Advertisement

ಮರಳು ಸಮಸ್ಯೆ ಶಾಶ್ವತ ಪರಿಹಾರಕ್ಕೆ ಬದ್ಧ: ಪ್ರಮೋದ್‌ ಮಧ್ವರಾಜ್‌

03:04 AM Apr 13, 2019 | Team Udayavani |

ಉಡುಪಿ: ಕೇಂದ್ರ ಸರಕಾರದ ತಪ್ಪು ನೀತಿಯಿಂದ ಇಂದು ಉಡುಪಿ ಜಿಲ್ಲೆಯ ಜನತೆಗೆ ಮರಳು ಲಭಿಸುತ್ತಿಲ್ಲ. ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆ ಪ್ರಕ್ರಿಯೆ ಮುಗಿದ ತತ್‌ಕ್ಷಣ ಜಿಲ್ಲಾಧಿಕಾರಿ ನೇತೃತ್ವದ 7 ಜನ ಸದಸ್ಯರ ಸಭೆಯನ್ನು ಕರೆಸಿ ಜಿಲ್ಲೆಯಲ್ಲಿ ರಾಜ್ಯ ಸರಕಾರ ಗುರುತಿಸಿದ 7.38 ಲಕ್ಷ ಟನ್‌ ಮರಳನ್ನು ತೆರವುಗೊಳಿಸಲು ಪರವಾನಿಗೆ ದಾರರನ್ನು ನೇಮಿಸಿ ಜನರಿಗೆ ಮರಳು ಲಭ್ಯವಾಗು ವಂತೆ ಮಾಡುವಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಕುಂದಾಪುರದಲ್ಲಿ ನಡೆದ ಚುನಾವಣ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಹಾರಾಡಿಯ ಕುಕ್ಕುಡೆ ಗ್ರಾಮಸ್ಥರ ಪರವಾಗಿ ಕೆಲವು ಗ್ರಾಮಸ್ಥರು ಅಕ್ರಮ ಮರಳುಗಾರಿಕೆ ವಿರುದ್ಧ ಹಸಿರು ಪೀಠ ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಿರುವುದರಿಂದ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಹಸಿರು ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು. ಹಲವು ತಿಂಗಳುಗಳ ಕಾಲ ಮರಳು ಸಿಗದೆ ಕಟ್ಟಡ ಕಾರ್ಮಿಕರಿಗೆ ಮತ್ತು ಜನರಿಗೆ ತುಂಬಾ ತೊಂದರೆ ಆಗಿತ್ತು. ಅದನ್ನು ಮನಗಂಡು ತಾನು ಸಚಿವನಾಗಿದ್ದಾಗ ಆಗಿನ ರಾಜ್ಯದ ಕಾನೂನು ಮಂತ್ರಿ ಟಿ.ಬಿ. ಜಯಚಂದ್ರ ಹಾಗೂ ರಾಜ್ಯ ಸರಕಾರದ ವಕೀಲರಾದ ಅಶೋಕ್‌ ದೇವರಾಜ್‌ ಅವರಲ್ಲಿ ನಿರಂತರ ಸಂಪರ್ಕವಿರಿಸಿ ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಅವಿರತ ಶ್ರಮಪಟ್ಟಿದ್ದೇನೆ. ಅದರ ಫ‌ಲಶ್ರುತಿಯಾಗಿ 2017-18ರಲ್ಲಿ 27 ಮರಳು ದಿಬ್ಬಗಳನ್ನು ಗುರುತಿಸಿ 9 ಲಕ್ಷ ಟನ್‌ ಮರಳು ತೆರವುಗೊಳಿಸುವ ಕಾರ್ಯ ಪ್ರಾರಂಭಗೊಂಡು 165 ಪರವಾನಿಗೆದಾರರನ್ನು ನೋಂದಾಯಿಸಿ ಸುಮಾರು 6 ಲಕ್ಷ ಟನ್‌ ಮರಳು ತೆರವುಗೊಳಿಸಲಾಗಿದೆ ಎಂದು ಪ್ರಮೋದ್‌ ತಿಳಿಸಿದರು.

