“ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ್ರೆ ನಮ್ಮಂತಹ ಹೊಸಬರಿಗೆ ಧೈರ್ಯ ಬರುತ್ತೆ. ಆದ್ರೆ ಯಾವ್ ಸಿನಿಮಾನೂ ಥಿಯೇಟರ್ ನಲ್ಲಿ ನಿಲ್ತಾ ಇಲ್ಲ. ಹೀಗಾದ್ರೆ ಹೇಗೆ ಸಾರ್…’ – ಇನ್ನೇನು ಸಿನಿಮಾ ಬಿಡುಗಡೆಯ ಹಂತದಲ್ಲಿರುವ ನಿರ್ಮಾಪಕರೊಬ್ಬರು ಈ ತರಹ ಬೇಸರ ಹೊರಹಾಕಿದರು. ಅವರ ಮಾತಲ್ಲಿ ಭಯವಿತ್ತು, ಚಿತ್ರರಂಗಕ್ಕೆ ಹೊಸದಾಗಿ ಬರುವವರನ್ನು ಕೈ ಹಿಡಿಯುವವರು ಯಾರು ಎಂಬ ಆತಂಕವೂ ಇತ್ತು. ಇದು ಅವರೊಬ್ಬರ ಆತಂಕವಲ್ಲ. ಈ ವರ್ಷ ಸಿನಿಮಾ ಬಿಡುಗಡೆಗೆ ಮುಂದಾಗಿರುವ ಬಹುತೇಕ ನಿರ್ಮಾಪಕ, ನಿರ್ದೇಶಕರ ಆತಂಕ.
2023ರಲ್ಲಿ ಈಗಾಗಲೇ ಐದೂವರೆ ತಿಂಗಳು ಕಳೆಯುತ್ತಾ ಬಂದಿದೆ. ಇಷ್ಟು ತಿಂಗಳಲ್ಲಿ ಜೂನ್ ಮೊದಲ ವಾರದವರೆಗಿನ ಸಿನಿಮಾ ಬಿಡುಗಡೆಯ ಲೆಕ್ಕ ತಗೊಂಡರೆ 95 ದಾಟುತ್ತದೆ. ಇದು ದೊಡ್ಡ ಸಂಖ್ಯೆಯೇ. ಆದರೆ, ಈ 95ರೊಳಗೆ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾ ಯಾವುದು ಎಂದು ಕೇಳಿದರೆ ಉತ್ತರಿಸೋದು ತುಸು ಕಷ್ಟ. ಇವತ್ತು ನಿರ್ಮಾಪಕರಲ್ಲಿ ಭಯ, ಆತಂಕಕ್ಕೆ ಕಾರಣವಾಗಿರೋದು ಇದೇ ಅಂಶ. ಒಂದೇ ಒಂದು ಗೆಲುವು ಇಲ್ಲದೇ ಚಿತ್ರರಂಗ ಸುಮ್ಮನೆ ನೀರಿನಂತೆ ಹರಿಯುತ್ತಾ ಹೋದರೆ ಅದರಲ್ಲೇನು ಜೋಶ್ ಇದೆ ಎಂಬ ಲೆಕ್ಕಾಚಾರ ಅನೇಕರದು. ಅದು ಸತ್ಯ ಕೂಡಾ. ಯಾವುದೇ ಕ್ಷೇತ್ರವಾದರೂ ಅಲ್ಲೊಂದು ಎಕ್ಸೈಟ್‌ಮೆಂಟ್ ಇರಬೇಕು, ಏನೋ ಒಳ್ಳೆಯದು ಆಗುತ್ತಿದೆ ಎಂಬ ಭಾವನೆ ಬರಬೇಕು. ಆಗ ಮಾತ್ರ ಆ ಕ್ಷೇತ್ರದಲ್ಲಿ ತೊಡಗಿರುವವರಿಗೆ ಬಂಡವಾಳ ಹೂಡಲು, ಹೊಸಬರಿಗೆ ಪ್ರೋತ್ಸಾಹ ನೀಡಲು ಹುಮ್ಮಸ್ಸು ಬರುತ್ತದೆ.
