Advertisement

ಉತ್ತಮ ಫಸಲು ನಿರೀಕ್ಷೆಯಲ್ಲಿದ್ಧ ರೈತರಿಗೆ ಭಾರೀ ನಿರಾಸೆ!

12:25 PM Oct 31, 2019 | Naveen |

ಸಂಡೂರು: ತಾಲೂಕಿನಾದ್ಯಂತ ರೋಹಿಣಿ ಮಳೆಗೆ ಬಿತ್ತಿದ ಜೋಳ ಅಲ್ಪ ಸ್ವಲ್ಪ ಬೆಳೆದಿದ್ದು, ಅವುಗಳನ್ನು ಹೊಲಗಳಲ್ಲಿಯೇ ಗೂಡು ಹಾಕಿ ರಕ್ಷಿಸಿಕೊಳ್ಳುವ ಪ್ರಯತ್ನ ರೈತರು ನಡೆಸಿದರೂ ಸಹ ಅದು ಫಲಕಾರಿಯಾಗಿಲ್ಲ.

Advertisement

ಹೌದು, ನಿರಂತರ ಮಳೆಯಿಂದ ಗೂಡು ಹಾಕಿದ ಜೋಳದ ಬೆಳೆಯ ಗೂಡುಗಳು ಮೊಳಕೆಯೊಡೆದು ನಷ್ಟವಾಗಿದ್ದು, ಸಜ್ಜೆ, ನವಣೆ, ನೆಲಕಚ್ಚಿವೆ. ಅಲ್ಲದೆ ಮೆಕ್ಕೆ ಜೋಳ ಉತ್ತಮ ಬೆಳೆ ಬಂದಿದೆ. ಅದರೆ ಅವುಗಳನ್ನು ಕಾಳು ಮಾಡಿ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ.

ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ದುಸ್ಥಿತಿ ಉಂಟಾಗಿದೆ. ಬಹಳಷ್ಟು ಹಳ್ಳಿಗಳಲ್ಲಿ ಒಕ್ಕಲು ಕಣಗಳಿಲ್ಲದೇ ರಸ್ತೆಗಳಲ್ಲಿಯೇ ಕಣಗಳನ್ನು ಮಾಡುತ್ತಿದ್ದಾರೆ. ಇದರಿಂದ ತಕ್ಷಣಕ್ಕೆ ಬರುತ್ತಿರುವ ಮಳೆಯಿಂದ ರಸ್ತೆಯಲ್ಲಿಯೇ ತಾವು ಬೆಳೆದ ಧಾನ್ಯಗಳು ನಷ್ಟಕ್ಕೆ ಗುರಿಯಾಗಿವೆ. ಪ್ರಮುಖವಾಗಿ ಜೋಳ ಗೂಡುಗಳಲ್ಲಿಯೇ ಮೊಳಕೆಯೊಡದರೆ, ರಾಗಿ ಬೆಳೆ  ಬೆಳೆದು ನಿಂತು ಹೊಲದಲ್ಲಿಯೇ ಉದುರುತ್ತಿವೆ. ಇನ್ನೂ ತಡವಾಗಿ ಬಿತ್ತಿದ ನವಣೆ ನೆಲಕಚ್ಚಿದೆ.

ಮತ್ತೂಂದು ಕಡೆ ಮೆಕ್ಕೆ ಜೋಳ ಪೂರ್ಣ ಪ್ರಮಾಣದಲ್ಲಿ ನೆಲಸಮವಾಗಿ ಬಿದ್ದಿದ್ದು, ವಿಪರೀತ ನಷ್ಟಕ್ಕೆ ಕಾರಣವಾಗಿವೆ. ಇನ್ನೂ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 60.5 ಹೆಕ್ಟೇರ್‌ ಪ್ರದೇಶದ ಬೆಳೆ ಮಳೆಯಿಂದ ನಷ್ಟವಾಗಿವೆ. ಅದರಲ್ಲಿ ಪ್ರಮುಖವಾಗಿ ರಾಗಿ 1.10, ಮೆಕ್ಕೆಜೋಳ 52 ಹೆಕ್ಟೇರ್‌, ಶೇಂಗಾ 1.62 ಹೆ., ಹತ್ತಿ 5.87 ಹೆ. ನಷ್ಟವಾಗಿವೆ. ಅಲ್ಲದೆ ಇತ್ತೀಚೆಗೆ ತಾಲೂಕಿನ ಅಂತಾಪುರ, ಮೆಟ್ರಿಕಿ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯಾಗಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆ 50 ಹೆಕ್ಟೇರ್‌ ಪ್ರದೇಶಕ್ಕೂ ಹೆಚ್ಚು ನಷ್ಟವಾಗಿವೆ.

ಇದರಿಂದ ರೈತರು ಕೈಗೆ ಬಂದಂತಹ ಬೆಳೆ ಬಾಯಿಗೆ ಬರದೆ ಲಕ್ಷಾಂತರ ಸಾಲಮಾಡಿ ಬೆಳೆದ ಹತ್ತಿ ಬೆಳೆಯೂ ನೀರಿನಲ್ಲಿ ತೋಯಿದು ಬಿಡಿಸಲು ಬರದಂತಾಗಿದೆ.

Advertisement

ಇದರ ಮಧ್ಯದಲ್ಲಿಯೇ ರೋಗಬಾಧೆಯೂ ಸಹ ಕಾಡುತ್ತಿವೆ. ರೈತರು ಕಷ್ಟಪಟ್ಟು ಒಂದು ಕಡೆ ಬಿತ್ತಿದ ಬೆಳೆ ಮಳೆಯಿಲ್ಲದೆ ನಷ್ಟವಾದರೆ, ಮತ್ತೂಂದು ಕಡೆ ವಿಪರೀತ ಮಳೆಯಿಂದ ಕೈಗೆ ಬಂದೆ ಬೆಳೆ ಕೈಗೆ ಸಿಗದಂತಾಗಿದೆ. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ ನೆಲಕಚ್ಚಿದೆ.

ದಾಳಿಂಬೆ ಹೂ ಉದುರಿದೆ, ಬಾಳೆ ನೆಲಕ್ಕುರುಳಿವೆ. ಒಂದಲ್ಲ ಒಂದು ರೀತಿಯಲ್ಲಿ ರೈತರೂ ಮಾತ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ, ಬೆಳೆ ಬಂದರೂ ಕೈಗೆ ಸಿಗದಾಗಿದೆ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಹಾಗೂ ತಾ.ಪಂ ಸದಸ್ಯರಾದ ಮೆಘನಾಥ, ರಾಮಾಂಜಿನ ಸಭೆಯಲ್ಲಿ ಒತ್ತಾಯಿಸಿ ಸೂಕ್ತ ಪರಿಹಾರ ಮತ್ತು ನಷ್ಟದ ಸರಿಯಾದ ವರದಿ ಸಲ್ಲಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next