ಸಿಕ್ಸರ್ ಮೂಲಕ ಚಿತ್ರರಂಗಕ್ಕೆ ಬಂದು, ಅವ್ವ ಸಿನೆಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ ನಿವೇದಿತಾ, ಆ ನಂತರ ಸಾಕಷ್ಟು ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂಥ ಯಶಸ್ಸು ತಂದುಕೊಡಲಿಲ್ಲ. ಹೀಗಿರುವಾಗಲೇ ಕಲಾತ್ಮಕ, ಆಫ್ಬೀಟ್ ತರಹದ ಸಿನೆಮಾಗಳತ್ತ ವಾಲಿದ ನಿವೇದಿತಾಗೆ ಅಲ್ಲಿ ಒಳ್ಳೆಯ ಹೆಸರು ಸಿಕ್ಕಿದ್ದು ಸುಳ್ಳಲ್ಲ. ತಮ್ಮ ಸಿನಿಮಾ ಸಂಖ್ಯೆ ಹೆಚ್ಚಾಗಬೇಕು, ಸಿಕ್ಕ ಸಿಕ್ಕ ಸಿನೆಮಾಗಳನ್ನು ಒಪ್ಪಿಕೊಳ್ಳಬೇಕೆಂಬ ನಂಬರ್ ಗೇಮ್ ರೇಸ್‌ನಿಂದ ದೂರವೇ ಇದ್ದ ನಿವೇದಿತಾ ತಮಗೆ ಇಷ್ಟವಾದ ಸಿನೆಮಾಗಳನ್ನಷ್ಟೇ ಮಾಡುತ್ತ ಬಂದಿದ್ದಾರೆ. ಈಗ ನಿವೇದಿತಾ ಮತ್ತೂಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದು ಸೂರಿ ನಿರ್ದೇಶನದ ಸಿನೆಮಾ ಎಂಬುದು ವಿಶೇಷ.
ಹೌದು, ಟಗರು ಚಿತ್ರದ ದೊಡ್ಡ ಯಶಸ್ಸಿನ ನಂತರ ಸೂರಿ ಯಾವ ಸಿನೆಮಾ ಮಾಡುತ್ತಾರೆಂಬ ಕುತೂಹಲ ಅನೇಕರಿಗಿತ್ತು. ಅದಕ್ಕೆ ಉತ್ತರವಾಗಿದ್ದು ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರ. ಇದು ಸೂರಿಯ ಹೊಸ ಚಿತ್ರ. ಟಗರು ಚಿತ್ರದಲ್ಲಿ ಹವಾ ಸೃಷ್ಟಿಸಿದ ಡಾಲಿ ಪಾತ್ರದಲ್ಲಿ ನಟಿಸಿದ ಧನಂಜಯ್ ಪಾಪ್‌ಕಾರ್ನ್ ಹೀರೋ. ಈಗ ಈ ಚಿತ್ರಕ್ಕೆ ನಾಯಕಿಯಾಗಿ ನಿವೇದಿತಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಟಗರು ಸಿನೆಮಾದ ಚಿತ್ರೀಕರಣದ ವೇಳೆ ನಿವೇದಿತಾ ಸೆಟ್‌ಗೆ ಹೋಗಿದ್ದರಂತೆ. ಆಗ ಸೂರಿ ಹೊಸ ಸಿನಿಮಾ ಬಗ್ಗೆ ಮಾತನಾಡಿದ್ದರಂತೆ. ಹಾಗಂತ ನಾಯಕಿ ಎಂದು ಹೇಳಿರಲಿಲ್ಲವಂತೆ. ಆದರೆ, ಇತ್ತೀಚೆಗೆ ಫೋನ್ ಮಾಡಿ, “ಹೊಸ ಚಿತ್ರಕ್ಕೆ ನೀವೇ ನಾಯಕಿ’ ಎಂದರಂತೆ. ಇಲ್ಲಿ ನಿವೇದಿತಾ ದೇವಿಕಾ ಎಂಬ ಪಾತ್ರ ಮಾಡುತ್ತಿದ್ದಾರೆ.
ಅಂದಹಾಗೆ, ನಿವೇದಿತಾ ನಟಿಸಿದ ಶುದ್ಧಿ ಚಿತ್ರ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತ್ತು. ಆದರೆ, ನಿವೇದಿತಾ ಮಾತ್ರ ಆ ನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣ ಅವರ ಟ್ರಾವೆಲ್ ಕ್ರೇಜ್. ನಿವೇದಿತಾಗೆ ಬೇರೆ ಬೇರೆ ಜಾಗಗಳಿಗೆ ಟ್ರಾವೆಲ್ ಹೋಗುವುದೆಂದರೆ ಇಷ್ಟವಂತೆ. ಈ ಬಾರಿ ನಾರ್ಥ್ ಈಸ್ಟ್ ರಾಜ್ಯಗಳನ್ನು ಸುತ್ತಾಡಿ ಬಂದರಂತೆ.
ಇನ್ನು, ನಿವೇದಿತಾ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ನಿವೇದಿತಾ ಸಾಕಷ್ಟು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದಾರೆ. ಕೆಲವು ಪಾತ್ರಗಳು ಹೆಸರು, ತೃಪ್ತಿ ಕೊಟ್ಟರೆ ಇನ್ನು ಕೆಲವು ಹೇಳಹೆಸರಿಲ್ಲದಂತೆ ಹೋಗಿವೆ. “ನನಗೆ ನನ್ನ ಒಟ್ಟು ಕೆರಿಯರ್ ಬಗ್ಗೆ ತೃಪ್ತಿ ಇದೆ. ನಾನು ಕೆರಿಯರ್ ಮತ್ತು ಜೀವನವನ್ನು ಬೇರೆಯಾಗಿ ನೋಡುವುದಿಲ್ಲ. ಸಿನೆಮಾ ಕೂಡಾ ಜೀವನದ ಒಂದು ಭಾಗ. ಮಾಡಿರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ ನನಗೆ ತೃಪ್ತಿ ಇದೆ. ವೈಯಕ್ತಿಕವಾಗಿ ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ನಾನು ಇನ್ನೂ ಸಾಧಿಸುವುದು ತುಂಬಾ ಇದೆ. ಆ ವಿಷಯದಲ್ಲಿ ನನಗೆ ತೃಪ್ತಿ ಇಲ್ಲ. ಒಟ್ಟಾರೆಯಾಗಿ ಬೇವು-ಬೆಲ್ಲದ ತರಹ ಜೀವನ ಸಾಗಿದೆ. ಇಲ್ಲಿ ಏರಿಳಿತಗಳು ಸಹಜ’ ಎನ್ನುತ್ತಾರೆ ನಿವೇದಿತಾ.