Advertisement

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

04:11 PM Jun 15, 2024 | Team Udayavani |

ಚಿಕ್ಕಬಳ್ಳಾಪುರ: ಕಳೆದ ವರ್ಷ ಮಳೆ ಬೆಳೆ ಇಲ್ಲದೇ ಬರದಿಂದ ಕಂಗಾಲಾಗಿದ್ದ ಜಿಲ್ಲೆಯ ಅನ್ನದಾತರಿಗೆ ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾ ರು ಪ್ರವೇಶದ ಹೊಸ್ತಿಲಲ್ಲಿಯೆ ಮಳೆರಾಯನ ಕೃಪೆ ತೋರುತ್ತಿರುವುದು ಆಶಾದಾಯಕವೆನಿಸಿದ್ದು, ಇದರಿಂದ ಒಂದಡೆ ಕೃಷಿ ಚಟುವಟಿಕೆಗಳಿಗೆ ವೇಗ ಸಿಕ್ಕರೆ ಮತ್ತೂಂದಡೆ ಗ್ರಾಮೀಣ ಜನ ಉಪ ಕಸುಬುಗಳ ಕಡೆ ಭರಪೂರ ತಮ್ಮ ಚಿತ್ತ ಹರಿಸಿದ್ದಾರೆ.

Advertisement

ಹೌದು, ಯಾವುದೇ ಶಾಶ್ವತ ನೀರಾವರಿ ಸೌಕರ್ಯ ಇಲ್ಲದ ಹೆಚ್ಚಾಗಿ ಬರ ಪ್ರದೇಶ ಹೊಂದಿರುವ ಬರಪೀಡಿತ ಬಯಲು ಸೀಮೆ ಭಾಗದ ಜಿಲ್ಲೆಗಳಲ್ಲಿ ಜೀವನೋಪಾಯಕ್ಕಾಗಿ ಗ್ರಾಮೀಣ ಕೃಷಿಕರು ಹೆಚ್ಚಾಗಿ ಉಪ ಕಸುಬುಗಳ ಕಡೆಗೆ ವಾಲಿದ್ದು, ಮುಂಗಾರು ಶುರುವಾಗಿರುವ ಬೆನ್ನಲ್ಲೇ ಜಿಲ್ಲೆಯ ಕೋಳಿ, ಕುರಿ, ಮೇಕೆ, ದನಗಳ ಸಂತೆಗೆ ಖದರ್‌ ಬಂದಿದೆ. ಕುರಿ, ಮೇಕೆಗಳ ಖರೀದಿಗೆ ಆಸಕ್ತಿ: ಹಲವು ವಾರಗಳಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ರೈತರು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಕೋಳಿ, ಮೇಕೆ, ಕುರಿ, ದನಗಳ ಖರೀದಿ ಭರಾಟೆ ಯಲ್ಲಿ ತೊಡಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೃಷಿ ಹೆಚ್ಚು ಲಾಭದಾಯಕವಲ್ಲ. ಲಾಭಕ್ಕಿಂತ ಖರ್ಚು ಹೆಚ್ಚು ಎನ್ನುವ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಗೆ ಜೊತೆ ಜೊತೆಗೆ ಹಂದಿ, ಕುರಿ, ಮೇಕೆ, ಕೋಳಿ ಸಾಕಾಣಿಕೆ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಪೆರೇಸಂದ್ರ, ಚೇಳೂರು ಮತ್ತಿತರ ಕಡೆಗಳಲ್ಲಿ ದನಗಳ ಹಾಗೂ ಕುರಿ, ಮೇಕೆ ಸಂತೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಮಳೆಗಾಲ ಆಗಿರುವ ಕಾರಣ ಕೃಷಿ ಕೂಲಿ ಕಾರ್ಮಿಕರಿಗೆ ಮೇವು, ನೀರು ಒದಗಿಸುವುದು ದೊಡ್ಡ ಸವಾಲಿನ ಕೆಲಸವಲ್ಲ. ಮುಂಗಾರು ಹಂಗಾಮಿನ ಪೂರ್ತಿ ಹಸಿರು ಮೇವಿಗೆ ಬರವಿಲ್ಲ. ಮಳೆ ಆಗುವುದರಿಂದ ಕುಡಿಯುವ ನೀರಿಗೂ ತೊಂದರೆ ಇಲ್ಲ ಎಂದು ಭಾವಿಸಿ ರೈತರು ಕುರಿ, ಮೇಕೆಗಳ ಖರೀದಿಗೆ ಆಸಕ್ತಿ ತೋರು ತ್ತಿದ್ದಾರೆ. ವರ್ಷದಲ್ಲಿ ಯಾವ ಸಂದರ್ಭದಲ್ಲಿ ಆದರೂ ಸಂಕಷ್ಟ ಎದುರು ಆದಾಗ ಅವುಗಳನ್ನು ಮಾರಿ ಕಾಸು ಮಾಡಿಕೊಳ್ಳಬಹುದೆಂದ ಚಿಂತನೆಯಿಂದ ಜಿಲ್ಲೆಯಲ್ಲಿನ ಸಣ್ಣ, ಅತಿ ಸಣ್ಣ ರೈತರು ಹಾಗೂ ದೊಡ್ಡ ರೈತರು ಕೂಡ ಹೈನುಗಾರಿಕೆ ಜೊತೆಗೆ ಕೋಳಿ, ಕುರಿ ಸಾಕಾಣಿಕೆಗೆ ಕಡಿಮೆ ಬಂಡವಾಳ ಹಾಕಿ ತಮಗೆ ಬೇಕಾದ ಒಳ್ಳೆಯ ಜಾತಿಯಯ ಕುರಿ, ಮೇಕೆ ಹಾಗೂ ಕೋಳಿ ಮರಿಗಳ ತಳಿಗಳನ್ನು ಅಳೆದು, ತೊಗಿ ಖರೀದಿಗೆ ಮುಂದಾಗಿರುವ ದೃಶ್ಯಗಳು ಜಿಲ್ಲೆಯಲ್ಲಿ ಕಂಡು ಬರುತ್ತಿವೆ.

