ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಕನ್ನಡ ಚಿತ್ರರಂಗದ ಕೆಲವೇ ಕೆಲವು ನಿರ್ದೇಶಕರಲ್ಲಿ ಪ್ರೇಮ್ ಮೊದಲ ಸಾಲಿನಲ್ಲಿ ಸಿಗುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಅವರ ಸಿನಿಮಾಗಳಲ್ಲಿ ಹಿಟ್ ಆಗಿರುವ ಹಾಡುಗಳೇ ಇವೆ.
ಈಗ ಪ್ರೇಮ್ ಮತ್ತೂಮ್ಮೆ ತಮ್ಮ ಸಂಗೀತ ಪ್ರೇಮ ಮೆರೆದಿದ್ದಾರೆ. ಅದು “ಏಕ್ ಲವ್ ಯಾ’ ಚಿತ್ರದ ಮೂಲಕ. ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿವೆ.
ಕೆಲ ದಿನಗಳ ಹಿಂದಷ್ಟೇ ಹುಡುಗಿಯರ ಬ್ರೇಕಪ್ ಸಾಂಗ್ ಆಗಿ ಹೊರಬಂದ “ಎಣ್ಣೆಗೂ ಹೆಣ್ಣಿಗೂ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಅದರ ಬೆನ್ನಲ್ಲೇ ಈಗ ಹುಡುಗರ ಬ್ರೇಕಪ್ ಸಾಂಗ್ ರಿಲೀಸ್ ಆಗಿದೆ.
ಇದನ್ನೂ ಓದಿ;- ರೈತ ಹೋರಾಟದ ವಿಜಯೋತ್ಸವ-ಸಂಭ್ರಮ
“ಒಂದು ಊರಲಿ..ಕೊನೆ ಬೀದಿಲಿ, ಇದ್ಳು ಒಬ್ಬಳು ಮುದ್ದು ದೇವತೆ…’ ಎಂದು ಆರಂಭವಾಗುವ ಹಾಡು ಸಿನಿಪ್ರೇಮಿಗಳ ಮನಗೆದ್ದಿದೆ. ಶಂಕರ್ ಮಹದೇವನ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಾಯಕ, ತನ್ನ ಪ್ರೇಯಸಿಯನ್ನು ವರ್ಣಿಸುವ ಹಾಗೂ ಆಕೆಯನ್ನು ಪ್ರೀತಿಸುವ ಪರಿಯನ್ನು ಕಟ್ಟಿಕೊಡಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ನಾಯಕರಾಗಿ ನಟಿಸಿದ್ದಾರೆ. ರಚಿತಾ ರಾಮ್, ರೀಷಾ ಸೇರಿದಂತೆ ಅನೇಕರು ನಟಿಸಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿಯಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಚಿತ್ರ ಜನವರಿ 21ರಂದು ತೆರೆಕಾಣಲಿದ್ದು, ಈಗಾಗಲೇ ಈ ಸಿನಿಮಾ ಸಿನಿಪ್ರೇಮಿಗಳು ಒಂದು ಕಣ್ಣಿಟ್ಟು ಕಾಯುತ್ತಿರೋದಂತು ಸುಳ್ಳಲ್ಲ.