ಸಂಡೂರು: ಕಷ್ಟಕಾಲದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡಿ ಅವರು ಕಣ್ಣೀರು ಒರೆಸುವ ಪ್ರಯತ್ನ ನಮ್ಮೆಲ್ಲರದಾಗಬೇಕು ಎಂದು ಶಾಸಕ ಈ.ತುಕಾರಾಂ ನುಡಿದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿಕೊಂಡು 37 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಪ್ರಯತ್ನ ಇತರರಿಗೆ ಮಾದರಿಯಾಗಲಿ ನೆರವು ನೀಡುವ ಹೃದಯವಂತಿಕೆ ಬೆಳೆಸಿಕೊಳ್ಳಿ ಎಂದರು.
ಗ್ರಾಮೀಣ ಭಾಗದಲ್ಲಿರುವ ನಂದಿಹಳ್ಳಿ ಕೇಂದ್ರ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿ ಅವರಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಟ್ಟಿದೆ. ಇಲ್ಲಿ ಉನ್ನತ ಶಿಕ್ಷಣವನ್ನು ಪೂರೈಸುವ ಮೂಲಕ ನನ್ನ ಸಮತೋಲಿತ ವ್ಯಕ್ತಿತ್ವ ರೂಪಗೊಳ್ಳಲು ಕಾರಣವಾದ ಈ ವಿದ್ಯಾ ಸನ್ನಿಧಾನವನ್ನು ಮಾದರಿ ಕೇಂದ್ರವಾಗಿಸುವ ಗುರಿ ನನ್ನದಾಗಿದೆ ಎಂದರು. ಕೇಂದ್ರದ ಮೂಲ ಸೌಕರ್ಯಗಳ ಅನುಕೂಲ ಮತ್ತು ವಿದ್ಯಾರ್ಥಿಗಳ ಕಲಿಕೆ ಮತ್ತು ನೂತನ ಕ್ರೀಡಾಂಗಣದ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಹೈ.ಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ, ಬೋಧನಾ ಕೊಠಡಿಗಳು, ಶೌಚಾಲಯಗಳ ಕಟ್ಟಡ ಮತ್ತು ಕ್ರೀಡಾಂಗಣ ವೀಕ್ಷಿಸಿದರು.
ಕೇಂದ್ರದ ನಿರ್ದೇಶಕ ಎಂ.ಡಿ.ಖಣದಾಳಿ, ಡಾ.ಪಿ.ಸಿ.ನಾಗನೂರು, ನಿವೃತ್ತ ನಿರ್ದೇಶಕ ಡಾ.ಎಸ್.ಜಿ.ಗೋಪಾಲಕೃಷ್ಣ, ಡಾ.ಶರತ್, ಡಾ.ಹೊನ್ನೂರಸ್ವಾಮಿ, ಚೌಡಪ್ಪ, ಬಸವರಾಜ್ ಹಟ್ಟಿ, ಬಸವರಾಜ್ ಎಲಿಗನೂರು, ಶಿವರಾಮ್ ರಾಗಿ, ಜಿ.ಸೋಮಪ್ಪ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.