2023ರಲ್ಲಿ ಚಂದನವನದಲ್ಲಿ ನೂರಾರು ಸಿನಿಮಾಗಳು ಬಂದಿವೆ. ಈ ಪೈಕಿ ಕೆಲ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು ಕೆಲವೊಂದು ಥಿಯೇಟರ್ ನಲ್ಲಿ ಹೆಚ್ಚು ದಿನ ಉಳಿಯದೆ ಇದ್ದರೂ, ಓಟಿಟಿಯಲ್ಲಿ ಬಂದ ಬಳಿಕ ಹೆಚ್ಚು ಜನರನ್ನು ಸೆಳೆದಿದೆ.
ಈ ವರ್ಷ ಬಂದ ಸಿನಿಮಾಗಳಲ್ಲಿ ಕೆಲವೊಂದು ನವ ಕಲಾವಿದರು ಜೊತೆಗೆ ಈಗಾಗಲೇ ಬಣ್ಣದ ಲೋಕದಲ್ಲಿ ಛಾಪು ಮೂಡಿಸಿರುವ ನಟಿಯರು ತನ್ನ ನಟನೆಯಿಂದ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿದಿದ್ದಾರೆ.
ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಬಂದ ಕೆಲ ಸಿನಿಮಾಗಳಲ್ಲಿ ನಟಿಯರ ಪಾತ್ರಗಳು ಗಮನ ಸೆಳೆದಿದೆ. ಆ ನಟಿಯರು ಪಟ್ಟಿ ಇಲ್ಲಿದೆ.
ರುಕ್ಮಿಣಿ ವಸಂತ್: ರುಕ್ಮಿಣಿ ವಸಂತ್ ಎಂದ ಕೊಡಲೇ ಕಣ್ಣಮುಂದೆ ಮಿಡಲ್ ಕ್ಲಾಸ್ ಮನೆಯ ಪ್ರಿಯಾ ಬರುತ್ತಾಳೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮನುವಿಗಾಗಿ ಕಾಯುವ ಪ್ರಿಯಾ ನೆನಪಾಗುತ್ತಾಳೆ. ರಕ್ಷಿತ್ ಶೆಟ್ಟಿ ಅವರ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ, ಹಾಗೂ ಸೈಡ್ ಬಿ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಪ್ರಿಯಾಳಾಗಿ ನಟಿಸಿರುವ ರೀತಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹೇಮಂತ್ ರಾವ್ ನಿರ್ದೇಶನದ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರ ಅಭಿನಯ ಭಾವನಾತ್ಮಕವಾಗಿಯೂ ಗಮನ ಸೆಳೆಯುತ್ತದೆ. ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾ ಮಾತ್ರವಲ್ಲದೆ ರುಕ್ಮಿಣಿ ವಸಂತ್ ಈ ವರ್ಷ ಗೋಲ್ಡನ್ ಸ್ಟಾರ್ ಗಣೇಶ್ ಅವರ ʼ ಬಾನದಾರಿಯಲ್ಲಿʼ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಮುಂದೆ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ʼಭೈರತಿ ರಣಗಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚೈತ್ರಾ ಆಚಾರ್: ಚಂದನವನದ ಪ್ರತಿಭಾವಂತ ನಟಿಯರಲ್ಲಿ ಚೈತ್ರಾ ಆಚಾರ್ ಕೂಡ ಒಬ್ಬರು. ತನ್ನ ನಟನೆ ಮೂಲಕ ಗಮನ ಸೆಳೆದಿರುವ ಅವರು ಈ ವರ್ಷ ಎರಡು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಲ್ಲಿ ಅವರು ಅದ್ಭುತವಾಗಿ ನಟಿಸಿದ್ದು, ಪ್ರೇಕ್ಷಕರನ್ನು ರಂಜಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರ ʼಟೋಬಿʼ ಸಿನಿಮಾದಲ್ಲಿ ಅವರು ಅಮೋಘವಾಗಿ ‘ಜೆನ್ನಿ’ ಪಾತ್ರವನ್ನು ನಿಭಾಯಿಸಿದ್ದಾರೆ. ಇದರೊಂದಿಗೆ ರಕ್ಷಿತ್ ಶೆಟ್ಟಿ ಅವರ ʼಸಪ್ತ ಸಾಗರದಾಚೆ ಎಲ್ಲೋ ಸೈಡ್ -ಬಿʼ ನಲ್ಲಿ ಸುರಭಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳ ಕಥೆ ಭಿನ್ನವಾಗಿದ್ದು, ಕಥೆಗೆ ತಕ್ಕಂತೆ ಚೈತ್ರಾ ಅವರ ಪಾತ್ರವೂ ಭಿನ್ನವಾಗಿ ಸಿನಿವಲಯದಲ್ಲಿ ಗುರುತಿಸಿಕೊಂಡಿತು.
