Advertisement

ಕುಂದಾಪುರ ಜನತೆಗೆ ವಾರದಲ್ಲಿ ಮರಳು : ಗಣಿ ಇಲಾಖೆ 

10:48 PM Feb 24, 2021 | Team Udayavani |

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಜನತೆಗೆ ವಾರದಲ್ಲಿ ಮರಳು ದೊರೆಯಲಿದೆ. ಹೀಗೊಂದು ಸುದ್ದಿಯನ್ನು ಗಣಿ ಇಲಾಖೆ ಖಚಿತಪಡಿಸಿದೆ. ಒಂದೆಡೆ ಆಕ್ರಮ ಮರಳು ಸಾಗಾಟ ನಡೆದು ನದಿಗಳೆಲ್ಲ ಖಾಲಿಯಾಗುತ್ತಿದ್ದರೆ ಇನ್ನೊಂದೆಡೆ ಗಣಿಗಾರಿಕೆಗೆ ಅನುಮತಿ ಪಡೆದವರು ವಿತರಣೆಗೆ ಅನುಮತಿಯಿಲ್ಲದೇ ಸಾವಿರಗಟ್ಟಲೆ ಲೋಡು ಮರಳು ಸಂಗ್ರಹ ಮಾಡಿಟ್ಟಿದ್ದಾರೆ.

Advertisement

ಹೊಸನೀತಿ
ಹೊಸ ಮರಳು ನೀತಿ ಪ್ರಕಾರ, ಗ್ರಾಮಗಳಲ್ಲಿ ನಾನ್‌ಸಿಆರ್‌ಝಡ್‌ ವ್ಯಾಪ್ತಿಯ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿ ( ಹಳ್ಳ/ ತೊರೆ/ ತೋಡು/ಕೆರೆ)ಗಳಲ್ಲಿ ಗುರುತಿಸಲಾದ ನಿಕ್ಷೇಪಗಳಿಂದ ಮರಳು ತೆಗೆಯಬಹುದು. ಅದರಂತೆ ಕುಂದಾಪುರ ತಾಲೂಕಿನ ಕಾಳಾವರ, ಬೇಳೂರು, ಆಲೂರು ಗ್ರಾ.ಪಂ.ಗಳಲ್ಲಿ ತಲಾ 2 ಬ್ಲಾಕ್‌, ಬೈಂದೂರು ತಾಲೂಕಿನ ಶಿರೂರು 2, ಕಾಲ್ತೊಡು 1 ನಿಕ್ಷೇಪಗಳನ್ನು ಗುರುತಿಸಲಾಗಿದೆ. ಎರಡು ಜಿಲ್ಲೆಯಲ್ಲಿ ಒಟ್ಟು 29 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು 21 ಬ್ಲಾಕ್‌ಗಳನ್ನು ಟೆಂಡರ್‌ ಮೂಲಕ ನೀಡಲಾಗಿದೆ. ಬೈಂದೂರು ತಾಲೂಕಿನ 2 ಟೆಂಡರ್‌ ಪ್ರಕ್ರಿಯೆ ನಡೆದಿದ್ದು 2-3 ದಿನಗಳಲ್ಲಿ ಆದೇಶ ರವಾನೆಯಾಗಲಿದೆ. ಈ ನೀತಿಯೇ ತುಸು ಗೊಂದಲದಲ್ಲಿದ್ದು ಪಂಚಾಯತ್‌ ಅಧಿಕಾರಿ ಮರಳು ನೀಡುವ ಹೊಣೆ ಹೊತ್ತಿದ್ದಾರೆ. ಪ್ರತಿ ಪಂಚಾಯತ್‌ನಲ್ಲಿ ಮರಳು ಲೆಕ್ಕಾಚಾರಕ್ಕೆ ವೇ ಬ್ರಿಡ್ಜ್ ಹಾಕಲು 6 ಲಕ್ಷ ರೂ. ಅಗತ್ಯ ಇದೆ. ಅದಿಲ್ಲವಾದರೆ ಲೆಕ್ಕಾಚಾರದ ಕುರಿತು ತಗಾದೆ ಬರುವ ಸಂಭವ ಇದೆ.

ಖಾಲಿ!
ಸಿಹಿನೀರು ಮರಳುಗಾರಿಕೆಗೆ ಅನುಮತಿ ನೀಡುವ ಮೊದಲೇ ಅಕ್ರಮ ಮರಳುಗಾರಿಕೆಯಿಂದಾಗಿ ಹಲವೆಡೆ ನದಿ, ತೋಡುಗಳಲ್ಲಿ ಮರಳು ಖಾಲಿಯಾಗಿದೆ. ಮಳೆಗಾಲ ಮುಗಿದ ಕೂಡಲೇ ಮೊದಲ ಮೂರು ತಿಂಗಳ ಅವಧಿಯಲ್ಲಿ ಮರಳು ಸಂಗ್ರಹ ಯಥೇತ್ಛವಾಗಿ ಇರುತ್ತದೆ. ಅದಾದ ಬಳಿಕ ಅದಕ್ಕೆ ಮಣ್ಣು ಸೇರಿಕೊಂಡಿರುತ್ತದೆ. ಹಾಗಾಗಿ ಈಗ ದೊರೆಯುವ ಇಂತಹ ಮರಳಿನ ಜತೆ ಮಣ್ಣು ಬೆರೆತಿದ್ದರೆ ಎಂಬ ಆತಂಕವೂ ಇದೆ.

