ಸಂಡೂರು: ನೂತನ ಸದಸ್ಯರು ಅಧಿಕಾರಕ್ಕೆ ಬಂದು 15 ತಿಂಗಳು ಕಳೆದರೂ ಸಹ ಅಧಿಕಾರಿಗಳು ಅನುಪಾಲನಾ ವರದಿ ನೀಡುತ್ತಿಲ್ಲ. ಈ ಸಭೆಯಲ್ಲಿ ಕೊಡುತ್ತೇವೆ ಎಂದ ಅಧಿಕಾರಿ ಮುಂದಿನ ಸಭೆಗೆ ಬರುವುದಿಲ್ಲ ಏನು ಮಾಡುವುದು ಎಂದು ತಾಲೂಕು ಪಂಚಾಯಿತಿ ತಾಳೂರು ಕ್ಷೇತ್ರದ ಸದಸ್ಯ ಮೇಘನಾಥ ಪ್ರಶ್ನಿಸಿದರು.
ಅವರು ಸೋಮವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಚರ್ಚೆ ಪ್ರಾರಂಭದಲ್ಲಿಯೇ ಪ್ರಶ್ನಿಸಿ, ಬಹಳಷ್ಟು ಅಧಿ ಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ತಾಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ವಿಪರೀತ ಮಾಲಿನ್ಯವಾಗಿದೆ. ಕೊರೊನಾ ವೈರಸ್ ದಾಳಿಯೂ ಹೆಚ್ಚಾಗುತ್ತಿದೆ. ಜಿಂದಾಲ್ ಕಂಪನಿಯ ವಿಮಾನ ನಿಲ್ದಾಣ, ಕಂಪನಿ ಕಾರ್ಯಕ್ಕೆ ಹೊರ ರಾಜ್ಯದ ಮತ್ತು ಬೇರೆ ದೇಶದ ಪ್ರಜೆಗಳು ಬರುತ್ತಾರೆ ಕ್ರಮವೇನು ಎಂದು ಪ್ರಶ್ನಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಉತ್ತರಿಸಿ, ಈಗಾಗಲೇ ಎಲ್ಲ ಪಿಡಿಓಗಳಿಗೆ ಮಾಹಿತಿ ತಿಳಿಸಿದೆ. ಅಲ್ಲದೆ ತಾಲೂಕುಮಟ್ಟದ ಅಧಿಕಾರಿಗಳಿಗೂ ಸಹ ಹೇಳಲಾಗಿದೆ. ಮುಂದಿನ ಹಂತದಲ್ಲಿ ಕ್ರಮ ವಹಿಸಲಾಗುವುದು ಎಂದರು.
ತಾಪಂ ಸದಸ್ಯೆ ಗಂಗಮ್ಮ ಪ್ರಶ್ನಿಸಿ ಎಚ್ಚರಿಕೆ ವಹಿಸಿರುವುದು ಉತ್ತಮವೇ ಸರಿ, ಅದರೆ ಭುಜಂಗನಗರ, ಇತರ ಗ್ರಾಮಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ವಿಪರೀತ ಸೊಳ್ಳೆಗಳಾಗಿವೆ. ಯಾವಾಗ ಸ್ವಚ್ಛತೆ, ಸ್ವಚ್ಛತೆ ಕೊರತೆಯಿಂದಲೇ ರೋಗ ಹರಡಬಹುದು ಎಂದಾಗ ಇತರ ಸದಸ್ಯರೂ ಸಹ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಸಮಸ್ಯೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಅರ್. ಅಕ್ಕಿ ಮಾಹಿತಿ ನೀಡಿ ಸರ್ಕಾರದ ಅದೇಶದಂತೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಮೂರ್ತಿ ಮಾಹಿತಿ ನೀಡಿ, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ರಜೆ ಘೋಷಿಸಿ ಮನೆಗಳಿಗೆ ಆಹಾರ ತಲುಪಿಸುತ್ತಿದ್ದೇವೆ, ಅದೇ ರೀತಿ ಗರ್ಭಿಣಿಯರಿಗೂ ಸಹ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತಿಮವಾಗಿ ಎಲ್ಲ ನೋಡಲ್ ಅಧಿ ಕಾರಿಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಬೇಕು. ಕೊರೊನಾ ಹರಡುವಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷೆ ಫರ್ಜಾನ್ ಗೌಸ್ ಅಜಂ, ತಿರುಕಮ್ಮ ವೆಂಕಟೇಶ್, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.