ಸಂಡೂರು: ಜಿಂದಾಲ್‌ನವರ ಸಹಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ 15 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ನಾನು ನನ್ನ ತಾಲೂಕಿನ ಮಕ್ಕಳಿಗಾಗಿ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತೇನೆಂದು ಶಾಸಕ, ಮಾಜಿ ಸಚಿವ ಈ. ತುಕರಾಂ ತಿಳಿಸಿದರು.
ಅವರು ಶುಕ್ರವಾರ ರೋಟರಿ ಚಿತ್ರಿಕಿಮರಿಬಸಮ್ಮ, ವಿಠ್ಠಲರಾವ್‌ಲಾಡ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದ ಮೌಲ್ಯಗಳನ್ನ ನಾವು ಪರಿಗಣಿಸಬೇಕಾಗಿದೆ. ಶಿಕ್ಷಕರಾದವರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ದೇಶದ ಆಸ್ತಿಯಾಗುವ ಶಿಕ್ಷಣವನ್ನು ಶಿಕ್ಷಕ ಕೊಡಬೇಕಾಗಿದೆ. ಬಳ್ಳಾರಿಯ ಅಂಧೆ ಅಶ್ವಿನಿ ಇಡೀ ದೇಶವನ್ನೇ ಪುಸ್ತಕ ಮತ್ತು ಪೆನ್ನಿನಿಂದ ಬದಲಾವಣೆ ಮಾಡಿದರು. ಶಾಲೆಗಳು ದೇವಾಲಯವಾಗಬೇಕಾಗಿದ್ದು ನಮ್ಮ ಶಿಕ್ಷಣ ದೇವರ ಗಂಟೆ ಬಾರಿಸಿದ ಹಾಗೆ ಆಗಬೇಕಾಗಿದೆ ಎಂದು ತಿಳಿಸಿದರು.
ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಕರ್ತವ್ಯ ಅವಶ್ಯ. ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಆಗಬೇಕಾಗಿದೆ. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿ ಕಾರಿ ಡಾ| ಐ.ಆರ್. ಅಕ್ಕಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಿಂದಿನ ಶಿಕ್ಷಣ ಸಚಿವ ದಿ.ಗೋವಿಂದರಾಯರ ಮಾರ್ಗದರ್ಶನದಂತೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 9 ವಿಭಾಗಗಳಿಂದ 1764 ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದು 264 ಶಿಕ್ಷಕರು ತೀರ್ಪುಗಾರರಾಗಿದ್ದಾರೆ ಎಂದು ತಿಳಿಸಿದರು. ರೋಟರಿ ಶಾಲಾ ಮಕ್ಕಳಿಂದ ಪ್ರಾರ್ಥನೆ, ಸಂಗೀತ ಶಿಕ್ಷಕಿ ಗೀತಾ ತಂಡದವರು ನಾಡಗೀತೆ ಹಾಡಿದರು.
ಸಭೆಯಲ್ಲಿ ಪತ್ರಕರ್ತ ಅರಳಿ ಕುಮಾರಸ್ವಾಮಿ ಮಾತನಾಡಿ, ಬಂಡ್ರಿ ಗ್ರಾಮದಲ್ಲಿ ಬಾಲಕರ ವಸತಿ ನಿಲಯವಿದ್ದು ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಿಕೊಡಲು ಮನವಿ ಮಾಡಿದರು. ಶಾಸಕರು ಭರವಸೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಬಿ. ಉಮಾಪತಿ ನಿರೂಪಿಸಿದರು. ದೈಶಿಪವೀ ಶಿಕ್ಷಕ ಎಸ್.ಡಿ. ಸಂತಿ ಸ್ವಾಗತಿಸಿದರು. ಅಕ್ಷರ ದಾಸೋಹಿ ತೇನಸಿಂಗ ನಾಯಕ ವಂದಿಸಿದರು. ಚಿತ್ರಿಕಿ ಸತೀಶ, ಸಿ.ಕೆ. ವಿಶ್ವನಾಥ, ಚೌಕಳಿ ಪರುಶುರಾಮಪ್ಪ, ಶಿಕ್ಷಣ ಸಂಘದ ಅಧ್ಯಕ್ಷ ಎಂ.ಆರ್. ಸುಮನ್, ಎಂ.ತಿಪ್ಪೇಸ್ವಾಮಿ, ಎಂ.ಟಿ. ರಾಥೋಡ್, ಇಸ್ಮಾಯಿಲ್ ಅಲ್ಲದೇ ಹಲವಾರು ಮಹನೀಯರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.