ಜನಪ್ರಿಯ “ರಾಧಾ ಕೃಷ್ಣ’ ಧಾರಾವಾಹಿಯಲ್ಲಿ ರಾಧೆ ಪಾತ್ರದಲ್ಲಿ ವೀಕ್ಷಕರ ಮನಗೆದ್ದ ನಟಿ ಮಲ್ಲಿಕಾ ಸಿಂಗ್. ಕಿರುತೆರೆಯಲ್ಲಿ ಸದ್ಯದ ಮಟ್ಟಿಗೆ ಬಹು ಬೇಡಿಕೆಯ ಮಲ್ಲಿಕಾ ಸಿಂಗ್, ಈಗ ಕನ್ನಡದ “ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೆ ಅಡಿಯಿಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮಲ್ಲಿಕಾ, ಚಿತ್ರೀಕರಣವನ್ನೂ ಪೂರೈಸಿದ್ದಾರೆ. ಇದೇ ವೇಳೆ “ಉದಯವಾಣಿ’ ಜೊತೆ ನಡೆಸಿದ ಚಿಟ್‌ಚಾಟ್‌ನಲ್ಲಿ ಮಲ್ಲಿಕಾ ಸಿಂಗ್ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ರಾಧಾಕೃಷ್ಣ’ ಸೀರಿಯಲ್ ಮತ್ತದರ ಪಾತ್ರ ಬಗ್ಗೆ ಏನು ಹೇಳುವಿರಿ?
“ರಾಧಾಕೃಷ್ಣ’ ಸೀರಿಯಲ್‌ನ ರಾಧೆಯ ಪಾತ್ರ ಇಡೀ ಭಾರತಕ್ಕೆ ನನ್ನನ್ನು ಪರಿಚಯಿಸಿತು. “ರಾಧಾಕೃಷ್ಣ’ ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲೂ ಪ್ರಸಾರವಾಗಿದ್ದರಿಂದ, ನನಗೆ ಗೊತ್ತಿರದ ಭಾಷೆಗಳಿಗೂ ನಾನು ರಾಧೆ ಆಗಿ ಪರಿಚಯವಾದೆ. ಬಹುಶಃ “ರಾಧಾಕೃಷ್ಣ’ ಇಲ್ಲದೆ ನನ್ನ ಕೆರಿಯರ್ ಮುಂದುವರೆಯುತ್ತಿರಲಿಲ್ಲ.
ರಾಧೆಯ ಪಾತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿದೆ?
Related Articles
ಒಂದೇ ಮಾತಿನಲ್ಲಿ ಹೇಳುವುದಾದರೆ, ಅದ್ಭುತ! ನಾನು ಈಗಷ್ಟೇ ನಟಿಯಾಗಿ ಕೆರಿಯರ್ ಶುರು ಮಾಡಿದ್ದೇನೆ. ಎಷ್ಟೋ ವರ್ಷ ಅನುಭವಿ ನಟಿಯರಿಗೂ ಸಿಗುವುದು ಅಪರೂಪ ಎನ್ನುವಂಥ ಪಾತ್ರ, ಅವಕಾಶ ಮತ್ತು ಮನ್ನಣೆ ರಾಧೆಯ ಪಾತ್ರ ನನಗೆ ತಂದುಕೊಟ್ಟಿತು. ಎಷ್ಟೋ ಜನರಿಗೆ ನನ್ನ ನಿಜವಾದ ಹೆಸರು ಕೂಡ ಗೊತ್ತಿಲ್ಲ! ಅಷ್ಟರ ಮಟ್ಟಿಗೆ ರಾಧೆ ಆಗಿಯೇ ನನ್ನನ್ನು ಜನ ಗುರುತಿಸುತ್ತಾರೆ.
ಸಿನಿಮಾದ ಕಡೆಗೆ ಬರುವ ಯೋಚನೆ ಬಂದಿದ್ದು ಯಾವಾಗ?
ನಿಜ ಹೇಳಬೇಕು ಅಂದ್ರೆ, ಸೀರಿಯಲ್ ಅಥವಾ ಸಿನಿಮಾವನ್ನೇ ಮಾಡಬೇಕು ಎಂಬ ಯಾವ ಯೋಚನೆ ಕೂಡ ಇರಲಿಲ್ಲ. ಬಂದ ಅವಕಾಶ ಬಳಸಿಕೊಂಡಿದ್ದೇನೆ ಅಷ್ಟೇ. ಈಗಾಗಲೇ ಹಿಂದಿಯ “ಗಲ್ಲಿ ಬಾಯ್’ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಅದಾದ ನಂತರ ಕಿರುತೆರೆಯಲ್ಲಿ ಬಂದ ಅವಕಾಶಗಳನ್ನು ಒಪ್ಪಿಕೊಂಡಿದ್ದರಿಂದ ಅಲ್ಲಿಯೇ ಬಿಝಿಯಾಗಬೇಕಾಯ್ತು.
