Advertisement
ಕ್ರೈಂ-ಥ್ರಿಲ್ಲರ್‌ನಲ್ಲಿ ತತ್ಸಮ -ತದ್ಭವ
Related Articles
Advertisement
ಕನ್ನಡದಲ್ಲಿ ಇದೊಂದು ಅಪರೂಪದ ಶೈಲಿಯ ಮಹಿಳಾ ಕೇಂದ್ರಿತ ಕಥಾಹಂದರದ ಪ್ರಯೋಗಾತ್ಮಕ ಸಿನಿಮಾ. ಈಗಾಗಲೇ “ತತ್ಸಮ ತದ್ಭವ’ ಸಿನಿಮಾಕ್ಕೆ ತುಂಬ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿದೆ. ಡಬ್ಬಿಂಗ್ ಮಾಡಿದ ಕಲಾವಿದರು ಮತ್ತು ತಂತ್ರಜ್ಞರು ಕೂಡ ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. ಅದೇ ಪ್ರತಿಕ್ರಿಯೆ “ತತ್ಸಮ ತದ್ಭವ’ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಸಿಗುತ್ತದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
ಮೂರು ಕಥೆಗಳ ಸಂಗಮ
ಹೊಸಬರ “ಟೇಲ್ಸ್ ಆಫ್ ಮಹಾನಗರ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಮಹಾನಗರದ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಮೂರು ವಿಭಿನ್ನ ಕಥೆಗಳು, ಅದನ್ನು ಪ್ರತಿನಿಧಿಸುವ ಪಾತ್ರಗಳು ಒಂದಕ್ಕೊಂದು ಬೆಸೆದುಕೊಂಡು ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ನಿದ್ದೆ ಮೇಲಿನ ಸಂಶೋಧನೆ, ರಂಗಭೂಮಿ ಕಲಾವಿದನ ತನ್ಮಯತೆ, ಕ್ಯಾಬ್ ಡ್ರೈವರ್ ಒಬ್ಬನ ಪ್ರೇಮಕಥೆ ಹೀಗೆ ಮೂರು ಎಳೆಯನ್ನು ಇಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅಂತಿಮವಾಗಿ “ಮಹಾನಗರ’ದಲ್ಲಿ ಹತ್ತಾರು ತಿರುವುಗಳನ್ನು ಪಡೆದುಕೊಂಡು ಖಾಲಿ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುವ ಮೂರು ಕಥೆಗಳಿಗೂ ಅಲ್ಲೊಂದು ತಾರ್ಕಿಕ ಅಂತ್ಯ ಸಿಗುತ್ತದೆ. ಅದು ಹೇಗೆ ಎಂಬುದನ್ನು “ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲಿ ತೆರೆದಿಟ್ಟಿದೆ ಚಿತ್ರತಂಡ.
“ಟೇಲ್ಸ್ ಆಫ್ ಮಹಾನಗರ’ ಅಪ್ಪಟ ನವ ಮತ್ತು ಪ್ರತಿಭೆಗಳ ಸಿನಿಮಾ. ರಾಜೀವ್ ಕಿರಣ್ ವೇನಿಯಲ್ “ಟೇಲ್ಸ್ ಆಫ್ ಮಹಾನಗರ’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸಿನಿಮಾಕ್ಕೆ ಜಾಹೀರಾತು ಹಿನ್ನೆಲೆಯ ರೋಶನ್ ಝಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನವಿದೆ. ಸಿನಿಮಾದಲ್ಲಿ ಮೂರು ಹಾಡುಗಳಿಗೆ ಸಿದ್ದಾರ್ಥ್ ಪರಾಶರ್ ಸಂಗೀತ ಸಂಯೋಜಿಸಿದ್ದಾರೆ. “ಅಥರ್ವ್ ಪಿಕ್ಚರ್’ ಬ್ಯಾನರ್‌ನಲ್ಲಿ ಬಿ. ಎನ್. ವಿಜಯ್ ಕುಮಾರ್ (ಗೆಜ್ಜೆನಾದ) ಧರ್ಮೇಂದ್ರ ಎಂ. ರಾವ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂಪತ್ ಮೈತ್ರೇಯ, ಆರ್. ಜೆ ಅನೂಪ, ಅಥರ್ವ್, ರಮೋಲಾ, ಆಶಿಶ್ ಅತಾವ್ಲೆ, ರೂಪಾ ರಾಯಪ್ಪ, ಬಿ. ಎಂ ವೆಂಕಟೇಶ್, ಎಸ್. ನಾಗರಾಜ್, ಮಧು ಹೆಗ್ಡೆ, ವಿಕಾಸ್ ಕಾರ್ಗೋಡ್, ಮೋಹನ್ ಜುನೇಜಾ, ಮನದೀಪ್ ರಾಯ್, ಮೊದಲಾದವರು “ಟೇಲ್ಸ್ ಆಫ್ ಮಹಾನಗರ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಮಂದಿರದಲ್ಲಿ ಪರಿಮಳ
