Advertisement

ವರ್ಕ್‌ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್‌ ನಲ್ಲಿ ಬಿಝಿ

08:19 AM Jul 16, 2021 | Team Udayavani |

ಸಿನಿಮಾ ಶೂಟಿಂಗ್‌ ಅಂದ್ರೆ ಹಾಗೆ, ಸ್ಟಾರ್‌ ಹೀರೋ-ಹೀರೋಯಿನ್‌, ಹತ್ತಾರು ಜನ ಸಹ ಕಲಾವಿದರು, ಲೈಟ್‌ಮೆನ್ಸ್‌, ಸೆಟ್‌ ಹುಡುಗರು, ಯುನಿಟ್‌ ವಾಹನಗಳು, ದೂರದಲ್ಲೆಲ್ಲೋ ಲೈಟಾಗಿ ಕಿವಿಗಪ್ಪಳಿಸುವ ಜನರೇಟರ್‌ ಸೌಂಡ್‌, ಅಂದುಕೊಂಡಿದ್ದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುವ ಕೆಲಸದಲ್ಲಿ ಕ್ಯಾಮರಾಮನ್‌, ಶಾಟ್‌ ಓ.ಕೆ ಮಾಡಲು ರೆಡಿಯಾಗಿ ಕ್ಯಾಪ್‌ ತೊಟ್ಟು ಕೂತ ಡೈರೆಕ್ಟರ್‌. ಇದೆಲ್ಲವೂ ಸಿನಿಮಾ ಶೂಟಿಂಗ್‌ನಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯಗಳು. ಚಿತ್ರರಂಗದ ಮಟ್ಟಿಗೆ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಎಲ್ಲರಿಗೂ ಸಿನಿಮಾದ ಶೂಟಿಂಗ್‌ ಅಂದ್ರೆ ಅದೊಂಥರಾ ಸೆಲೆಬ್ರೇಷನ್‌ ಇದ್ದಂತೆ. ತಮ್ಮ ಕನಸಿನ ಸ್ಕ್ರಿಪ್ಟ್ಗೆ ದೃಶ್ಯರೂಪ ಕೊಟ್ಟು ಅದಕ್ಕೆ ಜೀವ, ಭಾವ ಎಲ್ಲವನ್ನೂ ತುಂಬುವ ಪ್ರಕ್ರಿಯೆ ಶೂಟಿಂಗ್.

Advertisement

ತಿಂಗಳುಗಳ ಕಾಲ ಮಾಡಿಕೊಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಹಂತ ಅದು. ಸಿನಿಮಾಗಳ ಶೂಟಿಂಗ್‌ ನಡೆಯುತ್ತಿದೆ ಅಂದ್ರೆ, ಚಿತ್ರರಂಗದ ಸಕ್ರಿಯವಾಗಿದೆ, ಚಲನಶೀಲವಾಗಿದೆ ಎಂದೇ ಅರ್ಥ. ಆದ್ರೆ ಕೋವಿಡ್‌ ಎರಡನೇ ಅಲೆಯ ಆತಂಕದಿಂದ ಸರ್ಕಾರ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದ್ದರಿಂದ, ಸುಮಾರು ಮೂರು ತಿಂಗಳು ಬಹುತೇಕ ಚಿತ್ರಗಳ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿತ್ತು. ಒಂದೆಡೆ ಚಿತ್ರೀಕರಣವಿಲ್ಲ, ಮತ್ತೂಂದೆಡೆ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನವಿಲ್ಲ. ಹೀಗಾಗಿ ಇಡೀ ಚಿತ್ರರಂಗ ಕೋವಿಡ್‌ನಿಂದ ಎರಡನೇ ಬಾರಿಗೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಈಗ ಮತ್ತೆ ಎಲ್ಲವೂ ಮೊದಲಿನಂತಾಗುತ್ತಿದ್ದು, ಚಿತ್ರೀಕರಣ ಆರಂಭವಾಗಿದೆ. ಮುಖ್ಯವಾಗಿ ಸ್ಟಾರ್‌ಗಳು ಚಿತ್ರೀಕರಣದತ್ತ ಮುಖ ಮಾಡುತ್ತಿದ್ದಾರೆ.

ನಿಧಾನವಾಗಿ ಕಳೆಗಟ್ಟುತ್ತಿದೆ ಶೂಟಿಂಗ್‌

ಜೂನ್‌ ಕೊನೆಗೆ ಮತ್ತೆ ಅನ್‌ಲಾಕ್‌ ಪ್ರಕ್ರಿಯೆ ಶುರುವಾಗಿದ್ದರಿಂದ, ಜುಲೈ ಮೊದಲ ವಾರದಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ ಈಗಾಗಲೇ ಅರ್ಧಕ್ಕೆ ಚಿತ್ರೀಕರಣ ನಿಲ್ಲಿಸಿರುವ ಚಿತ್ರತಂಡಗಳು ಮತ್ತೆ ನಿಧಾನವಾಗಿ ಚಿತ್ರೀಕರಣ ಆರಂಭಿಸುತ್ತಿವೆ. ಸುಮಾರು ಮೂರು ತಿಂಗಳಿನಿಂದ ಕೆಲಸವಿಲ್ಲದೆ ಕುಳಿತಿದ್ದ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಮತ್ತೆ ಹೊಸ ಜೋಶ್‌ನಲ್ಲಿ ಶೂಟಿಂಗ್‌ನತ್ತ ಮುಖ ಮಾಡುತ್ತಿದ್ದಾರೆ. ಸದ್ಯಕ್ಕೆ ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶವಿರುವುದರಿಂದ, ಬಹುತೇಕ ಚಿತ್ರತಂಡಗಳು

