ಕನ್ನಡ ಚಿತ್ರರಂಗದಲ್ಲಿ ಮಿಂಚುವ ನಟಿಯರು ಇತ್ತೀಚೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ಶಾನ್ವಿ ಶ್ರೀವಾಸ್ತವ್ ಹೀಗೆ ಸಾಕಷ್ಟು ಹೆಸರುಗಳು ಇರುವಾಗ ಈಗ ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗುತ್ತಿದೆ. ಆ ಹೆಸರೇ ತಾನ್ಯಾ ಹೋಪ್.
ಕನ್ನಡ ಚಿತ್ರರಂಗದಲ್ಲಿ ತಾನ್ಯಾ ಹೋಪ್ ಅನ್ನುವುದಕ್ಕಿಂತ ಬಸಣ್ಣಿ ಅಂದ್ರೆ ಅನೇಕರಿಗೆ ಈ ಹುಡುಗಿ ಯಾರು ಅಂಥ ಥಟ್ಟನೆ ನೆನಪಾಗುತ್ತದೆ. “ಯಜಮಾನ’ ಚಿತ್ರದ “ಬಸಣ್ಣಿ ಬಾ…’ ಹಾಡಿಗೆ ಹೆಜ್ಜೆ ಹಾಕಿ ಸಿನಿಪ್ರಿಯರ ಮನಗೆದ್ದಿರುವ ಬಸಣ್ಣಿ ಉರೂಫ್ ತಾನ್ಯಾ ಹೋಪ್ ಕನ್ನಡದ ಜೊತೆ ಜೊತೆಗೇ ನಿಧಾನವಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.
“ಉದ್ಘರ್ಷ’, “ಯಜಮಾನ’ ಮತ್ತು “ಅಮರ್’ ಚಿತ್ರಗಳ ಬಳಿಕ ಕನ್ನಡ ಮಾತ್ರವಲ್ಲದೆ ಅಕ್ಕಪಕ್ಕದ ಚಿತ್ರರಂಗದಿಂದಲೂ ತಾನ್ಯಾಗೆ ಒಳ್ಳೆಯ ಅವಕಾಶಗಳು ಬರುತ್ತಿವೆ. ಸದ್ಯ ತಾನ್ಯಾ ಹೋಮ್, ಕನ್ನಡದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಆ್ಯಕ್ಷನ್ ಚಿತ್ರ “ಖಾಕಿ’ಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ತಾನ್ಯಾ ತೆಲುಗು ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ. ಹೌದು, ಚಿತ್ರರಂಗದ ಮೂಲಗಳ ಪ್ರಕಾರ ತಾನ್ಯಾ ಹೋಪ್ ತೆಲುಗು ನಟ ರವಿ ತೇಜಾ ಅಭಿನಯದ, ಆನಂದ್ ವಿ.ಐ ಆಕ್ಷನ್-ಕಟ್ ಹೇಳುತ್ತಿರುವ “ಡಿಸ್ಕೋ ರಾಜ’ ಚಿತ್ರದಲ್ಲಿ ರಿಸರ್ಚ್ ಸೈಂಟಿಸ್ಟ್ ಆಗಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಸದ್ಯ “ಡಿಸ್ಕೋ ರಾಜ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದ್ದು, ಎರಡನೇ ಹಂತದ ಚಿತ್ರೀಕರಣದಲ್ಲಿ ತಾನ್ಯಾ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ತಾನ್ಯಾ ಹೋಪ್ ಜೊತೆ ಕನ್ನಡದ ಮತ್ತೂಬ್ಬ ನಟಿ ನಭಾ ನಟೇಶ್ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದು, ಸದ್ಯ ಇಬ್ಬರು ನಾಯಕಿಯರ ಹೆಸರು ಫೈನಲ್ ಆಗಿದ್ದು, ಇನ್ನೊಬ್ಬ ನಾಯಕಿ ಯಾರೆಂದು ಇನ್ನಷ್ಟೆ ಗೊತ್ತಾಗಬೇಕಿದೆ. ಇಲ್ಲಿಯವರೆಗೆ ಅಲ್ಲೊಂದು ಇಲ್ಲೊಂದು ತೆಲುಗು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತಾನ್ಯಾಗೆ ಇದು ನಾಲ್ಕನೇ ತೆಲುಗು ಚಿತ್ರವಾಗಿದ್ದು, ಚಿತ್ರದಲ್ಲಿ ತಾನ್ಯಾ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆಯಂತೆ.
ಆದರೆ ಈ ಚಿತ್ರದ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡದ ಚಿತ್ರತಂಡ, ತಾನ್ಯಾ ಅವರ ಪಾತ್ರ ತೆರೆಮೇಲೆ ನೋಡಿ ನೋಡಬೇಕು ಎಂದಿದೆ. ಒಟ್ಟಾರೆ ಕನ್ನಡ ಸಿನಿಪ್ರಿಯರ ಮನಗೆದ್ದಿರುವ ಬಸಣ್ಣಿ ಎಷ್ಟರ ಮಟ್ಟಿಗೆ ತೆಲುಗು ಮಂದಿಯ ಮನಗೆಲ್ಲಲು ಯಶಸ್ವಿಯಾಗುತ್ತಾರೆ ಅನ್ನೋದು “ಡಿಸ್ಕೋ ರಾಜ’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.