“ಪರಿಮಳ ಡಿಸೋಜಾ’ – ಹೀಗೊಂದು ಚಿತ್ರ ಇಂದು ತೆರೆಕಾಣುತ್ತಿದೆ. ವಿಲೇಜ್ ರೋಡ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ ಹಾಗೂ ಡಾ.ಗಿರಿಧರ್ ಹೆಚ್. ಟಿ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿನೋದ್ ಶೇಷಾದ್ರಿ ಹಾಗೂ ಶ್ವೇತ ರಮೇಶ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದೆ. ಕ್ರಿಸ್ಟೋಪರ್ ಜೇಸನ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.
ಡಾ.ವಿ.ನಾಗೇಂದ್ರ ಪ್ರಸಾದ್,ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಹಾಡುಗಳನ್ನು ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಶೃತಿ ವಿ ಎಸ್, ನಕುಲ್ ಆಭಯಂಕರ್, ಸುಪ್ರೀಯ ರಾಮ್ ಹಾಡಿದ್ದಾರೆ, ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾದ್ಯ, ಮೀಸೆ ಆಂಜನಪ್ಪ, ಶ್ವೇತ ರಮೇಶ್, ಸುನೀಲ್ ಎ ಮೋಹಿತೆ, ನಾಗಮಂಗಲ ಜಯರಾಮಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ.
ನೈಜ ಘಟನೆಯ ಸುತ್ತ ‘13’
ನಟ ರಾಘವೇಂದ್ರ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “13′ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಾಘಣ್ಣ ಅವರು ಮೋಹನ್ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾ ಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
ಅಂದಹಾಗೆ, “13′ ಸಿನಿಮಾ ಒಂದು ನೈಜ ಘಟನೆ ಆಧಾರಿತ ಸಿನಿಮಾ. ಕೆಲ ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದನ್ನು ಸಿನಿಮ್ಯಾಟಿಕ್ ಆಗಿ ತೆರೆಗೆ ತರಲಾಗುತ್ತಿದೆ. ಸನ್ನಿವೇಶವೊಂದರಲ್ಲಿ ಚಿತ್ರದ ನಾಯಕ ಮೋಹನ್ ಹಾಗೂ ನಾಯಕಿ ಸಾಹೀರಾ ಬಾನು ದಂಪತಿ ತಮ್ಮದಲ್ಲದ ತಪ್ಪಿಗೆ ಸಿಲುಕಿಕೊಂಡು ಏನೆಲ್ಲ ಪರಿಪಾಟಲು ಅನುಭವಿಸುತ್ತಾರೆ. ಕೊನೆಗೆ ಈ ಸಮಸ್ಯೆಯ ಸುಳಿಯಿಂದ ಹೊರಬರುತ್ತಾರಾ? ಇಲ್ಲವಾ? ಎಂಬುದನ್ನು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ತೋರಿಸಲಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಕಾಮಿಡಿ, ಎಮೋಶನ್ಸ್ ಮತ್ತು ಸಂಪೂರ್ಣ ಕೌಟುಂಬಿಕ ಮನರಂಜನೆಯ ಎಲ್ಲ ಅಂಶಗಳೂ “13′ ಸಿನಿಮಾದಲ್ಲಿದೆ’ ಎಂಬುದು ಚಿತ್ರತಂಡದ ಮಾತು.
ರವಿಪ್ರಕಾಶ್ ರೈ