ಸಂಡೂರು: ಮದುವೆಗಳು ವೈಭವೀಕರಣಗೊಳ್ಳದೆ ಮಾನ್ಯವಾಗಿ, ಸಾಮೂಹಿಕವಾಗಿ ಮಾಡಿಕೊಳ್ಳುವ ಮೂಲಕ ಬಸವತತ್ವದ ಪಾಲನೆಯಾಗುವುದರ ಜೊತೆಗೆ ಆರ್ಥಿಕ ಉಳಿತಾಯವಾಗಿ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ನುಡಿದರು.
ಅವರು ಬುಧವಾರ ಪಟ್ಟಣದ ವಾಲ್ಮೀಕಿ ಸಮುದಾಯಭವನದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮತ್ತು ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್‌ಜಾತಿ ವಿವಾಹ ಮಾಡುವ ಮೂಲಕ ಜಾತಿಯ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದರು, ಇಂದು ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬಡತನಕ್ಕೆ ತುತ್ತಾಗುವುದನ್ನು ತಪ್ಪಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮದುವೆಯಾದ ದಂಪತಿಗಳು ತಮ್ಮ ಬದುಕಿನಲ್ಲಿ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಮುಖೀಯಾಗಿ ಬದುಕನ್ನು ರೂಢಿಸಿಕೊಳ್ಳಬೇಕು. ಇಂದು ಮದುವೆ ಎಂದರೆ ಅಡಂಬರದ ತುತ್ತ ತುದಿಯಲ್ಲಿವೆ. ಲಕ್ಷಾಂತರ ಬಿಟ್ಟು ಕೋಟ್ಯಂತರ ಖರ್ಚಾಗುತ್ತಿದೆ, ಅದ್ದರಿಂದ ಸಾಮೂಹಿಕ ವಿವಾಹಗಳು ಸಮಾಜದ ಬಡಜನತೆ ಅರ್ಥಿಕ ಹೊರೆಯನ್ನು ಇಳಿಸುತ್ತವೆ, ಸಾಲ ಮಾಡಿ ಸಾಲದಲ್ಲಿಯೇ ಮುಳುಗುವುದನ್ನು ತಪ್ಪಿಸುತ್ತವೆ ಎಂದರು.
ಶಾಸಕ ಈ. ತುಕರಾಂ ಮಾತನಾಡಿ, ಮದುವೆ ಮಾಡಿಕೊಂಡ ದಂಪತಿ ಮನೆಗೊಂದು ಮಗುವಿರಲಿ ಎನ್ನುವ ತತ್ವವನ್ನು ಅಳವಡಿಸಿಕೊಳ್ಳಬೇಕು. ಇಂದು ಇಡೀ ಸಮಾಜದ ಮುಂದೆ ನಡೆದ ಈ ವಿವಾಹಗಳು ಅದರ್ಶ ಪ್ರಾಯವಾಗಿರುವಂತವು. ಇದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ದಂಪತಿ ತಮ್ಮ ಮುಂದಿನ ಬದುಕಿನಲ್ಲಿ ಈ ಆದರ್ಶಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಂತಾಗಬೇಕು. ಮದುವೆ ಎರಡು ಮನಸುಗಳ ಹೊಂದಾಣಿಕೆಯಾಗಿದೆ. ಆದ್ದರಿಂದ ಅಡಂಬರವಿಲ್ಲದೆ ಸರಳವಾಗಿ ಸಾಮೂಹಿಕವಾಗಿ ಈ ಜಯಂತಿಯನ್ನು ಸಾಮೂಹಿಕ ವಿವಾಹದ ಮೂಲಕ ಅಚರಿಸುವುದು ಉತ್ತಮವಾದುದು ಎಂದರು.
ಯಶವಂತನಗರದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ದೇವರು ಮಾತನಾಡಿ, ಮದುವೆಗಳು ಎರಡು ಮನಸ್ಸುಗಳ ಜೋಡಣೆಯಾಗಿದೆ. 12ನೇ ಶತಮಾನದಲ್ಲಿಯೂ ಸಹ ಮದುವೆ ಎಷ್ಟು ಸರಳ ಹಾಗೂ ಸಮಾಜಮುಖೀಯಾಗಿದ್ದವು ಎಂಬುದು ತಿಳಿಯುತ್ತದೆ. ಶಾಸಕರು ಇಂಥ ಕಾರ್ಯಕ್ರಮಗಳನ್ನು ಜಯಂತಿ ಅಂಗವಾಗಿ ಹಮ್ಮಿಕೊಂಡು ಇಡೀ ವಾಲ್ಮೀಕಿ ಸಮಾಜ ಈ ನಿರ್ಧಾರ ಕೈಗೊಂಡಿರುವುದು ಉತ್ತಮ ಸಂಗತಿಯಾಗಿದೆ. ಜಯಂತಿಗಳು ಬಡವರಿಗೆ ಉತ್ತಮ ಹಬ್ಬಗಳಾಗುತ್ತವೆ. ಈ ರೀತಿಯ ವಿವಾಹಗಳಿಂದ ಅಲ್ಲದೆ ಅರ್ಥಿಕ ಹೊಡೆತದಿಂದ ಹೊರ ಬರುವುದರ ಜೊತೆಗೆ, ಸರ್ಕಾರ ಸಾಮೂಹಿಕ ವಿವಾಹ ಮಾಡಿಕೊಳ್ಳುವವರಿಗೆ ಸಿಗುವ ಸೌಲಭ್ಯಗಳು ಸಿಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ 4 ಜೋಡಿಗಳ ವಿವಾಹ ನಡೆಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿ. ಕೃಷ್ಣಪ್ಪ, ತಹಶೀಲ್ದಾರ್ ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟೇಶ್, ಎನ್.ಕೆ.ಸಮಾಜದ ಹಲವಾರು ಗಣ್ಯರು ಉಪಸ್ಥಿತರಿದ್ದರು.