ಕನ್ನಡ ಚಿತ್ರರಂಗ ಒಂದು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಅದು ಒಬ್ಬ ನಟನ ಸಿನಿಮಾಕ್ಕೆ ಬೇರೆ ನಟರು ಸಾಥ್ ಕೊಡುವುದು. ಈ ಮೂಲಕ ನಾವೆಲ್ಲರೂ ಒಂದು ಎಂಬ ಸಂದೇಶ ರವಾನಿಸುತ್ತಿದ್ದಾರೆ ನಮ್ಮ ಸ್ಯಾಂಡಲ್‌ವುಡ್ ಸ್ಟಾರ್.
ಇತ್ತೀಚೆಗೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ಬೇರೆ ನಟರ ಸಿನಿಮಾಗಳ ಆಡಿಯೋ, ಟೀಸರ್, ಟ್ರೇಲರ್ ರಿಲೀಸ್‌ಗಳಿಗೆ ಸ್ಯಾಂಡಲ್‌ವುಡ್‌ನ ನಟರೆಲ್ಲರೂ ಒಟ್ಟಿಗೆ ಹರಸಿ ಬರುತ್ತಾರೆ. ಇಂತಹ ಒಂದು ಉತ್ತಮ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಾಕ್ಷಿಯಾಗಿದ್ದು ಸುದೀಪ್ ನಟನೆಯ “ವಿಕ್ರಾಂತ್ ರೋಣ’ ಚಿತ್ರದ ಪ್ರೀ ಟ್ರೇಲರ್ ರಿಲೀಸ್ ಕಾರ್ಯಕ್ರಮ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ “ವಿಕ್ರಾಂತ್ ರೋಣ’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗುತ್ತಿದೆ. ಆದರೆ, ಒಂದು ದಿನ ಮುಂಚೆ (ಜೂ.22) ಚಿತ್ರತಂಡ ಪ್ರೀ ಟ್ರೇಲರ್ ಇವೆಂಟ್ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಅನೇಕ ಮುಂಚೂಣಿ ನಟರು ಬಂದು ಶುಭ ಹಾರೈಸಿದರು.
ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಸೃಜನ್ ಲೋಕೇಶ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ, ನಿರ್ದೇಶಕರಾದ ಯೋಗರಾಜ್ ಭಟ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಸಾಕ್ಷಿಯಾದರು. ಟ್ರೇಲರ್ ನೋಡಿದ ಎಲ್ಲರಿಂದಲೂ ಒಂದೇ ಮಾತು, “ಇದು ಕನ್ನಡ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾದ ನೆಕ್ಸ್ಟ್ ಲೆವೆಲ್ ಸಿನಿಮಾ’ ಎಂಬುದು.
ಇದನ್ನೂ ಓದಿ:ಇಂದಿನಿಂದ ರಿಷಭ್ ‘ಹರಿಕಥೆ ಅಲ್ಲ ಗಿರಿಕಥೆ’ ಶುರು
ಅದರಲ್ಲೂ ನಟ ಶಿವರಾಜ್‌ಕುಮಾರ್, ಸುದೀಪ್ ಹಾಗೂ ತಮ್ಮ ನಡುವಿನ ನಂಟಿನ ಬಗ್ಗೆ ಮಾತನಾಡುವ ಜೊತೆಗೆ ವಿಕ್ರಾಂತ್ ರೋಣ ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದರು. ಜೊತೆಗೆ ಚಿತ್ರದ “ರ..ರ.. ರಕ್ಕಮ್ಮ’ ಹಾಡಿಗೆ ಸ್ಟೆಪ್ ಕೂಡಾ ಹಾಕಿದರು.