ತಮ್ಮ ಶೂಟಿಂಗ್‌ ಶೆಡ್ನೂಲ್‌ ನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿವೆ. ಇನ್ನು ವಿದೇಶಗಳಿಗೆ ಚಿತ್ರೀಕರಣಕ್ಕೆ ತೆರಳಲು ಇನ್ನೂ ಕೆಲವು ತಿಂಗಳು ಅವಕಾಶ ಸಿಗುವ ಖಾತ್ರಿ ಇಲ್ಲದಿರುವುದರಿಂದ, ಬಿಗ್‌ ಬಜೆಟ್‌ ಮತ್ತು ಬಿಗ್‌ ಸ್ಟಾರ್‌ ಕಾಸ್ಟಿಂಗ್‌ನ ಕೆಲವು ಸಿನಿಮಾ ತಂಡಗಳು ವಿದೇಶಕ್ಕೆ ಹಾರುವ ತಮ್ಮ ಯೋಚನೆಯನ್ನು ನಿಧಾನವಾಗಿ ಕೈಬಿಡುತ್ತಿವೆ. ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ತಮಗಿರುವ ಸೀಮಿತ ಚೌಕಟ್ಟಿನೊಳಗೆ ಹೇಗೆ ಸಿನಿಮಾದ ಶೂಟಿಂಗ್‌ ಮುಗಿಸಿಕೊಳ್ಳಬೇಕು ಎಂಬುದರತ್ತ ನಿರ್ಮಾಪಕರು, ನಿರ್ದೇಶಕರು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಒಟ್ಟಾರೆ ಸ್ಯಾಂಡಲ್‌ವುಡ್‌ನ‌ಲ್ಲಿ ಮತ್ತೆ ಶೂಟಿಂಗ್‌ ಚಟುವಟಿಕೆಗಳು ಶುರುವಾಗಿದ್ದು, ಬಹುತೇಕರ ಮುಖದಲ್ಲಿ ಮಂದಹಾಸಕ್ಕೆಕಾರಣವಾಗಿದೆ.

Advertisement

ಶೂಟಿಂಗ್‌ ಮೂಡ್‌ಗೆ ಸ್ಟಾರ್

ಇನ್ನು ಸುಮಾರು ಮೂರು ತಿಂಗಳಿನಿಂದ ಶೂಟಿಂಗ್‌ ಇಲ್ಲದೆ ಲಾಕ್‌ಡೌನ್‌ ನಿಂದ ಮನೆಯಲ್ಲೇ ಲಾಕ್‌ ಆಗಿದ್ದ ಬಹುತೇಕ ಸ್ಟಾರ್ ಹೀರೋ, ಹೀರೋಯಿನ್ಸ್‌ ಮತ್ತೆ ವರ್ಕ್‌ ಮೂಡ್‌ಗೆ ಜಾರಿದ್ದಾರೆ. ಅದರಲ್ಲೂ ಸದ್ಯಕ್ಕೆ ಮಟ್ಟಿಗೆ ತಮ್ಮ ಹೊಸ ಸಿನಿಮಾಗಳನ್ನು ಅನೌನ್ಸ್‌ ಮಾಡುವುದಕ್ಕಿಂತ ಹೆಚ್ಚಾಗಿ, ತಮ್ಮ ಕೈಯಲ್ಲಿರುವ ಸಿನಿಮಾಗಳ ಶೂಟಿಂಗ್‌ ಮೊದಲು ಮುಗಿಸುವುದರತ್ತ ಬಹುತೇಕ ಸ್ಟಾರ್ಚಿತ್ತ ಹರಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್‌ ಮುಗಿದ ಬಳಿಕವಷ್ಟೇ ಹೊಸ ಸಿನಿಮಾಗಳ ಬಗ್ಗೆ ಮಾತು ಅಂತಿದ್ದಾರೆ ಬಹುತೇಕ ಸ್ಟಾರ್. ಕನ್ನಡದ ಬಹುತೇಕ ಸ್ಟಾರ್ಶೂ ಟಿಂಗ್‌ಅಖಾಡಕ್ಕೆ ಧುಮುಕಿದ್ದಾರೆ.

ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ “ಭೈರಾಗಿ’ ಚಿತ್ರದ ಚಿತ್ರೀಕರಣದಲ್ಲಿ, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ “ಜೇಮ್ಸ್‌’, ಕಿಚ್ಚ ಸುದೀಪ್‌ “ವಿಕ್ರಾಂತ್‌ ರೋಣ’, ಉಪೇಂದ್ರ “ಲಗಾಮ್‌’ ಮತ್ತು “ಕಬ್ಜ’, ಗೋಲ್ಡನ್‌ ಸ್ಟಾರ್‌ ಗಣೇಶ್‌ “ಸಖತ್‌’ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಧ್ರುವ ಸರ್ಜಾ, ಕ್ರೇಜಿಸ್ಟಾರ್‌ ರವಿಚಂದ್ರನ್‌ “ದೃಶ್ಯ-2′, ಪ್ರಜ್ವಲ್‌ “ವೀರಂ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ನಾಯಕಿಯರಾದ ಹರಿಪ್ರಿಯಾ, ಅದಿತಿ ಪ್ರಭುದೇವ, ರಚಿತಾ ರಾಮ್‌ ಮೊದಲಾದವರು ಕೂಡ ಈಗಾಗಲೇ ಅರ್ಧಕ್ಕೆ ನಿಂತಿರುವ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಮುಂದುವರೆಯುತ್ತಿದ್ದಾ

ಸೆಟ್‌ನಲ್ಲಿ ಮೂಡಿದ ಸಂಭ್ರಮ, ಥಿಯೇಟರ್‌ನಲ್ಲಿ ಯಾವಾಗ?

ಸದ್ಯಕ್ಕೆ ಸಿನಿಮಾಗಳ ಚಿತ್ರೀಕರಣ ಮತ್ತೆ ಆರಂಭವಾಗಿರುವುದರಿಂದ, ಸಿನಿಮಾಗಳ ಶೂಟಿಂಗ್‌ ಸೆಟ್‌ ಗಳು ಹಿಂದಿನಂತೆ ಕಳೆಗಟ್ಟುತ್ತಿದೆ. ರಾಜ್ಯದ ಪ್ರಮುಖ ಸ್ಟುಡಿಯೋಗಳಲ್ಲಿ ಮತ್ತೆ ಓಡಾಟ ಶುರುವಾಗಿದೆ. ಆದರೆ ಸಿನಿಮಾಗಳ ಶೂಟಿಂಗ್‌ ಸೆಟ್‌ನಲ್ಲಿ ಮೂಡುತ್ತಿರುವ ಈ ಸಂಭ್ರಮ ಥಿಯೇಟರ್‌ಗಳಲ್ಲಿ ಯಾವಾಗ ಅನ್ನೋದನ್ನ ಸಿನಿಪ್ರಿಯರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಎದುರು ನೋಡುತ್ತಿದ್ದಾರೆ. ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ ಬಳಿಕಕಳೆದ ಬಾರಿಯಂತೆ, ಈ ಬಾರಿಯೂ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಬಹುದು ಎಂಬ ನಿರೀಕ್ಷೆ ಚಿತ್ರೋದ್ಯಮದಲ್ಲಿತ್ತು.

ಆದರೆ ಇತ್ತೀಚೆಗೆ ಬಿಡುಗಡೆಯಾದ ಅನ್‌ಲಾಕ್‌ ನಿಯಮಾವಳಿಯಲ್ಲೂ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದರಿಂದ ಸಹಜವಾಗಿಯೇ ಅದು ಸಿನಿಮಾ ಮಂದಿಯ ಬೇಸರಕ್ಕೆಕಾರಣವಾಗಿದೆ.ಕೋವಿಡ್‌ ಆತಂಕದ ನಡುವೆಯೂ ಮಾರುಕಟ್ಟೆ, ಮಾಲ್‌ಗ‌ಳು, ಬಸ್‌, ಮೆಟ್ರೋ, ರೈಲ್ವೇ, ಹೋಟೆಲ್‌, ರೆಸ್ಟೋರೆಂಟ್‌, ಪಾರ್ಕ್‌ ಹೀಗೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಷರತ್ತು ಬದ್ದ ಪ್ರವೇಶ ನೀಡಿರುವಾಗ ಈ ಅವಕಾಶ ಥಿಯೇಟರ್‌ಗಳಿಗೆ ಯಾಕಿಲ್ಲ? ಅನ್ನೋದು ಚಿತ್ರರಂಗದ ಬಹುತೇಕ ಮಂದಿಯ ಪ್ರಶ್ನೆ. ಕಳೆದ ಬಾರಿಯಂತೆ ಈ ಬಾರಿಯೂ ಥಿಯೇಟರ್‌ಗಳಲ್ಲಿ ಕನಿಷ್ಟ50%ರಷ್ಟಾದರೂ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ, ಈಗಾಗಲೇ ಎರಡು ವರ್ಷದಿಂದ ಬಿಡುಗಡೆಯಾಗದೆ ಕಾದು ಕುಳಿತಿರುವ ನೂರಾರು ಸಿನಿಮಾಗಳಿಗೆ ಬಿಡುಗಡೆಯ ಭಾಗ್ಯವಾದರೂ ಸಿಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲಿಯೇ ನಿರ್ಧಾರಕೈಗೊಳ್ಳಲಿ ಅನ್ನೋದು ಚಿತ್ರರಂಗದ ಒತ್ತಾಯವಾಗಿದೆ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next