Advertisement

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

12:48 PM Jul 05, 2024 | Team Udayavani |

ಸಿನಿಮಾವೊಂದರ ಗೆಲುವು, ದೊಡ್ಡ ಮಟ್ಟದ ಕಲೆಕ್ಷನ್‌ ಚಿತ್ರರಂಗಗಳಿಗೆ ಒಂದು ಬೂಸ್ಟರ್‌ ಡೋಸ್‌ನಂತೆ ಕಾರ್ಯನಿರ್ವಹಿಸುತ್ತದೆ. ಅದು ಯಾವುದೇ ಭಾಷೆಯ ಚಿತ್ರವಿರಬಹುದು. ಆದರೆ, ಗೆಲುವನ್ನು ಮಾತ್ರ ಎಲ್ಲಾ ಭಾಷೆಯ ಚಿತ್ರರಂಗ ಸಂಭ್ರಮಿಸುತ್ತದೆ. ತಮಗೆ ಗೊತ್ತಿಲ್ಲದಂತೆ ಒಂದು ಹುರುಪು, ಜೋಶ್‌ ಮೂಡುತ್ತದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಸಿನಿಮಾ ಕಾರ್ಯಗಳಿಗೆ ವೇಗ ಸಿಗುತ್ತದೆ. ಅದರಲ್ಲೂ ಸತತ ಸೋಲುಗಳನ್ನೇ ಕಂಡ ಚಿತ್ರರಂಗಗಳಂತೂ ಇಂತಹ ಗೆಲುವನ್ನು ಸಂಭ್ರಮಿಸುವುದರಲ್ಲಿ ಎರಡು ಮಾತಿಲ್ಲ. ಈಗ “ಕಲ್ಕಿ’ ಅಂತಹ ಸಂಭ್ರಮವನ್ನು ತಂದಿದೆ. ಜನ ಚಿತ್ರಮಂದಿರಕ್ಕೆ ಬರುವುದನ್ನೇ ಮರೆತಿದ್ದಾರೆ. ಓಟಿಟಿಯನ್ನೇ ಎದೆಗೊತ್ತಿಕೊಂಡಿದ್ದಾರೆಂದು ಬೇಸರದಲ್ಲಿದ್ದ ಸಿನಿಮಾ ಮಂದಿಗೆ ಸದ್ಯ ಭರವಸೆ ಮೂಡಿಸಿದ್ದು “ಕಲ್ಕಿ’ ಮತ್ತು ಅದರ ಕಲೆಕ್ಷನ್‌.

Advertisement

ಪ್ರಭಾಸ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “ಕಲ್ಕಿ’ ಚಿತ್ರ ಬರೋಬ್ಬರಿ 750 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಇದು ವಿಶ್ವದಾದ್ಯಂತ ಚಿತ್ರ ಏಳು ದಿನಗಳಲ್ಲಿ ಬಾಚಿಕೊಂಡಿರುವ ಕಲೆಕ್ಷನ್‌. ಈ ಕಲೆಕ್ಷನ್‌ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಹುರುಪು ಕೊಟ್ಟಿದ್ದು ಸುಳ್ಳಲ್ಲ. ಮಲಯಾಳಂ ಹೊರತುಪಡಿಸಿ ಹಿಂದಿ, ತಮಿಳು, ತೆಲುಗು, ತೆಲುಗು ಹಾಗೂ ಕನ್ನಡ ಚಿತ್ರರಂಗಗಳು ಒಂದು ಗೆಲುವಿಗಾಗಿ ಎದುರು ನೋಡುತ್ತಿವೆ. ಬಿಡುಗಡೆಯಾದ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಫ‌ಲ ನೀಡುತ್ತಿಲ್ಲ. ಹೀಗಿರುವಾಗ ಪ್ರೇಕ್ಷಕ ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಂಡನಾ ಎಂಬ ಸಂದೇಹ ಬಂದಿದ್ದು ಸುಳ್ಳಲ್ಲ.

ಈಗ “ಕಲ್ಕಿ’ ಆ ಸಂದೇಹವನ್ನು ದೂರ ಮಾಡಿದೆ. ಜೊತೆಗೊಂದು ಸಂದೇಶವನ್ನು ನೀಡಿದೆ. “ಕೇವಲ ಸ್ಟಾರ್‌ ಸಿನಿಮಾ ಅಥವಾ ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ಮಾಡಿದರೆ ಜನ ಬರಲ್ಲ, ಬದಲಾಗಿ ಕಥೆಯಲ್ಲಿ ಒಂದಷ್ಟು ಹೊಸತನ ಹಾಗೂ ಪ್ರೇಕ್ಷಕ ಊಹಿಸಿಕೊಳ್ಳಲಾಗದ ದೃಶ್ಯವೈಭವವಿದ್ದರಷ್ಟೇ ಪ್ರೇಕ್ಷಕ ಸಿನಿಮಾಕ್ಕೆ ಜೈ ಎನ್ನುತ್ತಾನೆ’ ಎಂಬ ಸಂದೇಶ.