ಇದೇ ವೇಳೆ ಇಡೀ ಚಿತ್ರತಂಡ ಚಿತ್ರದ ಬಗ್ಗೆ ಮಾತನಾಡಿತು. ರವಿಚಂದ್ರನ್, ಶಿವಣ್ಣ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಬಗ್ಗೆ ಮಾತನಾಡಿದರೆ, ರಕ್ಷಿತ್, ರಿಷಭ್, ರಾಜ್ ಸೇರಿದಂತೆ ಇತರ ನಟರು ಸುದೀಪ್ ಅವರ ಸಿನಿಮಾ ಪ್ರೀತಿ, ಅವರು ಸ್ಫೂರ್ತಿಯಾಗುವ ರೀತಿಯನ್ನು ಕೊಂಡಾಡಿದರು. “ನಾನು ಈ ಸಿನಿಮಾ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಸುದೀಪ್ ಅವರಿಗೆ ಕಥೆ ಹೇಳಿದಾಗ, ಮಾಡುವುದಾದರೆ ಈ ಸಿನಿಮಾವನ್ನು ಬೇರೆ ಲೆವೆಲ್‌ಗೆ ಮಾಡಬೇಕು ಅಂದರು. ಆಗ ಅರ್ಥವಾಗಲಿಲ್ಲ. ಈಗ ಟ್ರೇಲರ್ ನೋಡಿದಾಗ ಸಿನಿಮಾ ಯಾವ ಮಟ್ಟಕ್ಕೆ ಮೂಡಿಬಂದಿದೆ ಎಂದು ಗೊತ್ತಾಗುತ್ತದೆ’ ಎಂದು ಸಿನಿಮಾ ಬಗ್ಗೆ ಹೇಳಿದರು ನಿರ್ಮಾಪಕ ಜಾಕ್ ಮಂಜು.
ನಿರ್ದೇಶಕ ಅನೂಪ್ ಭಂಡಾರಿ, ರೋಣ ಒಂದು ವಿಶೇಷ ಅನುಭವ ಕೊಡುವ ಸಿನಿಮಾ ಎನ್ನಲು ಮರೆಯಲಿಲ್ಲ. ಚಿತ್ರದ ರಕ್ಕಮ್ಮ ಹಾಡಿನಲ್ಲಿ ಕಾಣಿಸಿಕೊಂಡ ಜಾಕ್ವೇಲಿನ್ ಫರ್ನಾಂಡಿಸ್ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು.
ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್, ಮೊದಲು ನಾನು ಈ ಕಥೆ ಕೇಳಲು ಕಾರಣ ನನ್ನ ಪತ್ನಿ ಪ್ರಿಯಾ. ಆ ನಂತರ ಅನೂಪ್ ಈ ಕಥೆಯನ್ನು ಸಣ್ಣ ಸಣ್ಣ ಸೂಕ್ಷ್ಮ ಅಂಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದ ಸೆಟ್‌ವರ್ಕ್, ಕ್ಯಾಮರಾ, ಮ್ಯೂಸಿಕ್ ಎಲ್ಲವೂ ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ಆಯಾ ಡಿಪಾರ್ಟ್‌ಮೆಂಟ್‌ನವರ ಶ್ರಮ. ಯಾರೂ ಏನೇ ಕನಸು ಕಂಡರೂ, ಈ ಸಿನಿಮಾ ಆಗೋಕೆ ಮುಖ್ಯ ಕಾರಣ ನಿರ್ಮಾಪಕ, ನನ್ನ ಗೆಳೆಯ ಜಾಕ್ ಮಂಜು. ಅವರಿಲ್ಲದೇ ಈ ಸಿನಿಮಾ ಆಗಲು ಸಾಧ್ಯವಿಲ್ಲ. ಸಿನಿಮಾಕ್ಕಾಗಿ ಆತನ ಜೊತೆ ಸಾಕಷ್ಟು ಜಗಳವಾಡಿದ್ದೇನೆ. ಆತನ ಸಿನಿಮಾ ಪ್ರೀತಿಯಿಂದ ಇವತ್ತು “ವಿಕ್ರಾಂತ್ ರೋಣ’ ಈ ಮಟ್ಟಕ್ಕೆ ಬಂದಿದೆ ಎಂದರು.