ಮುಕ್ತಾಯ
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಆ್ಯಪ್‌ ಮೂಲಕ ಮರಳು ದೊರೆಯುತ್ತದೆ. ಆದರೆ ಕುಂದಾಪುರ, ಬೈಂದೂರು ಭಾಗಕ್ಕೆ ಇದು ಅತಿ ದುಬಾರಿ ಎನಿಸುತ್ತದೆ. ಅಷ್ಟಲ್ಲದೇ ಮಾರ್ಚ್‌ ತಿಂಗಳಲ್ಲಿ ಸಿಆರ್‌ಝೆಡ್‌ ನಿರಾಕ್ಷೇಪಣೆ ಅವಧಿ ಮುಗಿಯುವ ಕಾರಣ ಮತ್ತೆ ಅನುಮತಿ ಪಡೆದೇ ಮರಳುಗಾರಿಕೆ ಆರಂಭಿಸಬೇಕಾಗುತ್ತದೆ. ಅದಿಲ್ಲವಾದರೆ ಮರಳು ಪೂರೈಕೆ ಸ್ಥಗಿತವಾಗಲಿದೆ.

ಹಳೆ ಬಾಕಿ
ಬಳ್ಕೂರು, ಹಳ್ನಾಡು ಮರಳುಗಾರಿಕೆಯ ಬಾಬತ್ತು ಕಂಡೂÉರು ಪರಿಸರದಲ್ಲಿ ಸುಮಾರು 3 ಸಾವಿರ ಲೋಡು ಮರಳು ಸಂಗ್ರಹವಾಗಿ ಬಾಕಿ ಆಗಿದೆ. ವಿತರಣೆಗೆ ಕಾನೂನಿನ ತೊಡಕಿದೆ. ಗುತ್ತಿಗೆದಾರರಿಗೆ ಐದು ವರ್ಷಗಳಿಗೆ ಗುತ್ತಿಗೆ ಆಗಿದ್ದರೂ ವಿತರಣೆಗೆ ತಾಂತ್ರಿಕವಾಗಿ ಸಮಸ್ಯೆಗಳು ಇತ್ಯರ್ಥಗೊಂಡಿಲ್ಲ. ಹೆಚ್ಚು ದರ ವಿಧಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ತನಿಖೆ ನಡೆದಿದೆ. ಇದರ ಪ್ರಕಾರ ಸ್ಥಳ ಸಮೀಕ್ಷೆ ನಡೆದಿದ್ದು ಅಂತಿಮ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಈ ವರದಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ಚರ್ಚೆ ನಡೆದು ಅಲ್ಲಿ ತೀರ್ಮಾನ ಆಗಬೇಕಿದೆ. ಆದರೆ ಈ ಅಂತಿಮ ವರದಿಗೆ ತನ್ನದೂ ಅಭಿಪ್ರಾಯ ನೀಡಬೇಕಿದ್ದ ಅರಣ್ಯ ಇಲಾಖೆ ಇನ್ನೂ ತನ್ನ ಅಭಿಪ್ರಾಯವನ್ನೇ ನೀಡಿಲ್ಲ.

Advertisement

ಲೋಪ
ಬಳ್ಕೂರು, ಹಳ್ನಾಡು ಮರಳುಗಾರಿಕೆ ಪ್ರದೇಶದಲ್ಲಿ ಅಧಿಕ ದರ ವಿಧಿಸಲಾಗುತ್ತದೆ ಎನ್ನುವುದು ಒಂದು ಆರೋಪವಾದರೆ ಸಿಸಿಟಿವಿ ಅಳವಡಿಸಬೇಕು, ವೇ ಬ್ರಿಡ್ಜ್ ಅಳವಡಿಸಬೇಕು, ಜಿಪಿಎಸ್‌ ಅಳವಡಿಸಬೇಕು ಮೊದಲಾದ ಲೋಪದೋಷಗಳನ್ನು ಪತ್ತೆಹಚ್ಚಲಾಗಿದೆ. ಇದನ್ನು ಗುತ್ತಿಗೆದಾರರು ಸರಿಪಡಿಸಬೇಕಾಗುತ್ತದೆ. ಸಿಸಿಟಿವಿ ಇತ್ಯಾದಿಗಳನ್ನು 1 ತಿಂಗಳ ಮೊದಲೇ ಅಳವಡಿಸಲಾಗಿದೆ.

ವಾರದೊಳಗೆ ಮರಳು
ಗುರುತಿಸಿದ 29 ಬ್ಲಾಕ್‌ಗಳ ಪೈಕಿ 21 ಬ್ಲಾಕ್‌ಗಳನ್ನು ಹಸ್ತಾಂತರಿಸಲಾಗಿದೆ. ಬೈಂದೂರು ತಾಲೂಕಿನ ಬ್ಲಾಕ್‌ಗಳಿಗೆ ಟೆಂಡರ್‌ ಆಗಿದ್ದು 2-3 ದಿನಗಳಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭವಾಗಲಿದೆ. ಹಳ್ನಾಡು, ಬಳ್ಕೂರಿನ ಮರಳು ಗಣಿಗಾರಿಕೆ ಕುರಿತು 1 ವಾರದೊಳಗೆ ಜಿಲ್ಲಾ ಮರಳು ಉಸ್ತುವಾರಿ ಸಭೆಯಲ್ಲಿ ತೀರ್ಮಾನವಾಗಲಿದೆ. -ಸಂದೀಪ್‌ ಜಿ.ಯು., ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next