ಒಟ್ಟಿನಲ್ಲಿ ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಮಳೆ ಶುಭಾರಂಭ ಮಾಡಿರುವ ಬೆನ್ನಲ್ಲೇ ಕೃಷಿ ಚಟುವಟಿಕೆಗಳು ಸದ್ದಿಲ್ಲದೇ ಬಿರುಸುಗೊಂಡಿದ್ದು ಒಂದರಡೆಯಾದರೆ ಮತ್ತೂಂದು ಕಡೆ ಗ್ರಾಮೀಣ ಭಾಗದ ರೈತರು, ಕೃಷಿ ಕೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನೆರವಾಗುವ ಹೈನುಗಾರಿಕೆ, ಕೋಳಿ, ಮೇಕೆ, ಹಂದಿ ಮತ್ತಿತರ ಉಪ ಕಸುಬುಗಳ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಜಿಲ್ಲೆಯ ಎದ್ದು ಕಾಣುತ್ತಿದ್ದು, ರೈತರಿಗೆ ಉಪ ಕಸುಬುಗಳನ್ನು ಇನ್ನಷ್ಟು ಪರಿಣಾಮಕಾ ರಿಯಾಗಿ ನಡೆಸಲು ಕೃಷಿ ತಜ್ಞರ ಸೂಕ್ತ ಮಾರ್ಗದರ್ಶನ, ತಾಂತ್ರಿಕ ನೆರವು ಅಗತ್ಯವಾಗಿ ಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜಿಲ್ಲಾಡಳಿತ, ಸಂಬಂದಪಟ್ಟ ಇಲಾಖೆಗಳು ಕಾಳಜಿ ತೋರಬೇಕಿದೆ.