ಕನ್ನಡ ಸಿನಿಮಾರಂಗದ ಬಗ್ಗೆ ಏನು ಹೇಳುತ್ತೀರಿ?
ನಾನು ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲ ಸೌಥ್ ಇಂಡಿಯನ್ ಸಿನಿಮಾಗಳನ್ನು ತುಂಬಾ ನೋಡುತ್ತೇನೆ. ಕನ್ನಡದಲ್ಲೂ “ಕೆಜಿಎಫ್’, “ಕಾಂತಾರ’ದಂತಹ ಸಿನಿಮಾಗಳನ್ನು ನೋಡಿದ್ದೇನೆ. ಇಲ್ಲಿ ಒಳ್ಳೆಯ ಸಿನಿಮಾ ಮೇಕರ್ ಇದ್ದಾರೆ. ಒಳ್ಳೆಯ ಕಂಟೆಂಟ್ ಮತ್ತು ಕ್ವಾಲಿಟಿ ಸಿನಿಮಾಗಳು ಬರುತ್ತಿವೆ. ಬಾಲಿವುಡ್‌ಗೂ ಕಾಂಪೀಟ್ ಮಾಡುವಂಥ ಸಿನಿಮಾಗಳು ಸೌಥ್‌ನಿಂದ ಬರುತ್ತಿವೆ.
ಮೊದಲ ಕನ್ನಡ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ?
“ರಾಧಾಕೃಷ್ಣ’ ಸೀರಿಯಲ್ ನಂತರ ಸಿನಿಮಾಗಳಿಂದಲೂ ಸಾಕಷ್ಟು ಆಫರ್ ಬರುತ್ತಿವೆ. ಅದರಲ್ಲೂ ಸೌಥ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಿಂದ ತುಂಬಾ ಆಫರ್ ಇದೆ. ಆದರೆ ಕೆಲವು ಸಬೆjಕ್ಟ್, ಮತ್ತೆ ಡೇಟ್ಸ್ ಸಮಸ್ಯೆಯಿಂದ ಒಪ್ಪಿಕೊಳ್ಳಲಾಗಿಲ್ಲ. “ಒಂದು ಸರಳ ಪ್ರೇಮಕಥೆ’ ಸ್ಕ್ರಿಪ್ಟ್ ಮತ್ತು ಕ್ಯಾರೆಕ್ಟರ್ ಎರಡೂ ಇಷ್ಟವಾಯ್ತು. ಜೊತೆಗೆ ಕೆಲ ದಿನಗಳ ಡೇಟ್ಸ್ ಕೂಡ ಇದ್ದಿದ್ದರಿಂದ, ಈ ಸಿನಿಮಾ ಒಪ್ಪಿಕೊಂಡೆ.
“ಒಂದು ಸರಳ ಪ್ರೇಮಕಥೆ’ಯಲ್ಲಿ ನಿಮ್ಮ ಪಾತ್ರವೇನು?
ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೆಚ್ಚೇನೂ ಹೇಳಬಾರದು ಎಂದಿದ್ದಾರೆ. ಹಾಗಾಗಿ ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಆದರೆ, ಎಲ್ಲರಿಗೂ ಇಷ್ಟವಾಗುವಂಥ, ಸಿನಿಮಾಕ್ಕೆ ಟ್ವಿಸ್ಟ್ ಕೊಡುವಂಥ ಪಾತ್ರ ಎಂದಷ್ಟೇ ಹೇಳಬಲ್ಲೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಮಾತನಾಡುತ್ತೇನೆ.
ಚಿತ್ರತಂಡದ ಜೊತೆಗೆ ಶೂಟಿಂಗ್ ಅನುಭವ ಹೇಗಿದೆ?
ತುಂಬಾ ಚೆನ್ನಾಗಿದೆ. ತುಂಬಾ ವೃತ್ತಿಪರವಾಗಿ ಸಿನಿಮಾದ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ನಿರ್ದೇಶಕ ಸುನಿ, ಸಹ ಕಲಾವಿದರಾದ ವಿನಯ್ ರಾಜಕುಮಾರ್, ಸ್ವಾತಿಷ್ಠಾ ಎಲ್ಲರೂ ತುಂಬ ಸಪೋರ್ಟಿವ್ ಆಗಿದ್ದಾರೆ. ಶೂಟಿಂಗ್ ನಡೆಯುತ್ತಿರುವುದೇ ಗೊತ್ತಾಗುತ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕದ ಕೂಲ್ ವಾತಾವರಣ ತುಂಬಾ ಚೆನ್ನಾಗಿದೆ.
-ಜಿ.ಎಸ್.ಕಾರ್ತಿಕ ಸುಧನ್