ಕನ್ನಡದಲ್ಲಿ ಇತ್ತೀಚೆಗೆ ಅಚ್ಚ ಕನ್ನಡದ ಶೀರ್ಷಿಕೆಯ ಮೂಲಕ ಕೆಲವು ಚಿತ್ರಗಳು ಗಮನ ಸೆಳೆದರೆ, ಇನ್ನು ಕೆಲವು ಚಿತ್ರಗಳು ಅಷ್ಟೇ ತಾಜಾ ಕಥೆಯ ಮೂಲಕ ಗಮನ ಸೆಳೆಯುತ್ತವೆ. ಇತ್ತೀಚೆಗೆ ಹಾಗೆ ತನ್ನ ಶೀರ್ಷಿಕೆ ಮತ್ತು ಕಥೆ ಎರಡರ ಮೂಲಕವೂ ಗಮನ ಸೆಳೆಯುತ್ತಿರುವ ಚಿತ್ರ ‘ಮುಂದಿನ ನಿಲ್ದಾಣ’. ಸುಮಾರು ಒಂದೂವರೆ ವರ್ಷಗಳ ಹಿಂದೆ ಶುರುವಾಗಿದ್ದ ಬಹುತೇಕ ಕಡಲತಡಿಯ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ ‘ಮುಂದಿನ ನಿಲ್ದಾಣ’ ಚಿತ್ರ ಸದ್ಯ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ‘ಮುಂದಿನ ನಿಲ್ದಾಣ’ ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದ ಚಿತ್ರತಂಡ, ಅಕ್ಟೋಬರ್ ವೇಳೆಗೆ ‘ಮುಂದಿನ ನಿಲ್ದಾಣ’ವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ‘ಮುಂದಿನ ನಿಲ್ದಾಣ’ ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ರಿಷಭ್ ಶೆಟ್ಟಿ, ‘ಚಿತ್ರದ ಪೋಸ್ಟರ್ ಮತ್ತು ಟೀಸರ್ ಚೆನ್ನಾಗಿ ಬಂದಿದ್ದು ನಿರೀಕ್ಷೆ ಮೂಡಿಸುವಂತಿದೆ. ಚಿತ್ರ ಕೂಡ ನಿರೀಕ್ಷೆಯಂತೆಯೇ ಅಷ್ಟೇ ಚೆನ್ನಾಗಿ ಬರಲಿ’ ಎಂಬ ಆಶಯ ವ್ಯಕ್ತಪಡಿಸಿದರು. ಚಿತ್ರದ ಕಥಾಹಂದರದ ಬಗ್ಗೆ ಮಾತಿಗಿಳಿದ ನಿರ್ದೇಶಕ ವಿನಯ್ ಭಾರದ್ವಾಜ್, ‘ಮುಂದಿನ ನಿಲ್ದಾಣ ಇವತ್ತಿನ ಜನರೇಶನ್‌ಗೆ ಹತ್ತಿರವಾದ ಚಿತ್ರ. ಚಿತ್ರದಲ್ಲಿ ಇಂದಿನ ಜನರೇಶನ್‌ನ ಮೂವರ ಕಥೆ ಇದೆ. ಈಗಿನ 18-40 ರ ವಯಸ್ಸಿನವರಿಗೆ ಚಿತ್ರ ಖಂಡಿತಾ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂಬ ವಿವರಣೆ ನೀಡಿದರು.
‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಮತ್ತು ಅನನ್ಯಾ ಕಶ್ಶಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರವೀಣ್ ತೇಜ್ ಚಿತ್ರದಲ್ಲಿ, ಪೋಟೋಗ್ರಫಿಯನ್ನ ಹವ್ಯಾಸವಾಗಿಟ್ಟುಕೊಂಡ, ಇವತ್ತಿನ ಯಂಗ್ ಜನರೇಶನ್‌ನ ಸಾಫ್ಟ್ವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಾಧಿಕಾ ನಾರಾಯಣ್, ಮೀರಾ ಶರ್ಮ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಟಿ ಅನನ್ಯಾ ಕಶ್ಯಪ್, ಅಹನಾ ಕಶ್ಯಪ್ ಎನ್ನುವ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇನ್ನು ಚಿತ್ರದ ಕಲರಿಂಗ್ ಕಾರ್ಯಗಳನ್ನು ಪ್ರತಿಷ್ಟಿತ ರೆಡ್ ಚಿಲ್ಲೀಸ್ ಸಂಸ್ಥೆ ಮಾಡಿದೆ. ಈ ನಿರ್ಮಾಪಕ ತಾರನಾಥ ಶೆಟ್ಟಿ ಮತ್ತಿತರರು ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದು, ಪ್ರೇಕ್ಷಕರ ಮುಂದೆ ತರುವ ಹುಮ್ಮಸ್ಸಿನಲ್ಲಿದ್ದಾರೆ.
ಜಿ.ಎಸ್.ಕಾರ್ತಿಕ ಸುಧನ್