ಬೆಂಗಳೂರು: ಕನ್ನಡ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಅನಂತ್ ನಾಗ್ ಬಣ್ಣದ ಲೋಕದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಿದರೆ ಇಂದಿಗೂ ನವನಟರಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ.
ಅನಂತ್ ನಾಗ್ ಅವರು ಇತ್ತೀಚೆಗಿನ ದಿನಗಳಲ್ಲಿ ಪೋಷಕ ನಟನಾಗಿ ಮಿಂಚುತ್ತಿದ್ದಾರೆ. ಆ ಮೂಲಕ ಹಳೆಯ ಕಾಲದ ಅನಂತ್ ನಾಗ್ ಈಗಲೂ ಪ್ರೇಕ್ಷಕರ ಮನದಲ್ಲಿ ಹಾಗೆಯೇ ಅಚ್ಚಾಗಿ ಉಳಿದಿದ್ದಾರೆ. ಇತ್ತೀಚಿನ ಪೀಳಿಗೆಯ ಕಲಾವಿದರಿಗೆ ಮಾದರಿ ಆಗಿರುವ ಅನಂತ್ ನಾಗ್ ಅವರು ಸಿನಿಮಾ ರಂಗಕ್ಕೆ ಬಂದು 50 ವರ್ಷಗಳು ಪೂರ್ಣಗೊಂಡಿದೆ. ಅವರ ಈ ಸಂಭ್ರಮದಲ್ಲಿ ಅಭಿಮಾನಿಗಳು ಹಾಗೂ ಸಿನಿಮಾರಂಗದ ಕಲಾವಿದರು ಭಾಗಿಯಾಗಿ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.
ಬಣ್ಣದ ಲೋಕದಲ್ಲಿ ಮೋಡಿ ಮಾಡಿದ ಅನಂತ್ ನಾಗ್.. ಅನಂತ್ ನಾಗ್ ಥಟ್ಟನೆ ನೆನಪಿಗೆ ಬರುವುದು ಅವರ ನಗುಮುಖದ ಚಹರೆ. ಅವರು ನಟಿಸಿರುವ ಸಿನಿಮಾಗಳ ಪಾತ್ರಗಳು ಆ ಕಾಲದಿಂದ ಈ ಕಾಲದ ಪ್ರೇಕ್ಷರವರೆಗೂ ಇಷ್ಟವಾಗುತ್ತದೆ. ರಂಗಭೂಮಿ ಹಿನ್ನೆಯಿಂದ ಬಂದ ಅವರು 1973 ತೆರೆ ಕಂಡ ‘ಸಂಕಲ್ಪ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ʼಹಂಸಗೀತೆʼ, ʼಬಯಲುದಾರಿʼ, ʼನಾ ನಿನ್ನ ಬಿಡಲಾರೆʼ, ʼಚಂದನದ ಗೊಂಬೆʼ, ʼಮಿಂಚಿನ ಓಟʼ, ʼನಾರದ ವಿಜಯʼ, ʼಅನುಪಮಾʼ, ʼಮುಳ್ಳಿನ ಗುಲಾಬಿʼ, ʼಬೆಂಕಿಯ ಬಲೆʼ, ʼಒಲವು ಮೂಡಿದಾಗʼ, ʼಅರುಣ ರಾʼಗ, ʼಹೆಂಡ್ತಿಗೇಳ್ಬೇಡಿʼ, ʼಗಗನʼ, ʼಗೌರಿ ಗಣೇಶʼ.. ಮುಂತಾದ ಎವರ್ ಗ್ರೀನ್ ಹಿಟ್ ಗಳನ್ನು ನೀಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಮುಖ್ಯವಾಗಿ ಯೋಗರಾಜ್ ಭಟ್ ಅವರ ʼಗಾಳಿಪಟʼ ದಲ್ಲಿ ಭೇಟೆಗಾರ ʼಕೊಂದಂಡʼನ ಪಾತ್ರದಿಂದ ಹಿಡಿದು, ʼಮುಂಗಾರು ಮಳೆʼ,ʼಈ ಬಂಧನʼ, ʼಅರಮನೆʼ, ʼಗಣೇಶ ಮತ್ತೆ ಬಂದʼ, ʼಮೈನಾʼ, ʼಗೂಗ್ಲಿʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ, ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ, ʼಕೆಜಿಎಫ್, ʼಗಾಳಿಪಟ 2ʼ ಸಿನಿಮಾದಲ್ಲಿನ ಅವರ ಪ್ರಬುದ್ಧ ನಟನೆ ನೋಡಿ ಶಹಭಾಷ್ ಎನ್ನದವರಿಲ್ಲ.
ಶುಭಕೋರಿದ ಚಿತ್ರ ರಿಷಬ್ ಶೆಟ್ಟಿ, ಶಿವಣ್ಣ.. ಸಂಭ್ರಮದಲ್ಲಿ ಅಭಿಮಾನಿಗಳು..
ಸಿನಿಮಾರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಅನಂತ್ ನಾಗ್ ಅವರಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಅನಂತ್ ಅವರ ಹಳೆಯ ಸಿನಿಮಾಗಳ ಅವಿಸ್ಮರಣೀಯ ದೃಶ್ಯಗಳನ್ನು ಪೋಣಿಸಿ ಅವುಗಳಿಂದ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ತಮ್ಮ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼಯಲ್ಲಿನ ಅವರ ವಕೀಲರ ಪಾತ್ರದ ತುಣುಕು ಕೂಡ ಇದರಲ್ಲಿದೆ.
ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕವೆಂದು ಬರೆದುಕೊಂಡಿದ್ದಾರೆ.
ಇನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಅನಂತ್ ನಾಗ್ ಅವರೊಂದಿಗಿನ ಫೋಟೋವೊಂದನ್ನು ಹಂಚಿಕೊಂಡು “ನಿಮ್ಮ ಪ್ರತಿಭೆ ಮತ್ತು ವರ್ಚಸ್ಸು ತಲೆಮಾರುಗಳಿಗೆ ಪ್ರೇರಣೆ” ಎಂದು ಶುಭಕೋರದ್ದಾರೆ.
ಯುವ ಕಲಾವಿದರರಾದ ಸಪ್ತಮಿ ಗೌಡ ಹಾಗೂ ಧೀರೆನ್ ರಾಮ್ ಕುಮಾರ್ ಸೇರಿದಂತೆ ಹಲವರು ಶುಭಾಶಯವನು ಕೋರಿದ್ದಾರೆ.