Advertisement

ಕಾಫಿ ಕಿಂಗ್‌ಗೆ ಸ್ಯಾಂಡಲ್‌ವುಡ್‌ ಕಂಬನಿ

09:38 AM Aug 02, 2019 | Lakshmi GovindaRaj |

“ಕೆಫೆ ಕಾಫಿ ಡೇ’ (ಸಿಸಿಡಿ) ಅಂದ್ರೆ ಕೇವಲ ಯುವಕ-ಯುವತಿಯರಿಗೆ ಮಾತ್ರವಲ್ಲ, ಚಿತ್ರರಂಗದ ಮಂದಿಗೂ ಹಾಟ್‌ ಫೇವರೇಟ್‌ ಪ್ಲೇಸ್‌. ಅದೆಷ್ಟೋ ಚಿತ್ರಗಳ ಮಾತು-ಕಥೆ ಶುರುವಾಗುವುದು ಇದೇ “ಕೆಫೆ ಕಾಫಿ ಡೇ’ಯಲ್ಲಿ. ಹಾಗಾಗಿ ಕನ್ನಡ ಚಿತ್ರರಂಗಕ್ಕೂ “ಕೆಫೆ ಕಾಫಿ ಡೇ’ಗೂ ಅನೇಕ ವರ್ಷಗಳ ಅವಿನಾಭಾವ ನಂಟಿದೆ. ಇಂದಿಗೂ ಅನೇಕ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು, ಕಲಾವಿದರು ತಮ್ಮ ಚಿತ್ರಗಳ ಚರ್ಚೆಗೆ ಮೊದಲು ಆಯ್ಕೆ ಮಾಡಿಕೊಳ್ಳುವ ತಾಣ ಅಂದ್ರೆ ಅದು “ಕೆಫೆ ಕಾಫಿ ಡೇ’.

Advertisement

ಹೀಗೆ ಚಿತ್ರರಂಗದ ಅದೆಷ್ಟೋ ವಿಷಯಗಳನ್ನು ತನ್ನೊಳಗೆ ಹಿಡಿದುಕೊಂಡು ಮೂಕವಿಸ್ಮಿತನಂತೆ ಇರುವ “ಕೆಫೆ ಕಾಫಿ ಡೇ’ಯ ಹಿಂದಿನ ಸಾರಥಿ ವಿ.ಜಿ ಸಿದ್ಧಾರ್ಥ ಅವರ ಅಕಾಲಿಕ ನಿಧನ ಚಿತ್ರರಂಗದ ಮಂದಿಗೂ ಆಘಾತವನ್ನು ಉಂಟುಮಾಡಿದೆ. “ಕಾಫಿ ಕಿಂಗ್‌’ ಸಿದ್ಧಾರ್ಥ್ ಅವರ ನಿಧನಕ್ಕೆ ಚಿತ್ರೋದ್ಯಮದ ಅನೇಕರು ಕಂಬಿನಿ ಮಿಡಿದಿದ್ದಾರೆ. ಟ್ವಿಟ್ಟರ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ.

“ವಿ.ಜಿ ಸಿದ್ಧಾರ್ಥ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೀನಿ. ನಮ್ಮ ಕಾಲದ ಮಹಾನ್‌ ಕ್ರಿಯಾತ್ಮಕ ಉದ್ಯಮಿ. ಕಾಫಿಯಿಂದ ಅನೇಕರಿಗೆ ಹೇಗೆ ಉದ್ಯೋಗಾವಕಾಶ ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಉದ್ಯಮಿಯಾಗಿ ಅವರ ಪಯಣ ಮತ್ತು ಚಾರಿಟಿಗಳಿಗಾಗಿ ಅವರು ಮಾಡಿದ ಕೆಲಸ ಯಾವಾಗಲು ನೆನಪಿನಲ್ಲಿ ಉಳಿಯುತ್ತೆ. ಆತ್ಮಕ್ಕೆ ಶಾಂತಿ ಸಿಗಲಿ’
-ಪುನೀತ್‌ರಾಜಕುಮಾರ್‌, ನಟ

“ಸಿದ್ಧಾರ್ಥ್ ಮತ್ತು ಅವರ ಕುಟುಂಬದವರು ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಆತ್ಮೀಯರು. ಎಷ್ಟೋ ಜನರ ಬದುಕಿಗೆ ಬೆಳಗಾದವರು ಅವರು. ಅಂಥವರು ಈ ರೀತಿ ನಿಧನರಾಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ಸಿದ್ಧಾರ್ಥ್ ನಿಧನದ ಸುದ್ದಿ ಕೇಳಿ ತುಂಬ ದುಃಖವಾಗುತ್ತಿದೆ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’
-ಶಿವರಾಜಕುಮಾರ್‌, ನಟ