ಹಾಗೆ ನೋಡಿದರೆ “ಕಲ್ಕಿ’ಯ ಸಿನಿಮಾದ ಅವಧಿಯೂ ಸ್ವಲ್ಪ ಹೆಚ್ಚೇ ಇದೆ. ಆದರೂ ಜನ ಸಿನಿಮಾವನ್ನು ನೋಡುತ್ತಿದ್ದಾರೆ. ಅಲ್ಲಿನ ದೃಶ್ಯ ವೈಭವಕ್ಕೆ ಫಿದಾ ಆಗುತ್ತಿದ್ದಾರೆ. ಪಾತ್ರಗಳ ಪೋಷಣೆಯಲ್ಲಿ ಹೊಸತನ ಕಾಣುತ್ತಿದೆ. ಇವೆಲ್ಲವೂ “ಕಲ್ಕಿ’ಯ ನಾಗಾಲೋಟಕ್ಕೆ ಕಾರಣವಾಗಿದೆ. ಸತತ ಸೋಲಿನಲ್ಲಿದ್ದ ಪ್ರಭಾಸ್‌ “ಸಲಾರ್‌’ನಿಂದ ಸ್ವಲ್ಪ ಮಟ್ಟಿಗೆ ಮೈಕೊಡವಿಕೊಂಡಿದ್ದರು. ಈಗ “ಕಲ್ಕಿ’ಯಿಂದ ಮತ್ತೆ ಎದ್ದು ನಿಂತಿದ್ದಾರೆ.

ಸ್ಟಾರ್‌ಗಳಿಗೆ ವಿಶ್ವಾಸ

Advertisement

“ಕಲ್ಕಿ’ ಸಿನಿಮಾ ಮೂಲ ತೆಲುಗು ಚಿತ್ರರಂಗದಿಂದ ತಯಾರಾದ ಚಿತ್ರವಾದರೂ ಅದರ ಗೆಲುವು ಮಾತ್ರ ಈಗ ಎಲ್ಲಾ ಚಿತ್ರರಂಗಗಳಿಗೆ ವಿಸ್ತರಿಸುವ ಜೊತೆಗೆ ವಿಶ್ವಾಸ ಮೂಡಿಸಿರುವುದು ಸುಳ್ಳಲ್ಲ. ಅದರಲ್ಲೂ ಬಿಗ್‌ ಬಜೆಟ್‌ನ ಸ್ಟಾರ್‌ ಸಿನಿಮಾಗಳಿಗೆ “ಕಲ್ಕಿ’ಯ ಕಲೆಕ್ಷನ್‌ ವಿಶ್ವಾಸ ತಂದಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ ಸಿನಿಮಾಗಳ ರಿಲೀಸ್‌, ಪ್ರಮೋಶನ್‌ ಪ್ಲ್ರಾನ್‌ ಎಲ್ಲದರಲ್ಲೂ ಒಂದಷ್ಟು ಬದಲಾವಣೆಯಾಗುವ ಸಾಧ್ಯತೆಯಂತೂ ಇದೆ. ಸದ್ಯ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್‌ ಸಿನಿಮಾಗಳು ಆಗಸ್ಟ್‌ನಿಂದ ಬಿಡುಗಡೆಯಾಗಲಿವೆ. ಸದ್ಯ “ಕಲ್ಕಿ’ಯನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಅದೇ ಮೂಡ್‌ನ‌ಲ್ಲಿ ತಮ್ಮ ಸಿನಿಮಾಕ್ಕೂ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಸಿನಿಮಂದಿ ಎದುರು ನೋಡುತ್ತಿರುವುದು ಸುಳ್ಳಲ್ಲ. ಆದರೆ, ಇಲ್ಲಿ ಸ್ಟಾರ್‌ ಸಿನಿಮಾಗಳು ಒಂದನ್ನು ಗಮನಿಸಬೇಕು. ಅದು ಸಿನಿಮಾದ ಕಥೆ. ತಮ್ಮ ಕಥೆ ಹೇಗಿದೆ ಮತ್ತು ಯಾವ ವರ್ಗದ ಜನ ಬರಬಹುದು ಎಂಬುದು. ಆ ನಿಟ್ಟಿನಲ್ಲಿ ಸಿನಿಮಾದ ಪ್ರಚಾರ ಇದ್ದರೆ ಒಳಿತು. ಅದು ಬಿಟ್ಟು ಸಿನಿಮಾಕ್ಕೆ ಜನ ಬರಲಿಲ್ಲ ಎಂದು ಕೊರಗಿದರೆ ಅದಕ್ಕೆ ಅರ್ಥವಿರಲ್ಲ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next