ಬಕ್ರೀದ್‌ ಹಬ್ಬಕ್ಕೆ ಜಿಲ್ಲೆಯಲ್ಲಿ ಕುರಿ, ಮೇಕೆ, ಟಗರುಗಳು ಬಲು ದುಬಾರಿ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕಾರಣದಿಂದ ಜಿಲ್ಲೆಯ ಸಂತೆಗಳಲ್ಲಿ ಕುರಿ, ಮೇಕೆ, ಕೋಳಿ, ದನಗಳ ಸಂತೆಯಲ್ಲಿ ಖರೀದಿ ಭರಾಟೆ ಒಂದಡೆ ಜೋರಾದರೆ ಮತ್ತೂಂದಡೆ, ಜೂ.16 ರಂದು ನಡೆಯಲಿರುವ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ಕುರಿ, ಮೇಕೆಗಳ ಸಂತೆಗೆ ಖದರ್‌ ಬಂದಿದೆ. ಬಕ್ರೀದ್‌ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಭಾಂದವರು ಮೇಕೆ, ಕುರಿಗಳ ಖರೀದಿಗೆ ಮುಗಿ ಬಿದ್ದಿರುವ ಪರಿಣಾಮ ಜಿಲ್ಲೆಯ ಕುರಿ, ಮೇಕೆ ಸಂತೆಗಳಲ್ಲಿ ಅವುಗಳ ದರ ಗಗನಕ್ಕೇರಿದೆ.

Advertisement

ಮೊದಲೇ ಮಾರುಕಟ್ಟೆಯಲ್ಲಿ ಕುರಿ, ಮೇಕೆ ಮಾಂಸ ಕೆಜಿ 800 ರೂ, ಗಡಿ ತಲುಪಿದ್ದು ಕಳೆದ ವರ್ಷ ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದ್ದರಿಂದ ಮೇಕೆ, ಕುರಿಗಳ ಸಾಕಾಣಿಕೆಗೆ ಹಿನ್ನಡೆ ಆಗಿತ್ತು. ಇದರ ಪರಿಣಾಮ ಬಕ್ರೀದ್‌ ಹಬ್ಬದಿಂದಾಗಿ ಕುರಿ, ಮೇಕೆಗಳಿಗೆ ಹೆಚ್ಚು ಬೇಡಿಕೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಂತೆಗೆ ಕುರಿ, ಮೇಕೆಗಳು ಬರುತ್ತಿಲ್ಲ. ಹೀಗಾಗಿ ಬಕ್ರೀದ್‌ ಹಬ್ಬಕ್ಕೆ ಕುರಿ, ಮೇಕೆಗಳ ದರ ದುಪ್ಪಟ್ಟುಗೊಂಡಿದ್ದು, ಒಂದು ಕುರಿ 6000 ರಿಂ 7000, 8000 ರೂ, ವರೆಗೂ ಮಾರಾಟ ಆಗುತ್ತಿದ್ದರೆ ಮೇಕೆಗಳ ದರ 10,000 ರಿಂದ 12,000, 13,000 ಉತ್ತಮ ಕೊಬ್ಬಿನಾಂಶ ಇರುವ ಕುರಿ, ಮೇಕೆಗಳಿಗೆ ಉತ್ತಮ ದರ ಸಿಗುತ್ತಿದೆ.

ರೈತರು ಒಂದೇ ರೀತಿಯ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳ ಬಾರದು. ಕೃಷಿ ಜೊತೆಗೆ ಹೈನುಗಾರಿಕೆ, ಹಂದಿ, ಕೋಳಿ, ಕುರಿ, ಮೇಕೆ ಸಾಕಾಣಿಕೆಯಂತಹ ಉಪ ಕಸು ಬುಗಳನ್ನು ರೂಢಿಸಿಕೊಂಡರೆ ರೈತರಿ ಗೆ ಆದಾಯ ಹೆಚ್ಚಾಗುತ್ತದೆ. ಉಪ ಕಸುಬುಗಳಲ್ಲಿನ ಲಾಭದ ಬಗ್ಗೆ ಹಾಗೂ ಉಪ ಕಸುಬುಗಳ ಕೈಗೊಳ್ಳುವ ಬಗ್ಗೆ ರೈತರಿಗೆ ಸೂಕ್ತ ಮಾರ್ಗ ದರ್ಶನ, ತರಬೇತಿ ಅವಶ್ಯಕವಾಗಿದೆ. – ಶ್ರೀನಿವಾಸ, ಯುವ ರೈತರು. ಪೋಶೆಟ್ಟಿಹಳ್ಳಿ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next