ಸಂಡೂರು: ಪ್ರತಿಯೊಂದಕ್ಕೂ ಸಂಸ್ಕಾರ ಬಹು ಮುಖ್ಯವಾಗಿದ್ದು, ಕಲ್ಲನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಸಂಸ್ಕಾರ ಮಾಡಿದಾಗ ಮಾತ್ರ ಸ್ವಾಮೀಜಿಗಳಿಗೆ ಸಂಸ್ಕಾರ ನೀಡಿದಾಗ ಅವರು ನಿಜವಾದ ಸ್ವಾಮಿಗಳಾಗುತ್ತಾರೆ. ಅಂತಹ ಸಂಸ್ಕಾರವನ್ನು ಗಂಗಾಧರದೇವರಿಗೆ ಮೇ 15ರಂದು ನಿರಂಜನ ದೀಕ್ಷಾ ಸಂಸ್ಕಾರ ನೀಡಲಾಗುವುದು ಎಂದು ಗದುಗಿನ ಡಾ| ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಮೇ 14, 15 ರಂದು ಹಮ್ಮಿಕೊಂಡಿರುವ ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೂ ಸಂಸ್ಕಾರ ನೀಡಲಾಗುವುದು, ಮಗುವು ಜನಿಸಿದಾಗ, ಮದುವೆಯಾಗುವಾಗ, ಅಂತಿಮವಾಗಿ ಸಾವನ್ನಪ್ಪಿದಾಗಲೂ ಸಹ ಸಂಸ್ಕಾರ ಮಾಡಿಯೇ ಅಂತ್ಯಕ್ರಿಯೆ ಮಾಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಸಹ ಸಂಸ್ಕಾರವಂತರಾಗಬೇಕು ಎಂದರು.
ಶ್ರೕ ಸಿದ್ದರಾಮೇಶ್ವರ ಸಂಸ್ಥಾನ ಮಠಕ್ಕೆ ಗಂಗಾಧರ ದೇವರು ಬರೀ ವ್ಯಕ್ತಿಯಾಗಿದ್ದರು. ಅವರಿಗೆ ಮೇ 15ರಂದು ಅನುಗ್ರಹ, ನಿರಂಜನ ದೀಕ್ಷಾ ಕಾರ್ಯಕ್ರಮ ನಡೆಸಲಾಗುವುದು. ಅಗ ಅವರು ಸಂಸ್ಕಾವಂತರಾಗಿ ಸಮಾಜ, ಮಠ ರಕ್ಷಿಸುವಂತಹ, ಬೆಳೆಸುವಂತಹ ಕಾರ್ಯವನ್ನು ಮಾಡುತ್ತಾರೆ. ಅದಕ್ಕೆ ಭಕ್ತರೂ ಸಹ ಬಹು ಮುಖ್ಯವಾಗುತ್ತದೆ, ಭಕ್ತರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಕಾರ್ಯ ಸ್ವಾಮಿಗಳದ್ದು ಅಗಿರುತ್ತದೆ ಎಂದರು.
ಇಲಕಲ್ ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸ್ವಾಮೀಜಿಗಳು ಎಂದರೆ ನಿಮ್ಮ ಮನೆಯ ಒಬ್ಬ ಮಗನೆಂದು ಭಾವಿಸಿಕೊಳ್ಳಬೇಕು. ಮಗನಿಗೆ ಯಾವ ರೀತಿ ನಿಮ್ಮ ಊಟದಲ್ಲಿ ಒಂದು ರೊಟ್ಟಿ, ಮಲಗಲು ವ್ಯವಸ್ಥೆ, ಎಲ್ಲಾ ರೀತಿಯ ಕೊಡುಗೆ ಕೊಡುತ್ತೀರಿ, ಅದೇ ರೀತಿ ಸ್ವಾಮೀಜಿಗಳನ್ನು ನಿಮ್ಮ ಮನೆಯ ಒಬ್ಬ ಮಗನೆಂದು ಭಾವಿಸಿ. ಅವರಿಗೆ ನಿಮ್ಮ ಊಟದಲ್ಲಿ ನಿತ್ಯ ಒಂದು ರೊಟ್ಟಿ ಕೊಡಿ. ಕೊಡದಾಗದಿದ್ದರೆ ಅದರ ಬೆಲೆಯಾಗಿ 2 ರೂ. ನಿತ್ಯ ಉಳಿಸಿ ಅದನ್ನು ಮಠಕ್ಕೆ ಕೊಡಿ ಮಠ ಬೆಳೆಯುತ್ತದೆ ಎಂದರು.
ಮಠ ಬೆಳೆಯಬೇಕಾದರೆ ಭಕ್ತರು ಉಳಿಸಬೇಕು, ಬೆಳೆಸಬೇಕು. ಅಗ ಮಾತ್ರ ಮಠ ಉನ್ನತಸ್ಥಾನಕ್ಕೆ ಹೋಗಲು ಸಾಧ್ಯ. ಗಂಗಾಧರ ದೇವರು ಈಗ ಬರೀ ಒಬ್ಬ ಸಾಮಾನ್ಯ ವ್ಯಕ್ತಿ. ಅವರನ್ನು ನೀವೆಲ್ಲರೂ ಸೇರಿ ಸಂಸ್ಕಾರವಂತನನ್ನಾಗಿ ಮಾಡುತ್ತಿದ್ದೀರಿ. ಅಗ ಅವರು ನಿಮಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜ ಸೇವೆಗೆ ಸಿದ್ಧರಾಗುತ್ತಾರೆ. ಮಠ ಎಂದರೆ ಭಕ್ತರು ಇದ್ದಾಗ ಮಾತ್ರ. ಅದು ಮಠವಾಗಿ ಉಳಿಯುತ್ತದೆ, ಇಲ್ಲವಾದಲ್ಲಿ ಇಲ್ಲ. ಆದ್ದರಿಂದ ಪ್ರತಿಯೊಬ್ಬ ಭಕ್ತನೂ ಸಹ ಮಠದ ಆಸ್ತಿ ಎಂದರು.
ಸಂಡೂರು ವಿರಕ್ತಮಠದ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ, ಯೋಗ ಗುರುಗಳಾದ ಜಾಗಟಗೇರಿ ಮಂಜುನಾಥ, ಬಳ್ಳಾರಿಯ ಕಲ್ಯಾಣ ಮಹಾಸ್ವಾಮಿಗಳು ಗ್ರಾಮದ ಗಣ್ಯರಾದ ಚಿತ್ರಿಕಿ ಮೃತ್ಯುಂಜಯಪ್ಪ, ಸತೀಶ್, ಸಿ.ಜೆ. ಕೆಂಚನಗೌಡ, ವೀರಣ್ಣ, ಒಂಟೆ ಬಸವರಾಜ ಇತರರು ಇದ್ದರು.