Advertisement

ಮರಳು ಅಲಭ್ಯತೆಯಿಂದ ನಿರುದ್ಯೋಗಿಗಳಾಗಿದ್ದ ಕಾರ್ಮಿಕರಿಗೆ ಹೊಸ ಕೆಲಸ 

11:54 AM Nov 01, 2018 | Team Udayavani |

ಕೋಟ: ಕಾರ್ಮಿಕರ ಕೊರತೆ, ಸುಲಭ ಕೆಲಸ ಎಂಬ ಕಾರಣಕ್ಕೆ ವ್ಯವಸಾಯದಲ್ಲಿ ಯಾಂತ್ರೀಕೃತ ವಿಧಾನ ಅನಿವಾರ್ಯವಾಗಿದೆ. ಈ ನಡುವೆ ಕೆಲವರು ಬೈಹುಲ್ಲಿನ ಆಸೆಗೆ ಸಾಂಪ್ರದಾಯಿಕ ವಿಧಾನವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಇದಕ್ಕೆ ಸ್ಥಳೀಯ ಕಾರ್ಮಿಕರು ಲಭ್ಯವಾಗುತ್ತಿಲ್ಲ. ಹೀಗಾಗಿ ಹೊರ ಜಿಲ್ಲೆಯ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮರಳು ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿರುವ ಕೆಲಸಗಾರರಿಗೆ ಕೆಲಸವಿಲ್ಲವಾಗಿದ್ದು, ಇವರೀಗ ದೊಡ್ಡ ಸಂಖ್ಯೆಯಲ್ಲಿ ಭತ್ತ ಕಟಾವಿನಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಕಾರ್ಮಿಕರ ಕೊರತೆ ಇಲ್ಲ
ಕೊಪ್ಪಳ, ರಾಯಚೂರು, ಬೀದರ್‌, ಹುಬ್ಬಳ್ಳಿ, ಬಿಜಾಪುರ ಮುಂತಾದ ಜಿಲ್ಲೆಗಳ ಕಾರ್ಮಿಕರು ಜಿಲ್ಲೆಯಲ್ಲಿ ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಡುಪಿ, ಕುಂದಾಪುರ ಮುಂತಾದ ಪ್ರಮುಖ ಪ್ರದೇಶದಲ್ಲಿ ಜೋಪಡಿಗಳಲ್ಲಿ ವಾಸವಿದ್ದು ಅಲ್ಲಿಂದ ಜಿಲ್ಲೆಯ ಬೇರೆ-ಬೇರೆ ಕಡೆಗೆ ಕೆಲಸಕ್ಕೆ ತೆರಳುತ್ತಾರೆ. ಕಳೆದ ವರ್ಷ ಸೀಮಿತ ಕೆಲಸಗಾರರು ಕಟಾವಿಗೆ ಸಿಗುತ್ತಿದ್ದರು. ಆದರೆ ಈ ಬಾರಿ ದೊಡ್ಡ ಸಂಖ್ಯೆಯ ಕಾರ್ಮಿಕರ ಲಭ್ಯತೆ ಇದೆ.

ಶ್ರಮವಹಿಸಿ ದುಡಿಮೆ
ಈ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿದರೆ ಬೆಳಗ್ಗೆ 7.30ರಿಂದ 8ಗಂಟೆಗೆ ಜಮೀನಿಗೆ ತೆರಳಿ ಕಟಾವಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಹಾಗೂ ಸಂಜೆ 6ಗಂಟೆ ತನಕ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. 500ರಿಂದ 600ರೂ ಸಂಬಳ ಪಡೆಯುತ್ತಾರೆ. ಜತೆಗೆ ಕರಾವಳಿಯ ಕಟಾವು ಪದ್ಧತಿಯನ್ನೂ ಇವರು ಮೈಗೂಡಿಸಿಕೊಂಡಿದ್ದಾರೆ.

ಊರಿನ ಕಾರ್ಮಿಕರು ಕಟಾವಿನಿಂದ ದೂರವಾದ್ದರಿಂದ ಸಾಂಪ್ರದಾಯಿಕ ವಿಧಾನ ಅನುಸರಿಸಬೇಕಾದರೆ ಒಂದೋ ಮನೆಯವರೇ ಕೆಲಸ ಮಾಡಬೇಕು. ಇಲ್ಲವಾದರೆ ಹೊರಜಿಲ್ಲೆಯ ಕಾರ್ಮಿಕರನ್ನು ಕರೆ ತಂದು ಕೆಲಸ ಮಾಡಿಸಬೇಕು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಸಾಂಪ್ರದಾಯಿಕ ಕಟಾವಿಗೆ ಈ ಕಾರ್ಮಿಕರೇ ಆಧಾರವಾಗಿದ್ದಾರೆ.

ಸಾಂಪ್ರದಾಯಿಕ ವಿಧಾನದಲ್ಲೇ 4ಎಕ್ರೆ ಕಟಾವು
ಈನಾನು 4ಎಕ್ರೆ ಭತ್ತ ಬೆಳೆಯುತ್ತೇನೆ. ಪ್ರತಿ ವರ್ಷ ಹೊರಜಿಲ್ಲೆಯ ಕಾರ್ಮಿಕರ ಮೂಲಕ ಸಾಂಪ್ರದಾಯಿಕ ವಿಧಾನದಿಂದಲೇ ಕಟಾವು ನಡೆಸುತ್ತೇನೆ. ಈ ವಿಧಾನದಿಂದ ಬೈಹುಲ್ಲು ಹಾಗೂ ಅಧಿಕ ಭತ್ತ ಸಿಗುತ್ತದೆ ಮತ್ತು ಹೆಚ್ಚು ಲಾಭವಾಗುತ್ತದೆ. ಈ ಬಾರಿ ಮರಳು ಸಮಸ್ಯೆ ಇರುವುದರಿಂದ ಕಾರ್ಮಿಕರ ಲಭ್ಯತೆ ಹೆಚ್ಚಿನ ಸಂಖ್ಯೆಯಲ್ಲಿದೆ. 
 – ರವೀಂದ್ರ ಐತಾಳ,
ಪ್ರಗತಿಪರ ಕೃಷಿಕರು ಪಡುಕರೆ

Advertisement

ಕೆಲಸ ಮಾಡುವುದು ಖುಷಿ ನೀಡುತ್ತದೆ
5 ವರ್ಷದಿಂದ ಕಟಾವಿಗಾಗಿ ಈ ಊರಿಗೆ ಬರುತ್ತಿದ್ದೇನೆ. ಇಲ್ಲಿನ ವಿಧಾನ ಮೊದಲು ಸ್ವಲ್ಪ ಕಷ್ಟವಾಗುತಿತ್ತು. ಆದರೆ ಇದೀಗ ಹೊಂದಿಕೊಂಡಿದ್ದೇವೆ. ವರ್ಷದಲ್ಲಿ ಒಂದು ಬಾರಿ ಇಲ್ಲಿಗೆ ಬಂದು ಕೆಲಸ ಮಾಡುವುದು ಖುಷಿ ಕೊಡುತ್ತದೆ. ಈ ಬಾರಿ ಮರಳು ಸಮಸ್ಯೆಯಿಂದ ನಮ್ಮವರು ಎಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹನುಮಂತಪ್ಪ ಕೊಪ್ಪಳ,
ಸಹೊರಜಿಲ್ಲೆಯ ಕೃಷಿ ಕಾರ್ಮಿಕ

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next