ಸಂಡೂರು: ಸೈನಿಕ ಹುಳುಗಳ ತೀವ್ರ ಬಾಧೆಗೆ ಆತಂಕಗೊಂಡ ರೈತರ ಜಮೀನುಗಳಲ್ಲಿ ಸೋಲಾರ್ ಲೈಟ್ ಟ್ರ್ಯಾಪ್ ಅಳವಡಿಸುವ ಮೂಲಕ ಕೀಟಬಾಧೆ ನಿಯಂತ್ರಣ ಮಾಡುವ ಹರಸಾಹಸಕ್ಕೆ ಕೃಷಿ ಇಲಾಖೆ ಮುಂದಾಗಿದೆ.
ಕೃಷಿ ಅಧಿಕಾರಿ ರಾಘವೇಂದ್ರ ಹಾಗೂ ತಾಲೂಕು ತಾಂತ್ರಿಕ ಅಧಿಕಾರಿ ಸುಶ್ಮಾ ತಂಡ ತಾಲೂಕಿನ ಯಶವಂತನಗರ ಗ್ರಾಮದ ರೈತ ಗೋವಿಂದರಾಜ್ ಮತ್ತು ಇತರ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಪ್ರಾರಂಭಿಸಿತು.
ಕೃಷಿ ಅಧಿಕಾರಿ ರಾಘವೇಂದ್ರ ಮಾತನಾಡಿ, ಈಗಾಗಲೇ ಬೆಳೆ ಬದಲಾವಣೆಗೆ ತಿಳಿಸಿದ್ದೇವು. ಅದರೆ ಬಹಳಷ್ಟು ರೈತರು ಕ್ರಮ ವಹಿಸದೇ ಹಾಗೆ ಬಿತ್ತನೆ ಮಾಡಿರುವುದರಿಂದ ತೊಂದರೆಯುಂಟಾಗಿದೆ. ಅದನ್ನು ತಡೆಯುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ತಾಂತ್ರಿಕ ವ್ಯವಸ್ಥಾಪಕ ಅಧಿಕಾರಿ ಮಾಹಿತಿ ನೀಡಿ, ಸೈನಿಕ ಹುಳು ಮತ್ತು ಇತರ ಕೀಟಗಳನ್ನು ತಡೆಯಲು ಜಮೀನುಗಳಲ್ಲಿ ಸೋಲಾರ್ ಲೈಟ್ ಟ್ಯ್ರಾಪ್ ಅಳವಡಿಸಿ ಕೀಟಗಳು ದೀಪದ ಬೆಳಕಿಗೆ ಬಂದು ಸಾವನ್ನಪ್ಪಿ ವಂಶ ಬೆಳೆಯದಂತೆ ಅಗುತ್ತದೆ. ಒಂದೇ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ, ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ತನ್ನ ಶಕ್ತಿ ಕಳೆದುಕೊಂಡು ಈ ರೀತಿಯ ಕೀಟಬಾಧೆಗೆ ಕಾರಣವಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬೆಳೆ ಬದಲಾವಣೆ ಅನಿವಾರ್ಯವಾಗುತ್ತದೆ ಎಂದರು.
ಸಹಾಯಕ ತಾಂತ್ರಿಕ ಅಧಿಕಾರಿ ಸಿದ್ದಾರ್ಥ ಮಾಹಿತಿ ನೀಡಿ, ಕೀಟಗಳ ನಿಯಂತ್ರಣಕ್ಕೆ ಜೈವಿಕ ಕೀಟ ಶೀಲಿಂದ್ರ ನಾಶಕವಾದ ನ್ಯೂಮೋರಿಯಾ ರಿಲೈ, 0.1 ಮಿ.ಲೀ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಇಮಾಮಿಕ್ಸಿನ್ ಬೆಂಜೋಯಿಟ್ 0.4 ಗ್ರಾಂ, ಅಥವಾ ಸೈನೋಸಾಡ್ 45 ಎಸ್.ಸಿ. 0.3ಮೀ. ಲೀ ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ, ವಿಷ ಪಾಷಾಣವನ್ನು ತಯಾರಿಸಿ ಸಂಜೆ ವೇಳೆ ಎರಚುವುದರಿಂದ ಹುಳುಗಳನ್ನು ಹತೋಟಿಸಬಹುದು. ವಿಷ ಪಾಷಾಣ ತಯಾರಿಸಲು 5 ಕೆಜಿ ಬೆಲ್ಲ ಪುಡಿ ಮಾಡಿ 10 ಲೀ. ನೀರಿನಲ್ಲಿ ಕರಗಿಸಿ, 625 ಮೀ.ಲೀ. ಮೋನೋಕ್ರೋಟೋಪಾಸ್ 36 ಎಸ್.ಎಲ್. ಅಥವಾ ತೈಯೋಡಿಕಾರ್ಬ 200 ಗ್ರಾಂ ಕೀಟನಾಶಕ ಸೇರಿಸಬೇಕು. ಈ ಮಿಶ್ರಣವನ್ನು 50 ಕೆ.ಜಿ. ಭತ್ತದ ಅಥವಾ ಗೋಯ ತೌಡಿನಲ್ಲಿ ಬೆರೆಸಿ ಚನ್ನಾಗಿ ಕಲಸಿ ಗಾಳಿಯಾಡದಂತೆ 24 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಂಗ್ರಹಿಸಿ ಸಂಜೆ ವೇಳೆ ಮೆಕ್ಕೆಜೋಳ, ರಾಗಿ ಬೆಳೆಗಳ ತಾಕಿನಲ್ಲಿ ಎರಚಬೇಕು ಇದರಿಂದ ರೋಗ ತಡೆಯಲು ಸಾಧ್ಯ ಎಂದು ಮಾಹಿತಿ ನೀಡಿದರು.