ಉಡುಪಿ ಜಿಲ್ಲೆಯ ಜನತೆಗೆ ಸಕಾಲದಲ್ಲಿ ಮರಳು ಸಿಗಬೇಕೆಂಬ ನನ್ನ ನಿರ್ಧಾರ ಅಚಲವಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ರಘುಪತಿ ಭಟ್ಟರು ತಾನು ಶಾಸಕನಾದರೆ ಒಂದು ತಿಂಗಳ ಒಳಗೆ ಮನೆ ಬಾಗಿಲಿಗೆ ತಂದು ಮರಳು ಕೊಡುತ್ತೇನೆ ಎಂದು ಹೇಳಿದವರು 11 ತಿಂಗಳಾದರೂ ಮರಳು ಜನರಿಗೆ ಲಭ್ಯವಾಗಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ದೋಣಿ ಮತ್ತು ಲಾರಿಗಳಿಗೆ ಹಾಕಿದ ಜಿಪಿಎಸ್‌ ಅನ್ನು ಪ್ರಮೋದ್‌ ಮಧ್ವರಾಜರ ಮನೆಗೆ ತಂದು ಎಸೆಯಿರಿ ಎಂದಿದ್ದಾರೆ. ಜಿಪಿಎಸ್‌ ಜಾರಿಯಾಗಿದ್ದು 2012ರಲ್ಲಿ. ಆಗ ರಘುಪತಿ ಭಟ್ಟರೇ ಶಾಸಕರಾಗಿದ್ದರು. ನಾನು ಶಾಸಕನಾಗಿದ್ದು 2013ರಲ್ಲಿ ಎಂದು ನೆನಪಿಸಿದರು. ಈ ವರ್ಷ ಕೇವಲ 7 ಮರಳು ದಿಬ್ಬಗಳನ್ನು ಗುರುತಿಸಿ ಕೇವಲ 45 ಪರವಾನಿಗೆದಾರರನ್ನು ನೋಂದಾಯಿಸಿ, ಕೇವಲ 17,000 ಟನ್‌ ಮರಳು ಮಾತ್ರ ತೆರವುಗೊಳಿಸಲಾಗಿದೆ ಎಂದರು.

ಮರಳು ಯಾಕೆ ಸಿಗುತ್ತಿಲ್ಲ?
ಕುಂದಾಪುರ ಪ್ರದೇಶವನ್ನು ಇತ್ತೀಚೆಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಪರಿಸರ ಸಚಿವಾಲಯ ಘೋಷಿಸಿದ್ದರಿಂದ ಆ ಪ್ರದೇಶದಲ್ಲಿ ಮರಳು ಗಾರಿಕೆಗೆ ತೊಡಕಾಗಿದೆ. ಈ ಘೋಷಣೆ ಜಾರಿಯಾಗದಂತೆ ತಡೆಯಲು ಶೋಭಾ ಕರಂದ್ಲಾಜೆ ವಿಫ‌ಲರಾಗಿದ್ದಾರೆ. ಜಿಲ್ಲೆಯ ಉದ್ಯಾವರದ ಕೆಲವು ಪ್ರದೇಶಗಳಲ್ಲಿ ಹಾಗೂ ಹೆಜಮಾಡಿ ಕೂಡ ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸಲಾಗಿದೆ ಎಂದು ಪ್ರಮೋದ್‌ ತಿಳಿಸಿದರು.

2019ರ ಜ. 18ರಂದು ಬಿಜೆಪಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರ ದೇಶವ್ಯಾಪಿ ಕರಾವಳಿ ಪ್ರದೇಶಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವುದಕ್ಕೆ ಯಾವುದೇ ರಿಯಾಯಿತಿ ನೀಡದೆ ಆದೇಶವನ್ನು ಮಾಡಿದೆ. ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಕಾನೂನಿಗೆ ತಿದ್ದುಪಡಿ ತಂದು ಕರಾವಳಿ ಜಿಲ್ಲೆಗಳಲ್ಲಿಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಿಆರ್‌ಝಡ್‌ ಪ್ರದೇಶದಲ್ಲಿ ಈಗಿರುವ ಮರಳು ದಿಬ್ಬ ತೆರವು ಕಾನೂನಿಗೆ ಬದಲಾಗಿ ಮರಳು ಸಂಗ್ರಹ ತೆರವು ಕಾನೂನನ್ನು ಮತ್ತು ನಾನ್‌ ಸಿಆರ್‌ಝಡ್‌ ನದಿಗಳಲ್ಲಿ ನೀರಿನ ಒಳಗೆ ಮರಳು ತೆಗೆಯುವ ಅವಕಾಶದ ಕಾನೂನನ್ನು ಜಾರಿಗೊಳಿಸಲು ಗರಿಷ್ಠ ಪ್ರಯತ್ನ ಮಾಡುತ್ತೇನೆ ಎಂದು ಪ್ರಮೋದ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next