಕ್ಷ ಕೋಟಿ ಶಾಂತಸಾಗರದಲ್ಲಿ ಇರುವ ಅಂದಾಜು ಪ್ಲಾಸ್ಟಿಕ್ ತ್ಯಾಜ್ಯ
2,000 ಅಡಿ ಪೊರಕೆಯ ಉದ್ದ
ಲಂಡನ್: ಜೀವನಾನುಕೂಲಕ್ಕಾಗಿ ಬಂದಿದ್ದ ಪ್ಲಾಸ್ಟಿಕ್ ಮಾನವರ ಜೀವನಕ್ಕೆ ಶಾಪವಾಗಿ ಪರಿಣಮಿಸಿದೆ. ಶಾಂತಸಾಗರ ವ್ಯಾಪ್ತಿಯಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯ ಮಿತಿ ಮೀರಿದ್ದು, 16 ದಶಲಕ್ಷ ಚ.ಕಿ.ಮೀ. ಮೇಲ್ಭಾಗದಿಂದ ಉಪಗ್ರಹ ಫೋಟೋಗಳ ಮೂಲಕ ನೋಡುವಾಗಲೇ ಕಣ್ಣಿಗೆ ರಾಚುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ. ಅದನ್ನು ತೆಗೆಯಲೆಂದೇ “ಓಶನ್ ಕ್ಲೀನ್‌ಅಪ್’ ಎಂಬ ಸಂಸ್ಥೆ ಹೊಸ ಯೋಜನೆ ರೂಪಿಸಿದೆ.. ಅದಕ್ಕಾಗಿ 144 ಕೋಟಿ ರೂ. ವೆಚ್ಚದಲ್ಲಿ “ಸಿಸ್ಟಮ್ 0001′ ಎಂಬ ಹೆಸರಿನ ತೇಲುವ ಪೊರಕೆಯನ್ನು ಅಭಿವೃದ್ಧಿಪಡಿಸಿದೆ. ಡಚ್ ಸಂಶೋಧಕ ಬೋಯಾನ್ ಸಾಲ್ಟ್ ಅದರ ರೂವಾರಿ.
“ಸಿಸ್ಟಮ್ 0001′ 2 ಸಾವಿರ ಅಡಿ ಉದ್ದವಿದ್ದು, ನೀರಿನ ಮೇಲ್ಭಾಗದಿಂದ 10 ಮೀಟರ್ ಆಳದಲ್ಲಿ ತೇಲುತ್ತಿರುವ ಪ್ಲಾಸ್ಲಿಕ್ ವಸ್ತುಗಳನ್ನು ಸೆಳೆದುಕೊಳ್ಳುವಂಥ ತಂತ್ರಜ್ಞಾನ ಹೊಂದಿದೆೆ. ಮೊದಲ ವರ್ಷ ದಲ್ಲಿಯೇ ಅದು 1.50 ಲಕ್ಷ ಪೌಂಡ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಗರದ ಮೇಲ್ಭಾಗದಿಂದ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಸೆ.8ರಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ 2 ವಾರಗಳ ಅದರ ಪರೀಕ್ಷೆ ಆರಂಭವಾಗಿದೆ. ನಂತರ ಸಮುದ್ರದಲ್ಲಿ ಅದನ್ನು ಮತ್ತೆರಡು ವಾರಗಳ ಕಾಲ ಪರೀಕ್ಷಿಸಲಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ “ಸಿಸ್ಟಮ್ 001′ ಕ್ಯಾಲಿಫೋರ್ನಿಯಾ ಮತ್ತು ಹವಾಯಿ ನಡುವೆ ಇರುವ ಸುಮಾರು 1.8 ಲಕ್ಷ ಕೋಟಿ ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ತೆಗೆಯುವ ಗುರಿ ಹೊಂದಿದೆ.
ಪ್ಲಾಸ್ಟಿಕ್ ಸಂಗ್ರಹ ಆರಂಭಿಸುವ ಹಂತದಲ್ಲಿ ಅದು ಇಂಗ್ಲಿಷ್ ಅಕ್ಷರ “ಯು’ ಆಕಾರದಲ್ಲಿ ಬಾಗಿಕೊಳ್ಳುತ್ತದೆ. ಅಲ್ಲಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಅದು ಉಪಗ್ರಹದಿಂದ ಕಳುಹಿಸುವ ಸಿಗ್ನಲ್‌ಗಳ ಮೂಲಕ ಕಾರ್ಯವೆಸಗುತ್ತದೆ. ಸಂಗ್ರಹದ ಮಟ್ಟ ಪೂರ್ತಿ ಯಾದಾಗ ಪ್ಲಾಸ್ಟಿಕ್ ಅನ್ನು ತೀರ ಪ್ರದೇಶಕ್ಕೆ ತಂದು, ಸಂಸ್ಕರಿಸಿ ಜನೋಪಯೋಗಿ ವಸ್ತುಗಳನ್ನು ಸಿದ್ಧಪಡಿಸುವ ಇರಾದೆಯೂ ಸಂಸ್ಥೆಗೆ ಇದೆ.
2013ರಲ್ಲಿ ಓಶನ್ ಕ್ಲೀನ್‌ಅಪ್ ಅನ್ನು ಸಾಲ್ಟ್ ಅವರು ಆರಂಭಿಸಿದ್ದರು. ಶನಿವಾರ ಹೊಸ ಮಾದರಿಯ ತೇಲುವ ಪೊರಕೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸಮುದ್ರದಲ್ಲಿ ಪ್ಲಾಸ್ಟಿಕ್ ಹೆಕ್ಕಲು ಇರುವ ಮೊದಲ ತಂತ್ರಜ್ಞಾನ ಅಭಿವೃದ್ಧಿಗೊಳಿಸಿದ ಹೆಗ್ಗಳಿಕೆ ತನ್ನದು ಎಂದು ಸಂಸ್ಥೆ ಹೇಳಿಕೊಂಡಿದೆ.