ಚಿತ್ರರಂಗಕ್ಕೆ ಒಂದು ಗೆಲುವಿನ ಅಗತ್ಯವಿದೆ
ಸದ್ಯ ಕನ್ನಡ ಚಿತ್ರರಂಗಕ್ಕೆ ಬೇಕಾಗಿರೋದು ಬೂಸ್ಟರ್ ಡೋಸ್‌ನಂತಹ ಒಂದು ದೊಡ್ಡ ಗೆಲುವು. ಈ ಹಿಂದೆ “ಕಾಂತಾರ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವ ಮೂಲಕ ಇಡೀ ಚಿತ್ರರಂಗಕ್ಕೆ ಒಂದು ಜೋಶ್ ನೀಡಿದ್ದು ಸುಳ್ಳಲ್ಲ. ಆ ಚಿತ್ರ ಗೆದ್ದ ರೀತಿಯನ್ನು ಪ್ರತಿಯೊಬ್ಬ ನಿರ್ಮಾಪಕನ್ನೂ ತನ್ನದೇ ಗೆಲುವು ಎಂಬಂತೆ ಸಂಭ್ರಮಿಸುವ ಮೂಲಕ ಸ್ಯಾಂಡಲ್‌ವುಡ್ ಗರಿಗೆದರಿತು. ಇದೊಂದೇ ಅಲ್ಲ, “ಕೆಜಿಎಫ್-2′, “777 ಚಾರ್ಲಿ’ ಹೀಗೆ ಕೆಲವು ಸಿನಿಮಾ ಗಳು ಸಿನಿಮಾ ನಿರ್ಮಾ ಪಕರಿಗೆ ಚಿತ್ರರಂಗದ ಮೇಲೆ ಭರವಸೆ ಹುಟ್ಟಿಸಿದವು. ಆದರೆ, ಈ ವರ್ಷ ಇಲ್ಲಿವರೆಗೆ ಆ ತರಹದ ಯಾವುದೇ ಮ್ಯಾಜಿಕ್ ನಡೆಯಲಿಲ್ಲ. ಸಿನಿಮಾಗಳ ಬಗ್ಗೆ ಮೆಚ್ಚುಗೆ ಬಂದರೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಬೆರಳೆಣಿಕೆ. ಅದರಲ್ಲೂ ಕೆಲವು ಚಿತ್ರತಂಡಗಳು ತಮ್ಮ ಒಳ್ಳೆಯ ಚಿತ್ರವನ್ನುಪ್ರೇಕ್ಷಕರಿಗೆ ತಲುಪಿಸಲು ಮಾಡಿದ್ದು ಹರಸಾಹಸ. ಉದಾಹರಣೆಗೆ ಹೇಳುವುದಾದರೆ ಈ ವರ್ಷ ತೆರೆಕಂಡ “ಹೊಂದಿಸಿ ಬರೆಯಿರಿ’ ಒಂದು ಕಂಟೆಂಟ್ ಸಿನಿಮಾವಾಗಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರವನ್ನು ದಡ ಸೇರಿಸಲು ಆ ತಂಡ ಪಟ್ಟ ಶ್ರಮದ ಅರಿವು ಬಹುಶಃ ಪ್ರೇಕ್ಷಕರಿಗೆ ಇದ್ದಂತಿಲ್ಲ. ಸದ್ಯ ಪ್ರದರ್ಶನ ಕಾಣುತ್ತಿರುವ “ಡೇರ್ ಡೆವಿಲ್ ಮುಸ್ತಾಫಾ’ ತಂಡ ಕೂಡಾ ಇದೇ ಪ್ರಯತ್ನದಿಂದ ಯಶಸ್ಸಿನತ್ತು ಸಾಗುತ್ತಿದೆ. ಹಾಗಂತ ಎಲ್ಲಾ ತಂಡಗಳಿಗೂ ಇಷ್ಟೊಂದು ಶ್ರಮ ಹಾಕಲು ಸಾಧ್ಯವಿಲ್ಲ. ಏಕೆಂದರೆ ನಿರ್ಮಾಪಕ, ನಿರ್ದೇಶಕರ ಸಹಕಾರದ ಜೊತೆಗೆ ಕಲಾವಿದರ ಸಹಕಾರ, ಆರ್ಥಿಕ ಸದೃಢತೆಯೂ ಮುಖ್ಯವಾಗುತ್ತದೆ.
