ಬೆಂಗಳೂರು: ಸಮಾವೇಶಗಳು, ಕಾರ್ಯಕ್ರಮಗಳು, ಮಾರುಕಟ್ಟೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾನ್ಯದಂತೆ ಜನರು ಓಡಾಡಲು ಅವಕಾಶ ನೀಡಿದ್ದರೂ, ಚಿತ್ರಮಂದರಗಳಲ್ಲಿ ಮಾತ್ರ ಯಾಕೆ ಶೇ.50 ರಷ್ಟು ಜನರಿಗೆ ಅವಕಾಶ ನೀಡಿದ ಸರ್ಕಾರದ ಕ್ರಮದ ವಿರುದ್ಧ ಸ್ಯಾಂಡಲ್ ವುಡ್ ತಾರೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ.1ರಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ಸೂಚಿಸಿದ್ದರೂ, ರಾಜ್ಯ ಸರ್ಕಾರ ಮಾತ್ರ ಕೋವಿಡ್ ಎರಡನೇ ಅಲೆ ನೆಪವೊಡ್ಡಿ ಫೆ.28ರವರೆಗೆ ಥಿಯೇಟರ್ ಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅನುಮತಿ ನೀಡಿದೆ. ಇದು ಕನ್ನಡ ಚಿತ್ರರಂಗದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಥಿಯೇಟರ್‌ಗಳಲ್ಲಿ ಶೇ.50 ಸೀಟಿಗೆ ಮಾತ್ರ ಅವಕಾಶ:ಸರ್ಕಾರದ ದ್ವಂದ್ವನೀತಿಗೆ ಸಿನಿಮಂದಿ ಸಿಡಿಮಿಡಿ
ಸರ್ಕಾರದ ಈ ನಡೆಯನ್ನು ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಮುಂತಾದವರು ಪ್ರಶ್ನಿಸಿದ್ದಾರೆ.
“ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಏಕೆ 50% ನಿರ್ಬಂಧ?” ಎಂಬ ಒಕ್ಕಣೆಯಲ್ಲಿ “
ಉದಯವಾಣಿ” ಇಂದು ಅಭಿಯಾನ ಆರಂಭಿಸಿತ್ತು. ನಟ ಧ್ರುವ ಸರ್ಜಾ ಅವರು ಇದೇ ಪೋಸ್ಟರ್ ನ್ನು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಚಿತ್ರರಂಗದ ಹಲವರು ಚಿತ್ರ ಮಂದಿರದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಒತ್ತಾಯ ನಡೆಸಿದ್ದಾರೆ.
ಹಿರಿಯ ನಟ ಶಿವರಾಜ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ, ಎಲ್ಲರಿಗೂ ನಾರ್ಮಲ್, ನಮಗ್ಯಾಜೆ ಅಬ್ ನಾರ್ಮಲ್. ಚಿತ್ರಮಂದಿರದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿ, ಖಾಸಗಿ ಕಾರ್ಯಕ್ರಮಗಳು, ಪೂಜಾ ಸ್ಥಳಗಳು, ಸಂಚಾರ ವ್ಯವಸ್ಥೆ, ಪ್ರವಾಸಿ ತಾಣಗಳು, ಮಾರುಕಟ್ಟೆಗಳಲ್ಲಿ ಅವಕಾಶ ನೀಡಿರುವಾಗ, ಥಿಯೇಟರ್ ಗಳಲ್ಲಿ ಯಾಕೆ ನೀಡಿಲ್ಲ ಎಂದಿದ್ದಾರೆ.
ನಟರಾದ ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಧನಂಜಯ್, ನಿರ್ದೇಶಕ ಪ್ರಶಾಂತ್ ನೀಲ್, ಪ್ರೀತಮ್ ಗುಬ್ಬಿ, ಹೇಂಮಂತ್ ರಾವ್, ಸಿಂಪಲ್ ಸುನಿ ನಿರ್ಮಾಪಕ ಕಾರ್ತಿಕ್ ಗೌಡ ಮುಂತಾದವರು ಟ್ವೀಟ್ ಮಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.