Advertisement

ಸ್ವಯಂ ಬಳಕೆ ಮರಳು ಸಾಗಣೆಗಿಲ್ಲ ನಿರ್ಬಂಧ : ಕರಾವಳಿಗೆ ಪ್ರತ್ಯೇಕ ಮರಳು ನೀತಿ

12:54 AM Feb 11, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶೀಘ್ರವೇ ಹೊಸ ಗಣಿ ನೀತಿ -2021 ರೂಪಿಸಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸ್ವಯಂ ಬಳಕೆಗೆ ದ್ವಿಚಕ್ರ, ತ್ರಿಚಕ್ರ, ಎತ್ತಿನಗಾಡಿ, ಟಂ ಟಂಗಳಲ್ಲಿ ಉಚಿತವಾಗಿ ಮರಳು ಸಾಗಣೆಗೆ ಯಾವುದೇ ನಿರ್ಬಂಧ ಇಲ್ಲದೆ ಅವಕಾಶ ಕೊಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮರಳು, ಕಲ್ಲು, ಜಲ್ಲಿ ಕ್ರಷರ್‌ ವಿಚಾರದಲ್ಲಿ ಸ್ಪಷ್ಟ ನೀತಿಯ ಅಗತ್ಯವಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆ ದಿದ್ದು ಶೀಘ್ರ ರೂಪು-ರೇಷೆ ಪ್ರಕಟಿಸಲಾಗುವುದು. ಕರಾವಳಿ ಭಾಗದ ಮರಳು ಸಮಸ್ಯೆ ಬೇರೆಯದೇ ಇರುವುದರಿಂದ ಅಲ್ಲಿಗೆ ಪ್ರತ್ಯೇಕ ನೀತಿ ರೂಪಿಸಲಾಗುವುದು ಅದಕ್ಕೂ ಮುನ್ನ ಅಲ್ಲಿನ ಜನಪ್ರತಿನಿಧಿಗಳ ಜತೆಯೂ ಚರ್ಚಿಸಲಾಗುವುದು ಎಂದರು.

ನಿರ್ಬಂಧ ತೆರವು
ಗ್ರಾಮೀಣ ಭಾಗದಲ್ಲಿ ಸ್ವಯಂ ಬಳಕೆಗೆ ಮರಳು ತೆಗೆದರೂ ಕೇಸು ದಾಖಲಿಸಲಾಗುತ್ತಿದೆ. ಇದರಿಂದ ಜನರು ಕಷ್ಟಪಡುತ್ತಿದ್ದಾರೆ. ಹೀಗಾಗಿ ರೈತರಿಗೆ ರಾಜಧನ ಹಾಗೂ ಪರವಾನಿಗೆ ಅನ್ವಯವಾಗದಂತೆ ನೋಡಿಕೊಳ್ಳಲಾಗುವುದು. ಹಳ್ಳ, ತೊರೆ ಸೇರಿ ತೆಗೆಯುವ ಮರಳು ಪ್ರಮಾಣ ಆಧರಿಸಿ 100 ರೂ. ವರೆಗೆ ಪಂಚಾಯತ್‌ ಮಟ್ಟದಲ್ಲೇ ರಾಜಧನ ನಿಗದಿಪಡಿಸಿ ಸ್ವಯಂ ಬಳಕೆಗೆ ಮರಳು ಸಾಗಣೆಗೆ ಅವಕಾಶ ನೀಡಲಾಗುವುದು. ಅದು ಜಿಲ್ಲೆಯ ಗಡಿ ದಾಟುವಂತಿಲ್ಲ, ಟ್ರ್ಯಾಕ್ಟರ್‌ ಅಥವಾ ಲಾರಿಗೆ ತುಂಬುವಂತಿಲ್ಲ, ಮಾರಾಟ ಮಾಡುವಂತಿಲ್ಲ, ಸರಕಾರ ಹರಾಜು ಹಾಕಿದ ಬ್ಲಾಕ್‌ಗಳಲ್ಲಿ ಮರಳು ತೆಗೆಯುವಂತಿಲ್ಲ ಎಂಬ ಷರತ್ತು ವಿಧಿಸಲಾಗುವುದು ಎಂದು ತಿಳಿಸಿದರು.

ರಾಜ್ಯಾದ್ಯಂತ ಒಟ್ಟು 183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ ಇದ್ದು ಪ್ರತಿ ಟನ್‌ಗೆ 300 ರೂ. ವರೆಗೆ ರಾಜಧನ ನಿಗದಿ ಮಾಡಲಾಗುವುದು ಎಂದರು.

ಅಕ್ರಮವಾಗಿರುವ ಜಲ್ಲಿ ಕ್ರಷರ್‌ಗಳನ್ನು ಐದು ಪಟ್ಟು ದಂಡ ವಿಧಿಸಿ ಕಾನೂನು ಬದ್ಧವಾಗಿದ್ದರೆ ಸಕ್ರಮ ಮಾಡಲಾಗುವುದು. ರಾಜ್ಯದ ನಿರ್ಮಾಣ ಕಾಮಗಾರಿಗಳಿಗೆ ಮರಳು, ಜಲ್ಲಿ ಅಗತ್ಯವಾಗಿದೆ. ಇದು ಸಿಗದಿದ್ದರೆ ಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next