ಕೋವಿಡ್ ಆತಂಕದಿಂದಾಗಿ ವಿಧಿಸಲಾಗಿದ್ದ ಸಿನಿಮಾಗಳ ಶೂಟಿಂಗ್ ಮೇಲಿನ ನಿರ್ಬಂಧ ಕೊನೆಗೂ ತೆರವಾಗಿದೆ. ಸಿನಿಮಾ ಶೂಟಿಂಗ್‌ಗೆ ಗ್ರೀನ್ ಸಿಗ್ನಲ್ ನೀಡಿರುವ ಕೇಂದ್ರ ಸರ್ಕಾರ, ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಷರತ್ತುಬದ್ಧ ಅನುಮತಿ ನೀಡಿದೆ. ಇನ್ನು ಎಲ್ಲವನ್ನು ತಯಾರಿ ಮಾಡಿಕೊಂಡು, ಕಳೆದ ಆರು ತಿಂಗಳಿನಿಂದ ಸಿನಿಮಾ ಶೂಟಿಂಗ್ ಮಾಡಲು ಕಾದು ಕುಳಿತಿದ್ದ ಹೊಸಚಿತ್ರಗಳ ನಿರ್ಮಾಪಕರು, ನಿರ್ದೇಶಕರಿಗೆ ಈ ಸುದ್ದಿ ಸಹಜವಾಗಿಯೇ ಒಂದಷ್ಟು ಖುಷಿ ನೀಡಿದೆ. ಈ ಬಗ್ಗೆ ಚಿತ್ರೀಕರಣಕ್ಕೆ ರೆಡಿಯಾಗಿ ನಿಂತಿರುವ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಏನಂತಾರೆ ಅನ್ನೋದು ನಿಮ್ಮ ಮುಂದೆ…
ನಮ್ಮ ಪ್ಲಾನ್ ಪ್ರಕಾರ ಇಷ್ಟೊತ್ತಿಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಬೇಕಿತ್ತು. ಆದ್ರೆ ಶೂಟಿಂಗ್ ಮಾಡಲು ಅನುಮತಿ ಇಲ್ಲವಾಗಿದ್ದರಿಂದ, ಅನಿವಾರ್ಯವಾಗಿ ಇಷ್ಟು ದಿನ ಕಾಯಬೇಕಾಯ್ತು. ಈಗ ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಸಿಕ್ಕಿದ್ದು ಖುಷಿ ಕೊಟ್ಟಿದೆ. ಸರ್ಕಾರದ ಗೈಡ್‌ಲೈನ್ಸ್ ಇಟ್ಟುಕೊಂಡು ಸೆಪ್ಟೆಂಬರ್‌ನಿಂದ ನಮ್ಮ ಹೊಸಚಿತ್ರದ ಶೂಟಿಂಗ್ ಶುರು ಮಾಡಲಿದ್ದೇವೆ.
-ಭರತ್. ಜಿ, ನಿರ್ದೇಶಕ
ಸರ್ಕಾರ ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಕೊಟ್ಟಿದ್ದು ಸಮಾಧಾನ ಕೊಟ್ಟಿದೆ. ಕೋವಿಡ್ ದಿಂದಾಗಿ ರವಿಚಂದ್ರನ್ – ಉಪೇಂದ್ರ ಕಾಂಬಿನೇಶನ್‌ನಲ್ಲಿ ನಾವು ಮಾಡುತ್ತಿದ್ದ ಹೊಸ ಸಿನಿಮಾದ ಶೂಟಿಂಗ್‌ನ ಅರ್ಧಕ್ಕೆ ನಿಲ್ಲಿಸಿದ್ದೆವು. ಈಗ ಪರ್ಮಿಷನ್ ಸಿಕ್ಕ ಮರುದಿನವೇ ಮತ್ತೆ ಶೂಟಿಂಗ್ ಶುರು ಮಾಡಿದ್ದೇವೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರುತ್ತೇವೆ.
-ಕನಕಪುರ ಶ್ರೀನಿವಾಸ್, ನಿರ್ಮಾಪಕರು
ಸಿನಿಮಾ ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಕೊಟ್ಟಿದ್ದು ತುಂಬ ಒಳ್ಳೆಯ ನಿರ್ಧಾರ. ಕೋವಿಡ್ ಇದ್ರೂ ಯಾವ ಕೆಲಸವೂ ನಿಂತಿಲ್ಲ. ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿದೆ. ಹಾಗಿರುವಾಗ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರೆ, ಅದನ್ನೇ ನಂಬಿಕೊಂಡಿರುವವರ ಕಥೆ ಏನಾಗ್ಬೇಕು? ಸಾಮಾನ್ಯವಾಗಿ ಸಿನಿಮಾ ಶೂಟಿಂಗ್‌ನಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತೆ. ಈಗ ಇನ್ನಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು ಶೂಟಿಂಗ್ ಮಾಡೋಣ. ಸದ್ಯ ಶೂಟಿಂಗ್‌ಗೆ ಪರ್ಮಿಷನ್ ಸಿಕ್ಕಿರೋದ್ರಿಂದ ಸೆಪ್ಟೆಂಬರ್ ಮೊದಲವಾರದಿಂದಲೇ ನಮ್ಮ “ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ ಶೂಟಿಂಗ್ ಶುರು ಮಾಡುತ್ತಿದ್ದೇವೆ.
– ರಿಷಭ್ ಶೆಟ್ಟಿ, ನಟ ಕಂ ನಿರ್ದೇಶಕ
ಇಷ್ಟು ದಿನ ಶೂಟಿಂಗ್ ಇಲ್ಲದೆ ಆ ವಾತಾವರಣವನ್ನು ನಾನು ಮಿಸ್ ಮಾಡಿಕೊಂಡಿದ್ದೆ. ಈಗ ಸರ್ಕಾರ ಮತ್ತೆ ಶೂಟಿಂಗ್ ಶುರು ಮಾಡೋದಕ್ಕೆ ಪರ್ಮಿಷನ್ ಕೊಟ್ಟಿದ್ದು ಸ್ವಾಗತಾರ್ಹ. ಆದಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು ಶೂಟಿಂಗ್ ಮಾಡಿದ್ರೆ ಎಲ್ಲರಿಗೂ ಒಳ್ಳೆಯದು. ಯಾರಿಗೂ ತೊಂದರೆಯಾಗದಂತೆ ಶೂಟಿಂಗ್ ಮಾಡುವ ಜವಾಬ್ದಾರಿ ಈಗ ನಮ್ಮ ಮೇಲಿದೆ. ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಕೊಟ್ಟಿರುವಂತೆ, ಮುಂದೆ ಥಿಯೇಟರ್ ಓಪನ್ ಮಾಡೋದಕ್ಕೂ ಪರ್ಮಿಷನ್ ಸಿಗುತ್ತದೆ ಅನ್ನೋ ನಂಬಿಕೆಯಿದೆ.
-ರಿಷಿ, ನಟ