Advertisement

90ರ ದಶಕದ ಮಾದಕ ನಟಿ ಶಕೀಲಾ ಜೀವನದ ಇಣುಕು ನೋಟ!

12:58 PM Dec 26, 2020 | sudhir |

ಆಕೆ ಬಡ ಕುಟುಂಬದ ಹುಡುಗಿ ಶಕೀಲಾ. ತಂದೆಯ ನಿಧನದ ಬಳಿಕ ಇಡೀ ಕುಟುಂಬ ನಿರ್ವಹಣೆಯ ಹೊಣೆ ಈ ಹರೆಯದ ಹುಡುಗಿಯ ಹೆಗಲ ಮೇಲೆ ಬೀಳುತ್ತದೆ. ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ತಾಯಿಯೇ ಶಕೀಲಾಳನ್ನು ಸಿನಿಮಾರಂಗಕ್ಕೆ ಕರೆತರುತ್ತಾಳೆ.

Advertisement

ಮೊದಲ ನೋಟದಲ್ಲೇ ನಿರ್ಮಾಪಕರು, ನಿರ್ದೇಶಕರ ಕಣ್ಣುಕುಕ್ಕುವಂತಿದ್ದ ಶಕೀಲಾ, ಇಷ್ಟವಿಲ್ಲದಿದ್ದರೂ ತಾಯಿಯ
ಇಚ್ಛೆಯಂತೆ ಕೊನೆಗೂ ಸಿನಿಮಾದಲ್ಲಿ ಚಾನ್ಸ್‌ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾಳೆ. ಆನಂತರ ತೆರೆದುಕೊಳ್ಳುವುದೆಲ್ಲವೂ ಸಿನಿಮಾ ಅನ್ನೋ ಮಾಯಾ ಲೋಕದ ಅಸಲಿ ಚಿತ್ರಣ. ಅದೇ “ಶಕೀಲಾ’ ಅನ್ನೋ 90ರ ದಶಕದ ಮಾದಕ ನಟಿಯ ಚಿತ್ರ!

ಇದು ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿರುವ “ಶಕೀಲಾ’ ಚಿತ್ರದ ಸಾರಾಂಶ. ಬೆಡಗಿ-ಬೆಡಗು ಎಂಬ ಇದೇ ಸಾರ ಮತ್ತು ಅಂಶವನ್ನು ಇಟ್ಟುಕೊಂಡು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಗ್ಲಾಮರಸ್‌ ಆಗಿ “ಶಕೀಲಾ’ಳನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

ವಯಸ್ಕರ ಚಿತ್ರಗಳಲ್ಲಿ ಅಭಿನಯಿಸಿ ಸೌಥ್‌ ಸಿನಿ ದುನಿಯಾದಲ್ಲೇ ಸಂಚಲನ ಮೂಡಿಸಿದ್ದ ನಟಿ ಶಕೀಲಾ ಅವರ ತೆರೆ ಮುಂದಿನ
ಮತ್ತು ಹಿಂದಿನ ಕಥೆಯನ್ನು ಒಂದಷ್ಟು ಸಿನಿಮ್ಯಾಟಿಕ್‌ ಆಗಿಯೇ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ಇಂದ್ರಜಿತ್‌ ಲಂಕೇಶ್‌. ಜೀವನ ಕಥೆಗಿಂತ ತೆರೆಮೇಲಿನ ದೃಶ್ಯ ನಿರೂಪಣೆಗೇ ಹೆಚ್ಚಿನ ಗಮನ ಕೊಟ್ಟಿದ್ದರಿಂದ, ಟೈಟಲ್‌ಗೆ ತಕ್ಕಂತೆ “ಶಕೀಲಾ’ ಗ್ರಾಮರ್‌ಗಿಂತ ಗ್ಲಾಮರ್‌ ಮೂಲಕವೇ ನೋಡುಗರ ಗಮನ ಸೆಳೆಯುತ್ತಾಳೆ. ಇನ್ನು ಚಿತ್ರದಲ್ಲಿ “ಶಕೀಲಾ’ ಪಾತ್ರದಲ್ಲಿ ರಿಚಾ ಚಡ್ಡಾ,  ಸಲೀಂ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ ಗಮನ ಸೆಳೆಯುತ್ತಾರೆ. ಉಳಿದಂತೆ ಇತರ ಪಾತ್ರಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಚಿತ್ರದ ಛಾಯಾಗ್ರಹಣ, ಸಂಕಲನ, ಸಂಗೀತ ತಾಂತ್ರಿಕವಾಗಿ ಒಂದಷ್ಟು ಗಮನ ಸೆಳೆಯುವಂತಿದೆ. ಒಟ್ಟಾರೆ ಅತಿಯಾದ
ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಹೋದವರಿಗೆ “ಶಕೀಲಾ’ ಒಂದಷ್ಟು ಸಮಯ ಜೊತೆಯಾಗಿ ಹಿತಾನುಭವ ಕೊಡುತ್ತಾಳೆ.

Advertisement

– ಜಿ.ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next