Advertisement
ಸಂಜನಾ ವಿರುದ್ಧ ನಿರ್ದೇಶಕರ ಸಂಘ ಗರಂ
Related Articles
Advertisementಸಂಜನಾ ನನ್ನ ವಿರುದ್ಧ ಹನ್ನೆರಡು ವರ್ಷದ ಹಿಂದಿನ ಘಟನೆಯನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಅವರ ಈ ಆರೋಪಕ್ಕೆ ನಾನು ಪ್ರತಿಕ್ರಿಯಿಸದೆ ಇರಬಹುದಿತ್ತು. ಆದರೆ, ನನ್ನ ಮೌನ ಜನರ ಮನಸ್ಸಲ್ಲಿ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ, ಆಕೆಯ ವಿರುದ್ದ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ದೂರು ನೀಡಿದ್ದೇನೆ. 24 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ, ಚಿತ್ರರಂಗದ ಪ್ರತಿ ಹೆಣ್ಣನ್ನೂ ಗೌರವಿಸುತ್ತ ಬಂದಿದ್ದೇನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಅದು ಚೆನ್ನಾಗಿ ಗೊತ್ತಿದೆ. ಯಾರೆ ಆಗಲಿ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಈ ಥರ ಮಾತನಾಡಬಾರದು. ಸಂಜನಾ ಮಾಡಿರುವ ಆರೋಪಕ ನನ್ನ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ. ಈ ಆರೋಪಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ. – ರವಿ ಶ್ರೀವತ್ಸ, “ಗಂಡ ಹೆಂಡತಿ’ ಚಿತ್ರದ ನಿರ್ದೇಶಕ
ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ಜೋರಾಗುತ್ತಿರುವಂತೆ, ನಟಿ ಶ್ರುತಿ ಹರಿಹರನ್ ಮತ್ತೆ ಟ್ವಿಟ್ಟರ್‌ನಲ್ಲಿ ತಮ್ಮ ವಿರುದ್ದ ಮಾತನಾಡುತ್ತಿರುವವರನ್ನು ಮತ್ತೂಮ್ಮೆ ಕುಟುಕಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀರ್ಘ ಪತ್ರವನ್ನು ಪೋಸ್ಟ್ ಮಾಡಿರುವ ಶ್ರುತಿ ಹರಿಹರನ್ ತಮಗೆ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ಹೇಳುವುದರ ಜೊತೆಗೆ, ತಮ್ಮ ವಿರುದ್ದ ನಿಲುವು ಪ್ರದರ್ಶಿಸಿದ್ದ ಕನ್ನಡ ಚಿತ್ರರಂಗದ ಹಲವರಿಗೆ ತಿರುಗೇಟು ನೀಡಿದ್ದಾರೆ. “ಮುನಿರತ್ನ, ಚಿನ್ನೇಗೌಡರು, ಸಾ.ರಾ ಗೋವಿಂದು, ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಿರಿಯ ವ್ಯಕ್ತಿಗಳು ಕಲಾವಿದರ ಹಕ್ಕುಗಳನ್ನು ಕಾಪಾಡಬೇಕು. ಕನ್ನಡ ಚಿತ್ರರಂಗವನ್ನು ಸುರಕ್ಷಿತವಾಗಿಡುವುದು ನಿಮ್ಮ ಜವಾಬ್ದಾರಿ. ಕಲಾವಿದರ ಸಮಸ್ಯೆಯನ್ನು ವಾಸ್ತವ ಮತ್ತು ತಾರ್ಕಿಕ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು. ಪುರುಷರು, ಮಹಿಳೆಯರು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಬೇಕು. ಅದನ್ನು ಬಿಟ್ಟು ತಮಗಾದ ಅನ್ಯಾಯವನ್ನು ಹೇಳಿಕೊಂಡವರ ವಿರುದ್ದ ನಿಲ್ಲುವುದು ಸರಿಯಲ್ಲ. ಸಂಗೀತಾ ಭಟ್, ಸಂಜನಾ, ಏಕ್ತಾ, ಹೀಗೆ ಸಾಕಷ್ಟು ಮಹಿಳೆಯರು ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಆದರೆ ವಾಣಿಜ್ಯ ಮಂಡಳಿ ಆರೋಪ ಮಾಡಿದವರ ಚಾರಿತ್ರ್ಯವನ್ನು ಹರಣ ಮಾಡುತ್ತಿದೆ. ಯಾರು ಏನೇ ಹೇಳಿದರೂ, ನನಗೆ ಸರಿ ಅನಿಸಿದ್ದನ್ನು ನಾನು ಮಾಡಲು ಹೊರಟಿದ್ದೇನೆ. ನನ್ನ ಹೋರಾಟಕ್ಕಾಗಿ ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ’ ಎಂದಿದ್ದಾರೆ. ಅರ್ಜುನ್ ಸರ್ಜಾ ಪರ ಹರಿಪ್ರಿಯಾ ಬ್ಯಾಟಿಂಗ್ ನಟ ಅರ್ಜುನ್ ಸರ್ಜಾ ವಿರುದ್ದ ಶ್ರುತಿ ಹರಿಹರನ್ ಮಾಡಿರುವ “ಮಿ ಟೂ’ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಹರಿಪ್ರಿಯಾ, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ಹರಿಪ್ರಿಯಾ, “ನಾನು ತುಂಬ ಚಿಕ್ಕ ವಯಸ್ಸಿನವಳಾಗಿದ್ದಾಗಿನಿಂದಲೂ ಅರ್ಜುನ್ ಸರ್ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರು ಏನು ಎಂಬುದು ನನಗೆ ಚೆನ್ನಾಗಿ ಗೊತ್ತು ಅವರು ಈ ರೀತಿ ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ. “ನಾನು ತಮಿಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾದಾಗ ಅವರು ನನ್ನ ಜೊತೆ ಕನ್ನಡದಲ್ಲೆ ಮಾತನಾಡುತ್ತಿದ್ದರು. ಇದರಿಂದಾಗಿ ಅವರ ಜೊತೆ ಆ್ಯಕ್ಟ್ ಮಾಡಲು ತುಂಬ ಕಂಫರ್ಟ್ ಎನಿಸುತ್ತಿತ್ತು. ಇನ್ನು ಚಿತ್ರೀಕರಣದ ಸಮಯದಲ್ಲಿ ಅವರು ನನಗೆ ಮತ್ತು ನನ್ನ ತಾಯಿಗೆ ತುಂಬ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ನಾವು ಮಾತ್ರವಲ್ಲದೆ ಶೂಟಿಂಗ್ ಸೆಟ್‌ನಲ್ಲಿ ಇರುತ್ತಿದ್ದ ಎಲ್ಲಾ ಮಹಿಳೆಯರೊಂದಿಗೂ ಅವರು ಅಷ್ಟೇ ಗೌರವ ಕೊಡುತ್ತಿದ್ದರು. ಇಂಥಹವರ ಮೇಲೆ ಈ ಥರದ ಆರೋಪ ಬಂದಿರುವುದಕ್ಕೆ ನನಗೆ ತುಂಬ ನೋವಾಗಿದೆ. ಅರ್ಜುನ್ ಸರ್ಜಾ ನನ್ನ ಸಪೋರ್ಟ್ ಇದೆ’ ಎಂದಿದ್ದಾರೆ ಹರಿಪ್ರಿಯಾ. ಇಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ. ಮುಖಾಮುಖೀಯಾಗುತ್ತಾರಾ ಅರ್ಜುನ್, ಶ್ರುತಿ? ಅರ್ಜುನ್ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್ ಮಾಡಿರುವ “ಮಿ ಟೂ’ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸಂಜೆೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆಯಲಿದೆ. ಸಭೆಗೆ ಹಾಜರಾಗುವಂತೆ ನಟ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ಮತ್ತು ಸಂಬಂಧಿಸಿದವರಿಗೆ ಈಗಾಗಲೇ ಪತ್ರದ ಮೂಲಕ ತಿಳಿಸಲಾಗಿದೆ. ಸಂಧಾನ ಸಭೆಯ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, “ಹಿರಿಯ ಕಲಾವಿದ ಅರ್ಜುನ್ ಸರ್ಜಾ ಅವರ ಮೇಲೆ ಕೇಳಿ ಬಂದಿರುವ ಆರೋಪ ಇಡೀ ಕನ್ನಡ ಚಿತ್ರರಂಗಕ್ಕೇ ಒಂದು ಕಪ್ಪು ಚುಕ್ಕೆ. ಇದನ್ನು ಆದಷ್ಟು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸ್ಪಂದಿಸಿ, ಪರಿಹರಿಸಲು ವಾಣಿಜ್ಯ ಮಂಡಳಿ ಇದೆ. ಈ ಪ್ರಕರಣ ಕೂಡ ಸುಖಾಂತ್ಯವಾಗುವ ವಿಶ್ವಾಸವಿದೆ’ ಎಂದಿದ್ದಾರೆ. ಬೆಳವಣಿಗೆ ನೋವು ತಂದಿದೆ ಕನ್ನಡ ಚಿತ್ರರಂಗದಲ್ಲಿನ ಸದ್ಯದ ಬೆಳವಣಿಗೆ ನೋವು ತಂದಿದೆ. ಹಾಗಂತ ನಾನಿಲ್ಲಿ ಯಾರನ್ನೂ ದೂರುವುದಿಲ್ಲ. ಎಲ್ಲರೂ ಅವರವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಸದ್ಯ ವಿಚಾರ ಮಂಡಳಿಯಲ್ಲಿದ್ದು, ಅಲ್ಲಿ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ. – ಶಿವರಾಜಕುಮಾರ್, ನಟ