ಬೆಂಗಳೂರು: ಮೋಹಕ ತಾರೆ ನಟಿ ರಮ್ಯಾ (Ramya)
ಮಂಗಳವಾರ(ಜ.7ರಂದು) ಕೋರ್ಟ್‌ಗೆ ಹಾಜರಾಗಿದ್ದಾರೆ.
2023ರ ಜುಲೈ 21ರಂದು ಬಿಡುಗಡೆಯಾಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ತಮ್ಮ ಅನುಮತಿ ಇಲ್ಲದೆ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎನ್ನುವ ಆರೋಪದ ಕುರಿತಾದ ವಿಚಾರಣೆಗೆ ಕೋರ್ಟ್‌ಗೆ ನಟಿ ಆಗಮಿಸಿದ್ದಾರೆ.
ಈ ಸಂಬಂಧ ರಮ್ಯಾ ಅವರು ಚಿತ್ರದಲ್ಲಿನ ತಮ್ಮ ದೃಶ್ಯವನ್ನು ತೆಗೆದುಹಾಕುವಂತೆ ಚಿತ್ರತಂಡಕ್ಕೆ ಲೀಗಲ್ ನೋಟೀಸ್ ಕಳಿಸಿದ್ದರು. ಇದಲ್ಲದೆ ಚಿತ್ರದ ರಿಲೀಸ್ ಆಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೋರ್ಟ್ ತುರ್ತು ವಿಚಾರಣೆಯನ್ನು ಮಾಡಿ ರಮ್ಯಾ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇದರಿಂದ ಸಿನಿಮಾ ಸರಾಗವಾಗಿ ಬಿಡುಗಡೆ ಆಗಿತ್ತು.
ರಮ್ಯಾ ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟ್ರೇಲರ್‌ನಲ್ಲಿ ರಮ್ಯಾ ಅವರ ದೃಶ್ಯವನ್ನು ಬಳಸಿಕೊಳ್ಳಲಾಗಿತ್ತು. ರಮ್ಯಾ ಅವರು ಸುದೀರ್ಘ ಗ್ಯಾಪ್ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಆಗಲಿದ್ದಾರೆ ಎನ್ನುವ ಮಾತು ಆ ಸಮಯದಲ್ಲಿ ವೈರಲ್ ಆಗಿತ್ತು. ಇದು ʼಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆʼ ಚಿತ್ರಕ್ಕೆ ಪ್ರಚಾರವಾಗಿಯೂ ಪರಿಣಮಿಸಿತ್ತು.
ಆದರೆ ಟ್ರೇಲರ್ ರಿಲೀಸ್ ಬಳಿಕ ರಮ್ಯಾ ಅವರು ಅನುಮತಿ ಇಲ್ಲದೆ ತಮ್ಮ ದೃಶ್ಯವನ್ನು ಬಳಿಸಿದ್ದಾರೆ ಎಂದು ಆರೋಪಿಸಿ ಲೀಗಲ್ ನೋಟಿಸ್ ಕಳುಹಿಸಿ 1 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಈ ಪ್ರಕರಣದ ವಿಚಾರಣೆಗೆ ನಟಿ ರಮ್ಯಾ ಅವರು ವಾಣಿಜ್ಯ ಕೋರ್ಟ್‌ಗೆ ಆಗಮಿಸಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ತಮ್ಮ ವಕೀಲರ ಜತೆ ರಮ್ಯಾ ಕೋರ್ಟ್ ಆಗಮಿಸಿದ್ದಾರೆ ಎಂದು ವರದಿಯಾಗಿದೆ.
ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಬಂದಿತ್ತು. ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ವಿತರಣೆ ಮಾಡಿತ್ತು.