Advertisement

ಕಲಾವಿದರು ಬಿಝಿನೆಸ್ ಮಾಡಬಾರದೇ?

01:24 PM Apr 05, 2018 | Sharanya Alva |

ಅಶ್ವತ್ಥ್ ನೀನಾಸಂ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಜಯಮಹಲ್‌’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅಪಪ್ರಚಾರದಿಂದ ಕಳೆದೇ ಹೋಗಿದ್ದ ಅಶ್ವತ್ಥ್, ಈಗ ಕ್ರಮೇಣ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ “ಯೋಗಿ ದುನಿಯಾ’ದಲ್ಲಿ ಅವರಿಗೊಂದು ಒಳ್ಳೆಯ ಪಾತ್ರವಿತ್ತು. ದಲ್ಲದೆ “ಕೆಜಿಎಫ್’, “ಕಾನೂರಾಯಣ’, “ನರಗುಂದ ಬಂಡಾಯ’ ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರಿಗೆ ಒಳ್ಳೆಯ ಪಾತ್ರವಿದೆಯಂತೆ ಮತ್ತು ಅವರಿಗೂ ಈ ಚಿತ್ರಗಳ ಬಗ್ಗೆ ನಂಬಿಕೆ ಇದೆ.

Advertisement

ಎಲ್ಲಾ ಸರಿ, ಅದೇನೋ ಅಪಪ್ರಚಾರದಿಂದ ಕಳದೇ ಹೋಗಿದ್ದ ಅಂತ ಬರೆದಿದ್ರಲ್ಲ, ಅದೇನದು ಎಂಬ ಪ್ರಶ್ನೆ ಬರಬಹುದು. ಅದೇನೆಂದರೆ, ಅಶ್ವತ್ಥ್ ನಟನೆಯ ಜೊತೆಗೆ ಬನ್ನೂರು ಬಳಿ ಕೃಷಿ ಮಾಡಿಕೊಂಡಿದ್ದಾರೆ. ಒಂದಿಷ್ಟು ಹಸು ಸಾಕಿದ್ದಾರೆ. ಹಾಗಾಗಿ ಅವರು ಅದರಲ್ಲೇ ಬಿಝಿಯಾಗಿದ್ದಾರೆ ಮತ್ತು ಅವರು ನಟಿಸುವುದು ಕಷ್ಟ ಎಂಬ ಸುದ್ದಿ ಓಡಾಡಿಕೊಂಡಿತ್ತು. ಈ ಅಪಪ್ರಚಾರದಿಂದ ಅಶ್ವತ್ಥ್ ಒಂದಿಷ್ಟು ಚಿತ್ರಗಳನ್ನು ಮತ್ತು ಪಾತ್ರಗಳನ್ನು ಕಳೆದುಕೊಂಡರು.

ಈ ಕುರಿತು ಮಾತನಾಡುವ ಅವರು, “ನಮ್ಮಂಥವರಿಗೆ ಪ್ರತಿ ಚಿತ್ರವೂ ಒಂದು ಹೋರಾಟ, ಪ್ರತಿ ಚಿತ್ರವೂ ಅನ್ನ. ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಂತ ಅಪಪ್ರಚಾರ ಮಾಡಿದರು. ನನಗೆ ಅಭಿನಯವೇ ಜೀವನ. ಅದರ ಜೊತೆಗೆ ಕೃಷಿ ಸಹ ಮಾಡಿಕೊಂಡಿದ್ದೀನಿ. ಇವತ್ತು ಯಾರೂ ಸಹ 365 ದಿನಗಳ ಕಾಲ ಬಿಝಿ ಇರುವುದಿಲ್ಲ. ದೊಡ್ಡ ದೊಡ್ಡ ಹೀರೋಗಳು ಸಹ ಬೇರೆ ಬೇರೆ ಬಿಝಿನೆಸ್‌ಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಟನೆ ಜೊತೆಗೆ ಚಾನಲ್‌ಗ‌ಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇನ್ನು ಬಾಲಿವುಡ್‌ನ‌ಲ್ಲಿ ಎಲ್ಲರೂ ಒಂದಲ್ಲ ಒಂದು ಬಿಝಿನೆಸ್‌ ಇಟ್ಟುಕೊಂಡಿದ್ದಾರೆ. 

