ಸಂಡೂರು: ವಯಸ್ಸಾದ ವೃದ್ಧರು ನಿತ್ಯ ಅಂಚೆ ಕಚೇರಿ ಅಲೆಯುವಂಥ ದುಸ್ಥಿತಿ ಉಂಟಾಗಿದ್ದು ತಕ್ಷಣ ಅವರಿ ಪಿಂಚಣಿ ನೀಡುವ ವ್ಯವಸ್ಥೆ ಮಾಡದಿದ್ದರೆ ಮುಷ್ಕರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದರು.
ಅವರು ಗುರುವಾರ ತಾಲೂಕಿನ ತೋರಣಗಲ್ಲಿನಲ್ಲಿ ವಯಸ್ಸಾದ ನಾಗರಿಕರು ತಮ್ಮ ಪಿಂಚಣಿಗಾಗಿ ಕಳೆದ 3 ತಿಂಗಳಿನಿಂದ ಅಲೆಯುತ್ತಿದ್ದರೂ ಸಹ ಅಂಚೆಇಲಾಖೆಯವರು ಓಡಾಡಿಸುತ್ತಿದ್ದಾರೆ. ನೆಟ್ ವರ್ಕ ಇಲ್ಲ ಎನ್ನುವ ಕುಂಟುನೆಪವನ್ನು ಒಡ್ಡಿ ವ್ಯವಸ್ಥಿತವಾಗಿ ಅವರಿಂದ ಹಣ ವಸೂಲಿ ಮಾಡುವ ತಂತ್ರ ಇದಾಗಿದೆ. ತಕ್ಷಣ ಅವರ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಎಚ್ಚರಿಸಿದರು.
ವೃದ್ಧ ಹಂಪಣ್ಣ ಮಾತನಾಡಿ, 3 ತಿಂಗಳಿಂದ ಅಂಚೆ ಕಚೇರಿಗೆ ಓಡಾಡುತ್ತಿದ್ದೇವೆ. ನಿತ್ಯ ತಾಲೂಕಿನ ಬನ್ನಿ ಹಟ್ಟಿ, ಕುರೇಕುಪ್ಪ, ನಾಗಲಾಪುರ, ತಾಳೂರು, ಜೋಗ, ಕುರೇಕುಪ್ಪ ವಡ್ಡು, ಗಂಗಲಾಪುರ, ತೋರಣಗಲ್ಲು, ರೈಲ್ವೆ ನಿಲ್ದಾಣದ ಪ್ರದೇಶಗಳಲ್ಲಿ ವಾಸಿಸುತ್ತಿರುವ ವೃದ್ಧರು, ವಿಧವೆಯರು, ಅಂಗವಿಕಲರು ಅಲ್ಲದೆ ವಿಶೇಷವಾಗಿ ದೇವದಾಸಿ ಮಹಿಳೆಯರು ಸಹ ಬರುತ್ತಿದ್ದಾರೆ. ಅದರೆ ಇಲಾಖೆಯವರು ನೆಟ್‌ವರ್ಕ್ ಇಲ್ಲ ಅದು ಇಲ್ಲ, ಇದು ಇಲ್ಲ, ಖಾತೆಗೆ ಹಾಕುತ್ತೇವೆ, ಹೀಗೆ ಹಲವಾರು ರೀತಿಯ ನೆಪಗಳನ್ನು ಒಡ್ಡಿ ಸಾಗಿಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಅಗಮಿಸಿದ ವೃದ್ಧರು ಅಂಚೆ ಕಚೇರಿ ಮುಂಭಾಗದಲ್ಲಿ ಕುಳಿತು ಪಿಂಚಣಿಗಾಗಿ ಕಾದರೂ ಪಿಂಚಣಿ ಮಾತ್ರ ಅವರಿಗೆ ಸಿಗದಾಯಿತು. ಅಂಚೆ ಇಲಾಖೆಯವರು ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ವರ್ತನೆ ಮಾತ್ರ ವೃದ್ಧರಿಗೆ ನೋವುಂಟು ಮಾಡಿತು.