Related Articles
ಸ್ಟಾರ್ ಸಿನಿಮಾ ಎಂಬ ವೀಕೆಂಡ್ ಖುಷಿ
ಸದ್ಯ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹೆಚ್ಚು ಸ್ಟಾರ್ ಸಿನಿಮಾಗಳು ರಿಲೀಸ್ ಆಗಿಲ್ಲ. ಇನ್ನೂ ಒಂದೆರಡು ತಿಂಗಳು ಯಾವ ಸ್ಟಾರ್ ಸಿನಿಮಾವೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಹಳೆಯ ನಂಬಿಕೆ ಇದೆ, ಸ್ಟಾರ್ ಸಿನಿಮಾ ರಿಲೀಸ್ ಆದರೆ ಚಿತ್ರರಂಗ ಉದ್ಧಾರವಾಗುತ್ತದೆ ಎಂಬುದು. ಹಾಗೆ ನೋಡಿದರೆ ಬಹುತೇಕ ಸ್ಟಾರ್ ಸಿನಿಮಾಗಳು ಆರ್ಥಿಕವಾಗಿ (ಸ್ಯಾಟ್‌ಲೈಟ್, ಡಿಜಿಟಲ್, ವಿತರಣಾ ಹಕ್ಕು) ಬಿಡುಗಡೆಗೆ ಮುನ್ನವೇ ಗೆದ್ದಿರುತ್ತವೆ.
ಬಿಡುಗಡೆ ನಂತರ ಬಹುತೇಕ ಸ್ಟಾರ್ ಸಿನಿಮಾಗಳದ್ದು ವೀಕೆಂಡ್ ಖುಷಿಯಷ್ಟೇ. ಅದಕ್ಕೆ ಉದಾಹರಣೆಯಾಗಿ ಸಾಕಷ್ಟು ಸ್ಟಾರ್ ಸಿನಿಮಾಗಳು ಸಿಗುತ್ತವೆ. ಹಾಗೆ ನೋಡಿದರೆ ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವುದು ಹೊಸಬರ ಹಾಗೂ ಕಂಟೆಂಟ್ ಸಿನಿಮಾಗಳ ಗೆಲುವು. ಬಿಡುಗಡೆ ಬಳಿಕ “ಕಾಂತಾರ’, “777 ಚಾರ್ಲಿ’ಗೆ ಸಿಕ್ಕಂತಹ ಮೈಲೇಜ್ ಹೊಸಬರ ಸಿನಿಮಾಗಳಿಗೆ ಸಿಕ್ಕಾಗ ಅದು ಎಲ್ಲಾ ರೀತಿಯಿಂದಲೂ ಚಿತ್ರರಂಗದಲ್ಲಿ ತುಂಬಾ “ಆರೋಗ್ಯ’ಯುತ ವಾತಾವರಣ ಕಲ್ಪಿಸುತ್ತದೆ. ಅದು ಡಿಜಿಟಲ್, ಸ್ಯಾಟ್‌ಲೈಟ್ ಬಿಝಿನೆಸ್‌ನಿಂದ ಹಿಡಿದು ಹೊಸಬರಿಗೆ ಥಿಯೇಟರ್ ಸಿಗುವವರೆಗೂ… ಆ ತರಹದ ಗೆಲುವು ಕನ್ನಡ ಚಿತ್ರರಂಗಕ್ಕೆ ಜರೂರಾಗಿ ಬೇಕಾಗಿದೆ.
ರವಿಪ್ರಕಾಶ್ ರೈ