ನಟನೆ ಜೊತೆಗೆ ಅದನ್ನೂ ನೋಡಿಕೊಳ್ಳುತ್ತಾರೆ. ಇಷ್ಟಕ್ಕೂ ಯಾಕೆ ಮಾಡಬಾರದು ಹೇಳಿ?’ ಎಂದು ಪ್ರಶ್ನಿಸುತ್ತಾರೆ ಅವರು. “ನಿಜ ಹೇಳಬೇಕೆಂದರೆ, ಇದುವರೆಗೂ ಒಳ್ಳೆಯ ಪಾತ್ರಗಳು ಅಂತ ಬಂದಿದ್ದು ಕಡಿಮೆ. ಅಂತ ಪಾತ್ರಗಳು ಸಿಕ್ಕಾಗಲೂ, ನಾನು ಬಿಝಿ ಇದ್ದೀನಿ ಅಂತ ಅಪಪ್ರಚಾರ ನಡೆಯಿತು. ಒಳ್ಳೆಯ ಪಾತ್ರಗಳು ಸಿಕ್ಕರೆ ಮಧ್ಯರಾತ್ರಿ ಎದ್ದು ಬರುತ್ತೀನಿ. ಒಂದೊಳ್ಳೆಯ ಪಾತ್ರ ಅಂತ ಸಿಕ್ಕಾಗ, ನಮ್ಮ ತಂದೆ ತೀರಿಕೊಂಡಾಗಲೂ ಬಂದು ನಟಿಸಿದೆ. 

ಪಾತ್ರಕ್ಕೆ ಸಮಸ್ಯೆಯಾಗಬಹುದು ಅಂತ ತಲೆಯನ್ನೂ ಬೋಳಿಸಿಕೊಳ್ಳಲಿಲ್ಲ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ಸಂಭಾವನೆ ಸಹ ಗೌಣ. ಮುಖ್ಯವಾಗಿ ಒಮ್ಮೆ ಸಂಪರ್ಕ ಮಾಡಬೇಕು. ನಾನು ಸಿಗುವುದಿಲ್ಲ ಅಂದರೆ, ಹಾಗೆಯೇ 180 ಚಿತ್ರಗಳನ್ನ ಮಾಡೋಕೆ ಆಯ್ತಾ? ಅದೆಲ್ಲಾ ಸುಳ್ಳು. ಇದರಿಂದ ನಟರ ಪರಂಪರೆಯೇ ಹಾಳಾಗುತ್ತೆ. ನಾನು ಬೆಂಗಳೂರಿನಲ್ಲೇ ಇರುತ್ತೀನಿ. ಇಲ್ಲಾಂದರೆ ಮೈಸೂರು. ಕೆಲಸ ಇದ್ದರೆ ಬಂದು ಹೋಗುತ್ತೀನಿ. ತೆಲುಗು-ತಮಿಳಿನವರಿಗೆ ನನ್ನ ನಂಬರ್‌ ಸಿಗಬಹುದು. ಇಲ್ಲಿನವರಿಗೆ ಯಾಕೆ ಸಿಗುವುದಿಲ್ಲ’ ಎಂಬ ಇನ್ನೊಂದು ಪ್ರಶ್ನೆಯನ್ನು ಅವರು ಬಿಡುತ್ತಾರೆ.

Advertisement

ಇನ್ನು “ಜಯಮಹಲ್‌’ ಚಿತ್ರವು “ಮಾತಂಗಿ’ ಹೆಸರಿನಲ್ಲಿ ತಮಿಳಿನಲ್ಲೂ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಂತರ ಪರಭಾಷೆಗಳಲ್ಲಿ ದೊಡ್ಡ ಬಾಗಿಲು ತೆರೆಯುವ ನಂಬಿಕೆ ಅವರಿಗಿದೆ. “ಇದುವರೆಗೂ ನಾನು ಬೇರೆ ಭಾಷೆಗಳಿಗೆ ಹೋಗಿರಲಿಲ್ಲ. ಈಗ ಇದೊಂದು ವೇದಿಕೆ ಆಗಬಹುದು. ಈ ಮಧ್ಯೆ ಕೆಲವು ಚಿತ್ರತಂಡಗಳಿಂದ ಮಾತುಕತೆ ನಡೆಯುತ್ತಿದೆ. ಎಲ್ಲಾ ಕೂಡಿ ಬಂದರೆ, ಪರಭಾಷೆಗಳಲ್ಲೂ ನಟಿಸುತ್ತೀನಿ. 

ಅದರಿಂದ ಇಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು. ಅಲ್ಲಿ ಒಳ್ಳೆಯ ಅವಕಾಧ, ದುಡ್ಡು ಬಂದರೆ, ನನಗೇನು ಇಲ್ಲಿ ಅಪಾರ್ಟ್‌ಮೆಂಟ್‌ ತೆಗೆದುಕೊಳ್ಳುವ ಆಸೆ ಇಲ್ಲ. ಇಲ್ಲಿ ಇನ್ನೊಂದಿಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next