ಉಪ್ಪಿನಂಗಡಿ: ಪೆರ್ನೆ ಗ್ರಾ.ಪಂ. ವ್ಯಾಪ್ತಿಯ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಯಿಂದ ನೇರವಾಗಿ ಮರಳು ಎತ್ತಿ ವಿವಿಧೆಡೆಗೆ ಸಾಗಿಸುತ್ತಿರುವುದಕ್ಕೆ ಸ್ಥಳೀಯವಾಗಿ ಆಕ್ಷೇಪಗಳು ಕೇಳಿ ಬರಲಾರಂಭಿಸಿವೆ.
ಇಲ್ಲಿ ನದಿಯಲ್ಲಿ ಸಂಗ್ರಹಿಸಿದ ಮರಳನ್ನು ಹಿಟಾಚಿ ಮೂಲಕ ಲಾರಿಗಳಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಹಗಲು ಮತ್ತು ರಾತ್ರಿಯಲ್ಲಿಯೂ ಮರಳು ತೆಗೆಯಲಾಗುತ್ತಿದೆ. ಇಲ್ಲಿಂದ ಬೆಂಗಳೂರು ಕಡೆಗೆ ಹೆಚ್ಚಾಗಿ ಮರಳು ಸಾಗಾಟ ನಡೆಯುತ್ತಿರುವುದಾಗಿ ಹೇಳಲಾಗಿದೆ.
ಈ ಭಾಗದ ನದಿಯಲ್ಲಿ ಸುಮಾರು ಅರ್ಧ ಕಿಮೀ. ತನಕ ಮರಳು ತೆಗೆಯಲಾಗುತ್ತಿದ್ದು, ನದಿ ಬದಿಯಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಪ್ರಕೃತಿದತ್ತವಾಗಿ ಹರಿಯುವ ನದಿ ನೀರನ್ನು ಇಲ್ಲಿ ತಡೆ ಹಿಡಿಯಲಾಗಿದೆ. ಇದೀಗ ಮಳೆ ಕಡಿಮೆ ಆಗುತ್ತಿದ್ದಂತೆ ಇಲ್ಲಿ ಮತ್ತೆ ಮರಳುಗಾರಿಕೆ ಆರಂಭಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ನೇತ್ರಾವತಿ ನದಿಯಲ್ಲಿ ತೆಕ್ಕಾರು, ಬಿಳಿಯೂರು, ಕಡೇಶಿವಾಲಯ ಮೊದಲಾದ ಕಡೆಗಳಲ್ಲಿ ಮತ್ತು ಕುಮಾರಧಾರಾ ನದಿಯಲ್ಲಿ ಕಡಬದಿಂದ ಆರಂಭಗೊಂಡು ಆಲಂಕಾರು, ಕೊçಲ, ಹಿರೇಬಂಡಾಡಿ, ಅಡೇಕಲ್ ಮತ್ತು ಗುಂಡ್ಯ ಹೊಳೆಯಲ್ಲಿ ಗುಂಡ್ಯ, ಉದನೆ, ಇಚ್ಲಂಪಾಡಿ, ನೂಜಿಬಾಳ್ತಿಲ ಮೊದಲಾದ ಕಡೆಗಳಲ್ಲಿ ಮರಳು ತೆಗೆಯುವ ಕಾರ್ಯ ಚುರುಕುಗೊಂಡಿದೆ ಎಂಬ ದೂರುಗಳು ಕೇಳಿ ಬರಲಾರಂಭಿಸಿದೆ. ಗಣಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.
ಠಾಣಾ ವ್ಯಾಪ್ತಿಯಲ್ಲಿ ಮರಳು ಎತ್ತಲು ಕೆಲವರು ಗಣಿ ಇಲಾಖೆಯಿಂದ ಪರವಾನಿಗೆ ಪಡೆದಿದ್ದಾರೆ. ಆಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಈರಯ್ಯ, ಉಪ್ಪಿನಂಗಡಿ ಎಸ್.ಐ.