ಕೊರೊನಾ ಎರಡನೇ ಅಲೆ ನಿಧಾನವಾಗಿ ತಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಅನ್‌ಲಾಕ್ ಪ್ರಕ್ರಿಯೆಗಳು ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ.ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರತಿಯೊಂದು ಕ್ಷೇತ್ರದವರುಕೂಡಾ ಈಗ ಅನ್‌ಲಾಕ್‌ಗೆ ಕಾಯುತ್ತಿದ್ದಾರೆ. ಇದರಲ್ಲಿಕನ್ನಡ ಚಿತ್ರರಂಗ ಕೂಡಾ ಸೇರಿದೆ.ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಚಟುವಟಿಕೆಗಳು ಕೂಡಾ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಸಿನಿಮಾ ಚಿತ್ರೀಕರಣದಿಂದ ಹಿಡಿದು ಸಿನಿಮಾ ಬಿಡುಗಡೆ, ಪೋಸ್ಟ್ ಪ್ರೊಡಕ್ಷನ್‌ಕೆಲಸಗಳೂ ನಿಂತಿವೆ. ಚಿತ್ರೀಕರಣದಲ್ಲಿದ್ದ ಸಾಲು ಸಾಲು ಸಿನಿಮಾಗಳು ಪ್ಯಾಕಪ್ ಆಗಿವೆ. ಹಾಗಾಗಿ, ಈಗ ಸಿನಿಮಾ ಮಂದಿ ಜುಲೈನತ್ತ ದೃಷ್ಟಿ ನೆಟ್ಟಿದ್ದಾರೆ. ಹೌದು, ಈ ತಿಂಗಳಲ್ಲಿ ಸರ್ಕಾರ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದರೆ, ಮೊದಲ ಹಂತವಾಗಿ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಕೊಡಬಹುದು ಎಂಬ ನಿರೀಕ್ಷೆಯೊಂದಿಗೆ ಚಿತ್ರರಂಗ ಜುಲೈನತ್ತ ಎದುರು ನೋಡುತ್ತಿದೆ.
ಇದನ್ನೂ ಓದಿ:ಎಸೆಸೆಲ್ಸಿ , ಪಿಯುಸಿ ಪರೀಕ್ಷೆ : ಇಂದು ನಿರ್ಧಾರ
ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೆ ಚಿತ್ರರಂಗಕ್ಕೆ ಸಣ್ಣ ಮಟ್ಟದ ಚೇತರಿಕೆ ಆರಂಭವಾಗುತ್ತದೆ. ಸಿನಿಮಾವನ್ನೇ ನಂಬಿಕೊಂಡಿರುವ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆಕೆಲಸ ಸಿಗುತ್ತದೆ. ಸದ್ಯ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭವಾದರೆ ಅವರೆಲ್ಲರ ಮೊಗದಲ್ಲಿ ನಗು ಮೂಡಬಹುದು. ಸದ್ಯಕಿರುತೆರೆ ಕೂಡಾ ಸಂಕಷ್ಟದಲ್ಲಿದೆ. ಒಂದಷ್ಟು ಧಾರಾವಾಹಿ ತಂಡಗಳು ಹೈದರಾಬಾದ್‌ಗೆ ಹೋಗಿ ಚಿತ್ರೀಕರಣದಲ್ಲಿ ತೊಡಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೆ ಚಿತ್ರರಂಗ ನಿಟ್ಟುಸಿರು ಬಿಡಬಹುದು.
ಸಿನಿ ಬಿಡುಗಡೆಯಲ್ಲಿ ಭಾರೀ ವ್ಯತ್ಯಯ: ಸದ್ಯ ಕೊರೊನಾ ಇಡೀ ದೇಶವನ್ನು ಕಾಡುತ್ತಿದೆ. ಹಲವಾರು ಉದ್ಯಮಗಳು ಕೊರೊನಾ ಹೊಡೆತಕ್ಕೆ ಸಿಕ್ಕಿ ಮಕಾಡೆ ಮಲಗಿವೆ. ಇನ್ನೊಂದಿಷ್ಟುಕ್ಷೇತ್ರಗಳು ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇದರಿಂದ ಚಿತ್ರರಂಗ ಕೂಡಾ ಹೊರತಾಗಿಲ್ಲ. ಮುಖ್ಯವಾಗಿ ಚಿತ್ರರಂಗದಲ್ಲಿ ಕೂಡಲೇ ತಲೆದೊರಲಿರುವ ಸಮಸ್ಯೆ ಎಂದರೆ ರಿಲೀಸ್. ಹೌದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷವೂ ಸಿನಿಮಾ ಬಿಡುಗಡೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದಕ್ಕೆಕಾರಣ ಮತ್ತದೇ ಕೊರೊನಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ. ಆದರೆ ಕೊರೊನಾದಿಂದಾಗಿ ಸದ್ಯ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಿನಿಟ್ರಾಫಿಕ್ ಜೋರಾಗಲಿದೆ. ಈಗಾಗಲೇ ಏಪ್ರಿಲ್, ಮೇ, ಜೂನ್, ಜುಲೈನಲ್ಲಿ ಬಿಡುಗಡೆಗೆ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಆದರೆ ಈ ಕೊರೊನಾದಿಂದಾಗಿ ಲೆಕ್ಕಾಚಾರ ತಲೆಕೆಳಗಾಗಿದೆ.
ಹೊಸಬರ, ಸ್ಟಾರ್‌ಗಳ … ಹೀಗೆ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ. ರಿಲೀಸ್‌ಗೆ ಅನುಮತಿ ಸಿಕ್ಕ ನಂತರ ಬಿಡುಗಡೆಯಲ್ಲಿ ಒಂದಷ್ಟು ವ್ಯತ್ಯಯ, ಗೊಂದಲಗಳಾಗುವ ಲಕ್ಷಣಗಳಿವೆ. ಇನ್ನುಕಳೆದ ವರ್ಷದಂತೆ ಈ ವರ್ಷವೂ ಸಿನಿಮಾ ಬಿಡುಗಡೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ.
ರವಿಪ್ರಕಾಶ್ ರೈ