ಚಳ್ಳಕೆರೆ: ಕರ್ನಾಟಕ ರಾಜ್ಯದ ಸಿರಿಸಂಪತ್ತಾದ ಶ್ರೀಗಂಧವನ್ನು ಸಮೃದ್ಧಿಯಾಗಿ ಬೆಳೆಯುವುದರ ಜೊತೆಗೆ ವನಕೃಷಿಯನ್ನು ಸಹ ಪ್ರೋತ್ಸಾಹಿಸಲು ನಿವೃತ್ತ ಜಿಲ್ಲಾಧಿಕಾರಿ ಕೆ.ಆರ್. ಅಮರನಾರಾಯಣ ಅಧ್ಯಕ್ಷತೆಯಲ್ಲಿ ಅಖೀಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಅಸ್ಥಿತ್ವಕ್ಕೆ ಬಂದಿದ್ದು, ಜಿಲ್ಲೆಯಾದ್ಯಂತ ಈ ಸಂಘವನ್ನು ಸ್ಥಾಪಿಸಿ ಶ್ರೀಗಂಧ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ, ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧ್ಯಕ್ಷ ಕೆ.ರವಿಕುಮಾರ್ ಯಲ್ಲದಕೆರೆ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಂಘದ ನೂತನ ಸಮಿತಿ ರಚನೆ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಸಮುದಾಯ ಈ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಗೌರವಾಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಈಗಾಗಲೇ 100ಕ್ಕೂ ಹೆಚ್ಚು ಬೆಳೆಗಾರರನ್ನು ಗುರುತಿಸಲಾಗಿದೆ. ಅವರ ಈಗಾಗಲೇ ಶ್ರೀಗಂಧ ಮತ್ತು ವನಕೃಷಿಯ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಬೆಳೆಯುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ಧಾರೆ. ರೈತರಿಗೆ ಆರ್ಥಿಕವಾಗಿ ಹೆಚ್ಚು ಉಪಯುಕ್ತವಾಗುವ ಈ ಕಾರ್ಯದಲ್ಲಿ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಿವೃತ್ತ ಬ್ಯಾಂಕ್ ಅಧಿಕಾರಿ ದೊಡ್ಡೇರಿ ಎಸ್.ರುದ್ರಮುನಿ, ತಾಲೂಕಿನಾದ್ಯಂತ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ರೈತರು ಶ್ರೀಗಂಧ ಬೆಳೆ ಬೆಳೆಯಲು ಉತ್ಸಾಹ ತೋರಿದ್ದಾರೆ. ಅದರಂತೆ ನಾನು ಸಹ ತಮ್ಮ ತೋಟದಲ್ಲಿ ಸುಮಾರು 100ಕ್ಕೂ ಹೆಚ್ಚು ಶ್ರೀಗಂಧ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಶಕ್ತಿಹೊಂದಲು ಸಹಕಾರಿಯಾಗಿದೆ. ಶ್ರೀಗಂಧ ಕಳ್ಳತನವಾಗಲಿದೆ ಎಂಬ ರೈತರ ಮನದಲ್ಲಿ ಇರುವ ಭಯವನ್ನು ದೂರ ಮಾಡಲು ಈಗಾಗಲೇ ಜಿಪಿಎಸ್ ಅಳವಡಿಗೆ ಚಿಂತನೆ ನಡೆದಿದೆ. ಸರ್ಕಾರ ಶ್ರೀಗಂಧ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಬ್ಸಿಡಿ, ಬೆಳೆಗೆ ಪ್ರೋತ್ಸಾಹ ಧನ ಸಹಾಯವನ್ನು ಮಾಡಬೇಕು, ಶ್ರೀಗಂಧ ಬೆಳೆಯನ್ನು ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಪರಿವರ್ತನೆ ಮಾಡಬೇಕು. ಮುಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಜಿ.ಸೋಮಶೇಖರ್, ರೆಡ್ಡಿಹಳ್ಳಿವೀರಣ್ಣ, ಡಿ.ಚಂದ್ರಣ್ಣ, ವೆಂಕಟೇಶ್, ಎಸ್. ಶಿವಕುಮಾರ್, ಮಧುಮತಿ, ರಾಮಣ್ಣ, ರಾಜಣ್ಣ, ಶ್ರೀನಿವಾಸ್‌ಮೂರ್ತಿ, ಕಿರಣ್‌ಕುಮಾರ್, ಚಂದ್ರಣ್ಣ, ಎಸ್.ಹನುಮಂತರಾಯ, ಶ್ರೀಕಂಠಮೂರ್ತಿ ಮುಂತಾದವರು ಉಪಸ್ಥಿತರಿದ್ದರು.