“ನನ್ನ ಗುರುಗಳು ಎಸ್‌.ಎಂ ಕೃಷ್ಣ ರವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ, ನನ್ನ ಅನೇಕ ಹಿಂಬಾಲಕರಿಗೆ ಸಿಸಿಡಿಯಲ್ಲಿ ಕೆಲಸಕೂಟ್ಟವರು. ನನ್ನ ಗುರುಗಳು ಎಸ್‌.ಎಂ ಕೃಷ್ಣ ಮತ್ತು ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ’
-ಜಗ್ಗೇಶ್‌, ನಟ

Advertisement

“ನಿಮ್ಮ ಕನಸನ್ನು ನನಸು ಮಾಡಿ ಆ ಸುಂದರ ಸೂರಿನಡಿ ಲಕ್ಷಾಂತರ ಯುವಕ ಯುವತಿಯರು ಕನಸು ಕಾಣುವಂತೆ ಮಾಡಿದ ಶ್ರೇಷ್ಠ ಉದ್ಯಮಿ ಸಿದ್ಧಾರ್ಥ. ಬುದ್ದನಾಗುವ ಮುಂಚೆ ಈ ರೀತಿ ಮನಸ್ಸು ಮಾಡಬಾರದಿತ್ತು. ನಮ್ಮ ಕರುನಾಡಿನ ಕಾಫಿಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ ಒಡೆಯನ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಹುಟ್ಟಿ ಬನ್ನಿ ಸಿದ್ಧಾರ್ಥ’
-ಉಪೇಂದ್ರ, ನಟ ಮತ್ತು ನಿರ್ದೇಶಕ

“ನಮ್ಮ ಮಂಡ್ಯ ಜಿಲ್ಲೆಯವರಾದ ಶ್ರೀ ಎಸ್‌.ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅವರ ಸಾವು ತೀವ್ರ ಆಘಾತ ತಂದಿದೆ. ಎಸ್‌.ಎಂ.ಕೃಷ್ಣರವರಿಗೂ ಹಾಗೂ ಅವರ ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಸಿದ್ಧಾರ್ಥ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ’
-ಸುಮಲತಾ ಅಂಬರೀಶ್‌, ನಟಿ ಮತ್ತು ಸಂಸದೆ

“ಕಾಫಿ ಡೇ ನನ್ನ ಫೇವರೆಟ್‌ ಸ್ಪಾಟ್‌ಗಳಲ್ಲಿ ಒಂದು. ವೈಯಕ್ತಿಕವಾಗಿ ಸಿದ್ಧಾರ್ಥ್ ಅವರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಕಾಫಿ ಉದ್ಯಮದಲ್ಲಿ ಅವರು ಮಾಡಿದ ಸಾಧನೆ, ಜನರಿಗೆ ಮಾಡಿದ ಸಹಾಯ ಕೇಳಿ ನಾನು ಬೆರಗಾಗಿ ಹೋಗಿದ್ದೆ. ಅಂಥವರ ನಿಧನದ ವಿಷಯ ಕೇಳಿ ಬೇಸರವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ’
-ರಾಗಿಣಿ, ನಟಿ

“ನನ್ನ ಮೊದಲಸಿನಿಮಾ “ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ’ ಚಿತ್ರದ ಕಥೆಯನ್ನ ರಕ್ಷಿತ್‌ ಶೆಟ್ಟಿಗೆ, ಶ್ವೇತಾ ಶ್ರೀವಾಸ್ತವ್‌ಗೆ ಕಥೆ ರೀಡಿಂಗ್‌ ಮಾಡಿದ್ದು ಕೆಫೆ ಕಾಫಿ ಡೇನಲ್ಲಿ. ಇದು ಒಂದು ಉದಾಹರಣೆ ಅಷ್ಟೇ. ಹೀಗೆ ಹೇಳುತ್ತ ಹೋದ್ರೆ ಕಾಫಿ ಡೇ ಸಂಗತಿಗಳು ಅದೆಷ್ಟೋ ಇದೆ. ಇದಕ್ಕೆಲ್ಲ ಕಾರಣರಾದವರು ಕಾಫಿ ಡೇ ಹಿಂದೆ ಕಾಣದಂತೆ ಇದ್ದವರು, ಇಂದು ಕಾಣದಂತಾಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’
– ಸಿಂಪಲ್‌ ಸುನಿ, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next