ಹಾಸನ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೇನಾ ಶಿಬಿರದ ಮೇಲೆ ಕಳೆದ ಬುಧವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿದ್ದ ಯೋಧ ಸಂದೀಪ್‌ಶೆಟ್ಟಿ (26)ಅವರ ಅಂತ್ಯಕ್ರಿಯೆ ಮಂಗಳವಾರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಮತ್ತು ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.
ಹಾಸನ ತಾಲೂಕಿನ ದೇವಿಹಳ್ಳಿಯ ಸಂದೀಪ್‌ಶೆಟ್ಟಿ ಅವರ ಮನೆಯ ಬಳಿಯಿರುವ ಜಮೀನಿನಲ್ಲಿ ದೇವಾಂಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಸೇನಾ ಮತ್ತು ಸರ್ಕಾರಿ ಗೌರವವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ದೇವಾಂಗ ಮಠದ ಶ್ರೀಗಳಾದ ದಯಾನಂದಪುರಿ ಸ್ವಾಮೀಜಿ ,ಹಾಸನದ ಜಿಲ್ಲಾಧಿಕಾರಿ ವಿ. ಚೈತ್ರಾ, ಎಸಿ ನಾಗರಾಜು ,ಪೊಲೀಸ್ ಅಧಿಕಾರಿಗಳು ಸೇರಿ ರಾಜಕೀಯ ಮುಖಂಡರು ಸಾವಿರಾರು ಗ್ರಾಮಸ್ಥರು ಅಂತ್ಯಕ್ರಿಯೆ ವೇಳೆ ಹಾಜರಿದ್ದು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.
ದೇವಿಹಳ್ಳಿಯ ಪುಟ್ಟರಾಜು ಮತ್ತು ಗಂಗಮ್ಮ ದಂಪತಿಗೆ ಸಂದೀಪ್ ಶೆಟ್ಟಿ ಹಾಗೂ ಒಬ್ಬ ಮಗಳಿದ್ದಾಳೆ. ಮಗಳ ಮದುವೆಯಾಗಿದೆ. ಹಾಸನದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುವರೆಗೆ ಓದಿದ್ದ ಸಂದೀಪ್‌ಶೆಟ್ಟಿ ಶಿಕ್ಷಕರಾಗುವ ಕನಸು ಕಂಡಿದ್ದರು. ಬಳಿಕ ಸೇನೆ ಸೇರಲು ನಿಶ್ಚಯಿಸಿ 2010ರಲ್ಲಿ ಸೇನೆ ಸೇರಿದ್ದರು. ಮೊದಲು ಗುಜರಾತ್ ಸೇನಾ ವಲಯದಲ್ಲಿ ಸೇವೆ ಸಲ್ಲಿಸಿದ್ದ ಸಂದೀಪ್ ಅವರು, ಬಳಿಕ ಜಮ್ಮು ಧಿ ಕಾಶ್ಮೀರಕ್ಕೆ ವರ್ಗವಾಗಿದ್ದರು. ಸೇನೆಗೆ ಸೇರಿದ್ದ 7 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಗ್ರಾಮಕ್ಕೆ ಬಂದಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಬ್ಬ ಹಾಗೂ ಗ್ರಾಮದ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸೇನೆಯ ಸೇವೆಗೆ ಹೋಗಿದ್ದರು.