ಸಂಡೂರು: ಇಂದು ಸಂಡೂರು ಬರಡಾಗುತ್ತಿದ್ದು, ನಾವು ಮರ ನೆಡುವುದನ್ನು ಬಿಟ್ಟರೆ ಮುಂದಿನ 20 ವರ್ಷಗಳಲ್ಲಿ ಕುಡಿಯುವ ನೀರೂ ಸಿಗದಂತಾಗುತ್ತದೆ ಎಂದು ಸಂಡೂರು ವಿರಕ್ತಮಠದ ಪ್ರಭು ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಅವರು ಪಟ್ಟಣದ ಜನಸಂಗ್ರಾಮ ಪರಿಷತ್ತಿನ ಮುಖಂಡರಾದ ಟಿ.ಎಂ. ಶಿವಕುಮಾರ್ ಅವರು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಪ್ರತಿಫಲವಾಗಿ ಕಾಡನ್ನು ನಾಶಪಡಿಸುತ್ತಿದ್ದೇವೆ. ಟಿ.ಎಂ. ಶಿವಕುಮಾರ್ ಅವರು ಇಂದು ಸಸಿನೆಡುವ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಉಳಿವಿಗೆ ಮಾಡಿದ ಉತ್ತಮ ಕಾರ್ಯವಾಗಿದೆ. 30 ವರ್ಷಗಳ ಹಿಂದೆ ಅತಿ ಹೆಚ್ಚು ಕಾಡು ಸಂಡೂರು ಪ್ರದೇಶದಲ್ಲಿತ್ತು. ಆದರೆ ಇಂದು ಇಲ್ಲವಾಗಿದೆ. ಅಕ್ಟೋಬರ್, ನವೆಂಬರ್ ಕಳೆದರೂ ಸಹ ಮಳೆ ಇಲ್ಲದಂತಹ ಸ್ಥಿತಿ ಉಂಟಾಗಿದೆ. ನಾರಿಹಳ್ಳ ಕಳೆದ 4-5 ವರ್ಷಗಳಿಂದಲೂ ತುಂಬಿಲ್ಲ. ಮುಂದೊಂದು ದಿನ ತುಂಗಭದ್ರಾ ಡ್ಯಾಂ ನೀರನ್ನೇ ತರಬೇಕಾದೀತು. ಅಂತರ್‌ಜಲ ಕುಸಿತವಾಗಿದೆ. 500 ಅಡಿ ಬೋರ್ ಹಾಕಿದರೂ ನೀರು ಇಲ್ಲವಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಹೋರಾಟ ಮಾಡುವ ಮೂಲಕ ಕೆರೆಗಳಿಗೆ ನೀರು ತುಂಬಿಸುವಂಥ ಯೋಜನೆಯನ್ನು ರೂಪಿಸಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಚಾಗನೂರು ರೈತರು ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ನೀಡದೇ ಹೋರಾಟ ಮಾಡಿ ಕೃಷಿ ಭೂಮಿ ಉಳಿಸಿಕೊಂಡರು. ಅಂಥ ಪ್ರಯತ್ನಗಳು ನಡೆಯಬೇಕು ಎಂದು ಕರೆನೀಡಿದರು.
ಚಾಗನೂರು ಮಲ್ಲಿಕಾರ್ಜುನ ಮಾತನಾಡಿ, ಇಂದು ಅಭಿವೃದ್ಧಿ ಹೆಸರಿನಲ್ಲಿ ಬೆಳವಣಿಗೆ ಎಂದು ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರು ತಮ್ಮ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಕಾರಣ ಅವರು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಇಂದು ರೈತರು ಒಗ್ಗಟ್ಟಿನಿಂದ ಉತ್ತಮ ರೀತಿಯ ಕೃಷಿಯನ್ನು ಮಾಡಿದರೆ ನೆಮ್ಮದಿ ಮತ್ತು ಆದಾಯವನ್ನು ಪಡೆಯಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿ ಕಾರಿ ಮಂಜುನಾಥ ಮಾತನಾಡಿ, ಕೃಷಿ ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ರೈತರು ಅದನ್ನು ಬಿಟ್ಟು ಬೇರೆ ಕಡೆ ಸಾಗುತ್ತಿರುವುದು ಆತಂಕದ ಸಂಗತಿ. ಕಾರಣ ಕೃಷಿಭೂಮಿ ಕಡಿಮೆಯಾಗುತ್ತಾ ಹೋದಂತೆ ಉತ್ಪಾದನೆ ಕಡಿಮೆಯಾಗುತ್ತದೆ, ಆಹಾರದ ಅಭಾವ ಸೃಷ್ಟಿಯಾಗಬಹುದು, ಆದರೆ ನಮ್ಮ ಸಾಂಪ್ರದಾಯಿಕ ಕೃಷಿಯಿಂದಲೇ ಅಧಿಕ ಉತ್ಪಾದನೆ ಮಾಡಿದಾಗ ಅದರಿಂದ ಬೆಳೆದ ಸಿರಿಧಾನ್ಯಗಳಿಗೆ ಇಂದು ಉತ್ತಮ ಮಾರುಕಟ್ಟೆ ಸಿಗುತ್ತಿದೆ, ಹಣ್ಣು, ತರಕಾರಿ, ಹೂವಿನ ಬೆಳೆಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದರು.
ಬಳ್ಳಾರಿಯ ಹೋರಾಟಗಾರರು, ರಕ್ಷಣಾ ಸಮಿತಿಯ ಮುಖಂಡ ಸೋಮಶೇಖರಗೌಡ, ನಾಗರಾಜು, ಮಾಧವರಡ್ಡಿ ಇತರರು ಮಾತನಾಡಿದರು. ಆಯೋಜಕರಾದ ಟಿ.ಎಂ. ಶಿವಕುಮಾರ್ ಅವರು ಮಾತನಾಡಿ, ಹೋರಾಟಕ್ಕೆ ಮನೆಯ ಗೃಹಿಣಿಯರ ಬೆಂಬಲ ಅತಿ ಅಗತ್ಯ ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.