ಚಿತ್ರರಂಗ ಎಂಬುದು ಕೇವಲ ಪುರುಷ ಪ್ರಧಾನ ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಆದರೆ, ಬದಲಾದ ಸನ್ನಿವೇಶದಲ್ಲಿ ಮಹಿಳೆಯರು ಸದ್ದಿಲ್ಲದೇ ಚಿತ್ರರಂಗದಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಿದ್ದಾರೆ. ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅದು ನಟನೆ, ನಿರ್ಮಾಣದಿಂದ ಹಿಡಿದು ನಿರ್ದೇಶನ, ಸಂಗೀತ, ಛಾಯಾಗ್ರಹಣ, ಸಂಕಲನ… ಹೀಗೆ ಪ್ರತಿ ವಿಭಾಗಗಳಲ್ಲೂ ಮಹಿಳೆಯರಿಗೆ ಪ್ರಾಮುಖ್ಯತೆ ಸಿಗುತ್ತಿದೆ. ಭರವಸೆಯ ಬೆಳಕು ಮೂಡುತ್ತಿದೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಾಮುಖ್ಯತೆಯ ಬಗ್ಗೆ ನಟಿಯರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮಹಿಳೆಯರು ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ತಾವು ಏನು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ. ಇನ್ನೂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತ ಕೂರುವುದರಲ್ಲಿ ಅರ್ಥವಿಲ್ಲ. ಈಗ ನಮ್ಮ ಸಾಮರ್ಥ್ಯವನ್ನು ನಾವು ಇನ್ನಷ್ಟು ಹೆಚ್ಚಿಸಿಕೊಂಡು, ಮುಂದೆ ಸಾಧಿಸಬೇಕಾಗಿರುವುದರ ಬಗ್ಗೆ ಯೋಚಿಸಬೇಕು. ಸಿನಿಮಾದಲ್ಲಂತೂ ಮಹಿಳೆಯರು ಕೆಲಸ ಮಾಡೋದಕ್ಕೆ ಸಾಧ್ಯವೇ ಇಲ್ಲ ಅಂಥ ಅಂದುಕೊಂಡಿದ್ದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸಿಗಬೇಕಾದ ಗೌರವ ಸಿಗುತ್ತಿದೆ. ಒಬ್ಬ ಮಹಿಳೆಯಾಗಿ ಅದು ವೈಯಕ್ತಿಕವಾಗಿ ನನ್ನ ಅನುಭವಕ್ಕೆ ಬಂದಿದೆ.
-ಹರಿಪ್ರಿಯಾ, ನಟಿ
ಹಿಂದಿನವರು ಹೇಳಿದ್ದನ್ನ ಕೇಳಿದ್ರೆ, ಅದೆಲ್ಲ ನಿಜಾನಾ? ಅನ್ನೋವಷ್ಟರ ಮಟ್ಟಿಗೆ ನಾವು ಮುಂದಿದ್ದೇವೆ. ನನ್ನ ಪ್ರಕಾರ ಸಿನಿಮಾದಲ್ಲಿ ಮಹಿಳೆಯರಿಗೆ ಹಿಂದೆಂದಿಗಿಂತಲೂ, ಉತ್ತಮ ಅವಕಾಶ ಸಿಗುತ್ತಿದೆ. ಪುರುಷರಿಗೆ ಯಾವುದಕ್ಕೂ ಕಡಿಮೆಯಿಲ್ಲದೆ ಮಹಿಳೆಯರು ಕೆಲಸ ಮಾಡುತ್ತಾರೆ. ಈ ಬೆಳವಣಿಗೆ ನೋಡಿದ್ರೆ, ತುಂಬ ಖುಷಿಯಾಗುತ್ತದೆ. ನಮಗೆ ಪೂರಕವಾಗುವಂಥ ವಾತಾವರಣ ಎಲ್ಲ ಕಡೆ ನಿರ್ಮಾಣವಾಗುತ್ತಿದೆ. ನಾನೊಬ್ಬಳು ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಈ ಥರದ ವಾತಾವರಣ ನೋಡಿದ್ರೆ, ಆತ್ಮವಿಶ್ವಾಸ ಮೂಡುತ್ತದೆ. ಇವತ್ತು ಸಿಗುವ ಅವಕಾಶ ಬಳಸಿಕೊಂಡು ಅಂದುಕೊಂಡಿದ್ದನ್ನು ಸಾಧಿಸಬೇಕು ಅಷ್ಟೇ