ಮಿಲನಾ ನಾಗರಾಜ್: ಪತಿ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ʼಲವ್ ಮಾಕ್ಟೇಲ್ʼ ಸಿನಿಮಾದಲ್ಲಿ ನಟಿಸುವ ಮೂಲಕ ಲಕ್ಕಿ ಚಾರ್ಮ್ ಆಗಿರುವ ಮಿಲನಾ ನಾಗರಾಜ್ ಅವರಿಗೆ ಈ ವರ್ಷ ಅಂದುಕೊಂಡ ಮಟ್ಟಿಗೆ ಯಶಸ್ಸಿನ ವರ್ಷ ಆಗಿಲ್ಲ. ಆದರೆ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ʼಮಿಸ್ಟರ್. ಬ್ಯಾಚುಲರ್ʼ, ʼಲವ್ ಬರ್ಡ್ಸ್ʼ ಹಾಗೂ ʼ ಕೌಶಲ್ಯ ಸುಪ್ರಜಾ ರಾಮʼ ಸಿನಿಮಾದಲ್ಲಿ ಮಿಲನಾ ಈ ವರ್ಷ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಶಶಾಂಕ್ ಅವರ ʼ ಕೌಶಲ್ಯ ಸುಪ್ರಜಾ ರಾಮʼ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗುವುದರ ಜೊತೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.
ಸಿನಿಮಾದಲ್ಲಿ ಮಿಲನಾ ʼಮುತ್ತು ಲಕ್ಷ್ಮೀʼಯಾಗಿ ಅಹಂ ಹಾಗೂ ಕುಡಿತದ ಚಟವುಳ್ಳ ಹೆಣ್ಣಿನ ಪಾತ್ರವನ್ನು ಮಾಡಿದ್ದಾರೆ. ಇದುವರೆಗೆ ಅವರು ಕಾಣಿಸಿಕೊಳ್ಳದಿದ್ದ ಹೊಸ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಸಿರಿ ರವಿಕುಮಾರ್: ಕಳೆದ ʼಸಕುಟುಂಬ ಸಮೇತʼ ಎನ್ನುವ ಸಿಂಪಲ್ ಕಥೆಯ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟಿ ಸಿರಿ ರವಿಕುಮಾರ್ ಈ ವರ್ಷ ಒಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನದ ʼಸ್ವಾತಿ ಮುತ್ತಿನ ಮಳೆ ಹನಿಯೇʼ ದಲ್ಲಿ ʼಪ್ರೇರಣಾʼ ಆಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣ ಮಾಡಿದ್ದಾರೆ. ಫೀಲ್ ಗುಡ್ ಸಿನಿಮಾದಲ್ಲಿ ಸಿರಿ ರವಿಕುಮಾರ್ ಅವರ ಅಭಿನಯಕ್ಕೆ ಅನೇಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಸಿಂಧು ಶ್ರೀನಿವಾಸ ಮೂರ್ತಿ: ಈ ವರ್ಷ ತೆರೆಕಂಡು ಬಹುತೇಕ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡ ʼ ಆಚಾರ್ & ಕೋʼ ಸಿನಿಮಾವನ್ನು ಮಹಿಳೆಯರೇ ಸೇರಿಕೊಂಡು ಮಾಡಿರುವುದು ವಿಶೇಷ. ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನದೊಂದಿಗೆ ನಟನೆಯನ್ನೂ ಅಮೋಘವಾಗಿ ನಿಭಾಯಿಸಿದ್ದಾರೆ. ʼಸುಮಾʼಳಾಗಿ 1960ರ ಘಟ್ಟದ ತುಂಬು ಕುಟುಂಬವೊಂದರ ಬೆನ್ನುಲುಬಾಗಿ ಇಲ್ಲಿ ಸಿಂಧು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಕಥೆ ಹಾಗೂ ಹಾಸ್ಯವೇ ಪ್ರಧಾನ. ಮನರಂಜನೆಯೊಂದಿಗೆ ಒಂದು ತಣ್ಣನೆಯ ಸಂದೇಶ ಕೂಡ ಸಿನಿಮಾದಲ್ಲಿದೆ.