ಈ ವಾರ ಕನ್ನಡದಲ್ಲಿ ಬರೋಬ್ಬರಿ ಏಳು ಚಿತ್ರಗಳು ತೆರೆ ಕಾಣುತ್ತಿದೆ. ಯಾವುದೇ ಸ್ಟಾರ್ ಸಿನಿಮಾ ಇರದ ಕಾರಣ ಬಹುತೇಕ ಹೊಸಬರೇ ನಿರ್ಮಿಸುವ ಚಿತ್ರಗಳು ಬಿಡುಗಡೆ ಕಾಣುತ್ತಿವೆ.
ದ್ವಂದ್ವ
ಪೋಟೋಗ್ರಾಫಿಕ್ ಮೆಮೋರಿ ಎಂಬ ವಿಚಿತ್ರ ಸಮಸ್ಯೆಯ ಕುರಿತಾದ ಕಥಾಹಂದರ ಹೊಂದಿರುವ “ದ್ವಂದ್ವ’ ಚಿತ್ರವನ್ನು ಭರತ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. “ಕಾಮನ್ ಮ್ಯಾನ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತಿಲಕ್, ಆಸಿಯಾ ಫೌರ್ದಿಸ್, ಅನಿತಾ ಭಟ್, ದಿನೇಶ್ ಮಂಗಳೂರು, ಶೋಭರಾಜ್ ಮುಂತಾದವರು ನಟಿಸಿದ್ದಾರೆ.
ಒಲವೇ ಮಂದಾರ-2
ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯಾ, ಡಿಂಗ್ರಿ ನಾಗರಾಜ, ಮಡೆನೂರ ಮನು, ಶಿವಾನಂದ ಸಿಂದಗಿ ಮೊದಲಾದವರು ನಟಿಸಿರುವ ಚಿತ್ರ “ಒಲವೇ ಮಂದಾರ-2′ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರೀತಿ ಮಾಡುವುದು ಕ್ರೈಂ ಅಲ್ಲ ಎಂದು ಸಾರುವ ಈ ಚಿತ್ರವನ್ನು ಎಸ್. ಎಸ್. ಪಾಟೀಲ್ ನಿರ್ದೇಶನ ಮಾಡಿದ್ದಾರೆ. ರಮೇಶ್ ಮರಗೋಳ ಹಾಗೂ ಬಿ. ಎಂ. ಸತೀಶ್ ಈ ಸಿನಿಮಾ ನಿರ್ಮಿಸಿದ್ದಾರೆ.
ದಿಗ್ವಿಜಯ
ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ “ದಿಗ್ವಿಜಯ’ ಸಿನಿಮಾದ ಕಥೆ ಸಾಗುತ್ತದೆ. ದುರ್ಗಾ ಪಿ.ಎಸ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು “ಜೆ. ಪಿ. ಎಂಟರ್‌ಟೈನ್ಮೆಂಟ್’ ಸಂಸ್ಥೆಯಡಿ ಜಯಪ್ರಭು ಆರ್. ಲಿಂಗಾಯತ್ ನಿರ್ಮಿಸಿದ್ದು, ಬಹುತೇಕ ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಬನ್-ಟೀ
ಕೇಶವ್ ನಿರ್ಮಿಸಿರುವ “ಬನ್-ಟೀ’ ಸಿನಿಮಾವನ್ನು ಉದಯ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರ ಎಷು ಕಮರ್ಷಿಯಲ್ ಆಗುತ್ತಿದೆ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.
ಇದರೊಂದಿಗೆ ಬಹುತೇಕ ಹೊಸಬರ “ಆರಾರಿರಾರೋ’, ಸ್ಪರ್ಶ ರೇಖಾ ಅಭಿನಯದ “ಪರಿಶುದ್ಧಂ’, ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ “ಹನಿಮೂನ್ ಇನ್ ಬ್ಯಾಂಕಾಕ್’ ಸಿನಿಮಾಗಳು ತೆರೆಗೆ ಬರುತ್ತಿದೆ.