-ಖುಷಿ, ನಟಿ
ಇದನ್ನೂ ಓದಿ:ಮೈಸೂರು ವಿವಿಯಿಂದ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಮಹಿಳಾ ಕಾನ್‌ಸ್ಟೇಬಲ್
ನನ್ನ ಪ್ರಕಾರ ಪುರುಷರು, ಮಹಿಳೆಯರು ಎಂದಿಗೂ ಸಮಾನರಲ್ಲ. ಪ್ರಕೃತಿಯಲ್ಲೇ ಪುರುಷ – ಮಹಿಳೆ ನಡುವೆ ಅನೇಕ ಸಮಾನತೆ ಇದೆ. ಒಂದೊಂದು ವಿಚಾರದಲ್ಲಿ ಒಬ್ಬೊಬ್ಬರು ಮುಂದಿರುತ್ತಾರೆ. ಹೀಗಿರುವಾಗ ಎಲ್ಲರೂ ಸಮಾನರು ಎನ್ನಲು ಹೇಗೆ ಸಾಧ್ಯ? ಆದ್ರೆ ನಾವಿರುವ ನಾಗರೀಕ ಸಮಾಜದಲ್ಲಿ ಈ ಸಮಾನತೆ ತರುವ ಪ್ರಯತ್ನ ಮಾಡಬಹುದು. ಅದು ನಮ್ಮಿಂದಲೇ ಆಗಬೇಕು. ಆ ಬದಲಾವಣೆ ನನಗನಿಸಿದಂತೆ, ನಿಧಾನವಾಗಿ ಆಗ್ತಿದೆ. ಅದರಲ್ಲೂ ಸಿನಿಮಾದಲ್ಲಿ ಸಾಕಷ್ಟು ಸುಧಾರಿಸುತ್ತಿದೆ. ಮಹಿಳೆಯರ ಕೆಲಸಕ್ಕೆ ಮನ್ನಣೆ, ಗೌರವ ಎಲ್ಲ ಸಿಗುತ್ತಿದೆ. ಹಿರಿಯ ನಟಿಯರ ಅನುಭವಗಳನ್ನು ಕೇಳಿದ್ರೆ, ಈಗಿನವರು ಎಷ್ಟೋ ಮುಂದಿದ್ದೇವೆ ಅನಿಸುತ್ತದೆ. ಕಾಲ ಎಲ್ಲದನ್ನೂ ಬದಲಾಯಿಸುತ್ತಿದೆ.
-ಅದಿತಿ ಪ್ರಭುದೇವ, ನಟಿ
ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಪುರುಷರು – ಮಹಿಳೆಯರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಇಲ್ಲಿ ಯಾರೂ, ಮೇಲು-ಕೀಳು ಅಂಥ ತಾರತಮ್ಯ ಮಾಡುವಂತಿಲ್ಲ. ಬದಲಾಗಿ ಸಮಾನ ಸ್ಪರ್ಧೆ ಶುರುವಾಗುತ್ತಿದೆ. ಪುರುಷರಿಗೆ, ಮಹಿಳೆಯರು ನೇರಾನೇರ ಸ್ಪರ್ಧೆ ಮಾಡುವ ವಾತಾವರಣ ಎಲ್ಲ ಕಡೆ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿವೆ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು, ಸ್ಪರ್ಧೆ ಮಾಡಿ, ಗೆಲ್ಲಬೇಕು. ಇಲ್ಲಿ ಯಾರನ್ನೋ ದೋಷಿಸುತ್ತ ಕೂರುವುದಕ್ಕಿಂತ, ಅಂದುಕೊಂಡಿದ್ದನ್ನು ಮಾಡಿ ಕೆಲಸದ ಮೂಲಕವೇ ಉತ್ತರಿಸಬೇಕು.
-ಆಶಾ ಭಟ್, ನಟಿ