ಸಂಡೂರು: ಹಿಂಗಾರಿನಲ್ಲಿ 382 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇಂಗಾ-ಕಡ್ಲೆಬೇಳೆ ಉತ್ತಮವಾಗಿವೆ. ಬೇಸಿಗೆ ಬೆಳೆಗೆ 4 ತಿಂಗಳು ವಿಮೆ ಕಟ್ಟಲು ಅವಧಿ ಇದ್ದು ಎಕರೆಗೆ 522 ರೂ. ಕಟ್ಟಿಸಿಕೊಳ್ಳಲಾಗುವುದು. ವಿಮೆ ಕಟ್ಟಲು ರೈತರಿಗೆ ಫೆ. 29 ಕೊನೆ ದಿನವಾಗಿರುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮಂಜುನಾಥ ಸಲಹೆ ನೀಡಿದರು.
ಅವರು ತಾಲೂಕು ಪಂಚಾಯಿತಿ ದಿ. ಎಂ.ವೈ. ಘೋರ್ಪಡೆಯವರ ಸಭಾಂಗಣದಲ್ಲಿ 20 ಅಂಶಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, 30 ಜನರನ್ನು ಈಗಾಗಲೇ ಧಾರವಾಡಕ್ಕೆ ಕೃಷಿ ತರಬೇತಿಗಾಗಿ ಕರೆದೊಯ್ಯಲಾಗಿದೆ. 4 ಕೃಷಿ ಹೊಂಡಗಳಲ್ಲಿ 3 ಪ್ರಗತಿಯಲ್ಲಿವೆ. ಬೀಜಗಳನ್ನು ಪರೀಕ್ಷಾಲಯಕ್ಕೆ ಕಳುಹಿಸಿ ಪರಿಶೀಲಿಸಲಾಗುತ್ತಿದೆ. ತಾಲೂಕಿನಾದ್ಯಂತ ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ದಾಳಿಂಬೆ ಬೆಳೆಗಳು ಪ್ರಗತಿಯಲ್ಲಿವೆ ಎಂದರು.
ಪಶುಸಂಗೋಪನಾ ಇಲಾಖೆಯ ರಂಗಪ್ಪನ ಮಾತನಾಡಿ, ಕಾಲುಬಾಯಿ ಲಸಿಕೆ ಕಾರ್ಯಕ್ರಮ ಪ್ರಗತಿಯಲ್ಲಿದೆ. ಸರ್ಕಾರದ ಯೋಜನೆಗಳ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಆರೋಗ್ಯ ಇಲಾಖೆ ಅಧಿಕಾರಿ ವಿಜಯ ಭಾಸ್ಕರ್ ಹಾಗೂ ಡಾ| ಗೋಪಾಲ್‌ರಾವ್ ಆರೋಗ್ಯ ಕಾರ್ಡ್ ವಿತರಿಸಲು ಪ್ರತಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ್ದೇವೆ. ಸೊಳ್ಳೆಗಳಿಂದ ಬರುವಂಥ ರೋಗಗಳ ಪ್ರಮಾಣ ಹೆಚ್ಚುತ್ತಿದ್ದು ಪಂಚಾಯಿತಿಯವರು ಫಾಗಿಂಗ್ ಮಾಡಬೇಕು. ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಆರ್. ಅಕ್ಕಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಮಂಡಳಿಗೆ ಪ್ರಗತಿ ವರದಿಯನ್ನು ಕಳುಹಿಸಿದ್ದೇವೆ. ಎಸ್ ಎಸ್‌ಎಲ್‌ಸಿ ಪರೀಕ್ಷೆ ಸರಳಗೊಳಿಸಲು ಸರಣಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪಾಲಕರ ಸಭೆ ಕರೆದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಐಎಎಸ್ ಅಧಿಕಾರಿ, ತಾಪಂ ಕಾರ್ಯಾನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದು ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಮೀಟರ್ ಹಾಕಿ ಆರ್.ಆರ್.ನಂಬರ್ ಕೊಡಿ ಎಂದು ತಿಳಿಸಿದರು. ಅಕ್ಷರ ದಾಸೋಹದ ಅಧಿಕಾರಿ ಮಾತನಾಡಿ, 12,788 ಮಕ್ಕಳು ಇಸ್ಕಾನ್ ಊಟವನ್ನು, 18,444 ಮಕ್ಕಳು ಅಕ್ಷಯ ಯೋಜನೆಯಲ್ಲಿ ಬಿಸಿಯೂಟ ನೀಡಲಾಗುತ್ತಿದ್ದು, ಈಶಾನ್ಯ ಯೋಜನೆ ಅಡಿಯಲ್ಲಿ ಎರಡು ಪೈಲಟ್ ಗಳಿಗೆ ಆಯ್ಕೆಯಾಗಿದ್ದು, ಅದು ಸಂಡೂರು ಮತ್ತು ಯಾದಗಿರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ, ಕುಡಿಯುವ ನೀರಿನ ಇಲಾಖೆ ಅಧಿಕಾರಿ, ಸಣ್ಣ ನೀರಾವರಿ, ಆಹಾರ ಇಲಾಖೆ ಅಧಿಕಾರಿ, ಸಾಮಾಜಿಕ ಅರಣ್ಯ, ಉತ್ತರವಲಯ ಹಿಂದುಳಿದ ವರ್ಗ, ನಿರ್ಮಿತಿ ಕೇಂದ್ರ, ಪಿಡಬ್ಲೂಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾತನಾಡಿದರು.
ಸಿಡಿಪಿಓ ಪ್ರೇಮಮೂರ್ತಿಯವರು ಮಾತನಾಡಿ, ಸಂಡೂರು ತಾಲೂಕಿನಲ್ಲಿ 241 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಶೇ. 77% ಬಿಸಿಯೂಟ ನೀಡುತ್ತಿದ್ದೇವೆ. ಬಂದ ಅನುದಾನದಲ್ಲಿ ಶೇ. 66ರಷ್ಟು ಖರ್ಚು ಮಾಡಿದ್ದೇವೆ. ಅಂಗನವಾಡಿ ಕಟ್ಟಡದ ದುರಸ್ತಿಗೆ 15 ಲಕ್ಷ ರೂ. ಬಿಡುಗಡೆಯಾಗಿದೆ. 132 ಮಕ್ಕಳನ್ನು ಆರೋಗ್ಯ ತಪಾಸಣಾ ಮಾಡಿಸಲಾಗಿದೆ. ಸುಲ್ತಾನಪುರದಲ್ಲಿ ಜಿಂದಾಲ್ ಸಹಯೋಗದಲ್ಲಿ ಅಂಗನವಾಡಿ ಕೇಂದ್ರ ಕಟ್ಟಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿಯನ್ನು ಚರ್ಚಿಸಲಾಯಿತು. ತಾಪಂ ಅಧ್ಯಕ್ಷೆ ಫರ್ಜಾನ ಗೌಸ್‌ಅಜಂ ಡಿ., ಉಪಾಧ್ಯಕ್ಷೆ ತಿರುಕವ್ವ ವೆಂಕಟೇಶ್ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.