Advertisement
ನಗರದ ರಾಮಕೃಷ್ಣನಗರದಲ್ಲಿ ಇರುವ ಲಿಂಗಾಂಬುದಿ ಕೆರೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಗುಂಡೇಟಿಗೆ ಬಲಿಯಾಗಿರುವ ವ್ಯಕ್ತಿಯನ್ನು ಎಚ್.ಡಿ.ಕೋಟೆಯ ಮಹದೇಶ್ವರ ಕಾಲೋನಿ ನಿವಾಸಿ ಶಂಕರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಿಂಗಾಂಬುದಿ ಕೆರೆ ಆವರಣದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಳೆಸಲಾಗಿರುವ ಶ್ರೀಗಂಧದ ಮರಗಳನ್ನು ಕಳವು ಮಾಡಲು ಹೊಂಚು ಹಾಕಿದ್ದ ಐವರು ಖದೀಮರು ಶುಕ್ರವಾರ ತಡರಾತ್ರಿ ಶ್ರೀಗಂಧದ ಮರ ಕಳವು ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮರಗಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರ ನಡೆಸಿದ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಹಾರಿಸಲಾದ ಗುಂಡಿಗೆ ಮರಗಳ್ಳರ ತಂಡದಲ್ಲಿದ್ದ ಐವರಲ್ಲಿ ಓರ್ವ ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ವಯಂ ರಕ್ಷಣೆಗಾಗಿ ದಾಳಿ:
ಘಟನೆ ಹಿನ್ನೆಲೆಯಲ್ಲಿ ಮೈಸೂರು ವಲಯ ಅರಣ್ಯಾಧಿಕಾರಿ ಕರಿಕಾಳನ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ರಾತ್ರಿ ಖದೀಮರ ತಂಡವೊಂದು ಶ್ರೀಗಂಧದ ಮರ ಕಳವು ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರಂಭದಲ್ಲಿ ಶರಣಾಗುವಂತೆ ಮರಗಳ್ಳರಿಗೆ ಸೂಚಿಸಿದ್ದಾರೆ. ಆದರೆ ಮರಗಳ್ಳರು ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ವಯಂ ರಕ್ಷಣೆಗಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ. ಖದೀಮರ ಗುಂಪಿನಲ್ಲಿ 8-10 ಮಂದಿ ಇದ್ದರು. ಆದರೆ ಸ್ಥಳದಲ್ಲಿ ಮೂವರು ಅರಣ್ಯ ಸಿಬ್ಬಂದಿ ಮಾತ್ರ ಗಸ್ತಿನಲ್ಲಿದ್ದ ಕಾರಣ ಅನಿವಾರ್ಯವಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
Related Articles
Advertisement