Advertisement

Allu Arjun: ಕಾಲ್ತುಳಿತ ಪ್ರಕರಣ- ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್‌ ವಿಚಾರಣೆ

02:26 PM Dec 24, 2024 | Team Udayavani |

ಹೈದರಾಬಾದ್:‌ ಸಂಧ್ಯಾ ಥಿಯೇಟರ್‌ ನಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌(Actor Allu Arjun) ಅವರನ್ನು ಮಂಗಳವಾರ (ಡಿ.24) ಹೈದರಾಬಾದ್‌ ಪೊಲೀಸರು ವಿಚಾರಣೆ ನಡೆಸಿರುವುದಾಗಿ ವರದಿಯಾಗಿದೆ.

Advertisement

ಡಿಸೆಂಬರ್‌ 2ರಂದು ಸಂಧ್ಯಾ ಥಿಯೇಟರ್‌ ನಲ್ಲಿ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್‌ ವಿಚಾರಣೆಗೆ ಹಾಜರಾಗಬೇಕೆಂದು ಅಲ್ಲು ಅರ್ಜುನ್‌ ಗೆ ನೋಟಿಸ್‌ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.

ಈ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್‌ ಅವರು ಹೈದರಾಬಾದ್‌ ನಲ್ಲಿರುವ ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಗೆ ಹಾಜರಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಂಧ್ಯಾ ಥಿಯೇಟರ್‌ ನಲ್ಲಿ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತ ಘಟನೆಯಲ್ಲಿ ಮಹಿಳೆಯೊಬ್ಬರು ಸಾವ*ನ್ನಪ್ಪಿದ್ದು, ಆಕೆಯ ಪುತ್ರ ಗಾಯಗೊಂಡಿದ್ದ.

ಇದಕ್ಕೂ ಮೊದಲು ನಟ ಅಲ್ಲು ಅರ್ಜುನ್‌ ಅವರು, ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದರು. ಆದರೆ ಅಂದು ಥಿಯೇಟರ್‌ ನಲ್ಲಿ ಸಂಭವಿಸಿದ್ದ ಘಟನೆಯ ವಿಡಿಯೋವನ್ನು ಪೊಲೀಸ್‌ ಕಮಿಷನರ್‌ ಸಿ.ವಿ.ಆನಂದ್‌ ಬಿಡುಗಡೆಗೊಳಿಸಿದ ನಂತರ ನಟ ಅಲ್ಲು ಅರ್ಜುನ್‌ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿತ್ತು.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಸ್ಥರು ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಯಲ್ಲಿ ನಟ ಅಲ್ಲು ಅರ್ಜುನ್‌, ಅವರ ಭದ್ರತಾ ಸಿಬಂದಿಗಳು ಹಾಗೂ ಥಿಯೇಟರ್‌ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ವಿವಿಧ ಕಲಂಗಳ ಪ್ರಕಾರ ದೂರು ದಾಖಲಿಸಿದ್ದರು.

ಡಿಸೆಂಬರ್‌ 11ರಂದು ನಡೆದ ಹೈಡ್ರಾಮಾದಲ್ಲಿ ನಗರ ಪೊಲೀಸರು ಮಹಿಳೆಯ ಸಾವಿನ ಪ್ರಕರಣದ ಸಂಬಂಧ ನಟ ಅಲ್ಲು ಅರ್ಜುನ್‌ ಅವರ ಮನೆಗೆ ದಾಳಿ ನಡೆಸಿ ಬಂಧಿಸಿದ್ದರು. ಆದರೆ ಅದೇ ದಿನ ತೆಲಂಗಾಣ ಹೈಕೋರ್ಟ್‌ ಅಲ್ಲು ಅರ್ಜುನ್‌ ಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ನಂತರ ಡಿಸೆಂಬರ್‌ 14ರ ಬೆಳಗ್ಗೆ ಅಲ್ಲು ಅರ್ಜುನ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next