Advertisement
ಕೋಟ: ಜಿಲ್ಲಾಡಳಿತ ಐದು ಮರಳಿನ ದಿಬ್ಬಗಳಿಗೆ ಅನುಮತಿ ಕೊಟ್ಟಿರುವ ಬೆಳವಣಿಗೆ ಕಾರ್ಮಿಕ ವರ್ಗಕ್ಕೆ ಸ್ವಲ್ಪ ಹಿತ ತಂದಿದೆ. ಇನ್ನಾದರೂ ತಮಗೆ ದಿನವೂ ಕೆಲಸ ಸಿಕ್ಕೀತೆಂಬ ಕನಸು ಕಾಣತೊಡಗಿದ್ದಾರೆ. ಇದು ಹಲವು ದಿನಗಳಿಂದ ಬಯಸುತ್ತಿದ್ದ ಕನಸು. ಕೆಲವು ತಿಂಗಳಿನಿಂದ ಕಟ್ಟಡ ನಿರ್ಮಾಣ ಕ್ಷೇತ್ರ ಬಹುತೇಕ ಸ್ಥಗಿತಗೊಂಡಿದ್ದರಿಂದ ಕೂಲಿ ಕಾರ್ಮಿಕರಿಗೆ ಆಗಿರುವ ಸಮಸ್ಯೆ ಬಹಳ ದೊಡ್ಡದು. ಹಲವು ಕುಟುಂಬಗಳು ಖರ್ಚನ್ನು ನಿರ್ವಹಿಸಲು ಕಸರತ್ತು ಮಾಡುತ್ತಿವೆ. ಕೆಲವರು ತಮ್ಮ ಮಕ್ಕಳ ಸೌಲಭ್ಯಗಳನ್ನು ಕಡಿತಗೊಳಿಸಿದರು. ಸಾಮಾನ್ಯವಾಗಿ ಖಾಸಗಿ, ಅನುದಾನಿತ ಶಾಲೆಗಳ ವ್ಯಾನ್ ಮತ್ತು ಮಧ್ಯಾಹ್ನದ ಊಟದ ಖರ್ಚು ಓರ್ವರಿಗೆ ತಲಾ 1,400ರಿಂದ 1,500ರೂ.ಗಳವರೆಗೆ ಇದೆ. ಇನ್ನೂ ಹಲವೆಡೆ ಸಿಕ್ಕ ಕೆಲಸ ಮಾಡತೊಡಗಿದರು, ಎಷ್ಟು ಸಿಕ್ಕಿದರೂ ಸಾಕು ಎಂಬ ಪಾಠಕ್ಕೆ ಮೊರೆ ಹೋದರು. ಹೀಗೆ ಕಷ್ಟ ಎಂಬುದು ಒಂದು ಕಡೆಯಿಂದ ಬರಲಿಲ್ಲ. ಇಲ್ಲಿ ಇಂಥದ್ದೇ ಮೂರು ಪ್ರಕರಣಗಳನ್ನು ನೀಡಲಾಗಿದೆ. ಸರಕಾರ ಕೆಲವು ನಿರ್ಧಾರಗಳಿಗೆ ಪ್ರದರ್ಶಿಸುವ ವಿಳಂಬ ನೀತಿ ಕಾರ್ಮಿಕ ವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂಬುದು ಇದರಿಂದ ಅರಿವಿಗೆ ಬರುತ್ತದೆ.
ಹೆಸರು ರಾಜೀವ್. ಊರು ಸಾೖಬ್ರಕಟ್ಟೆ. ಇವರು ಮೇಸ್ತ್ರಿಯಾಗಿದ್ದರು. ಒಂದು ದಿನಕ್ಕೆ 800 ರೂ. ಗಳಿಂದ ಒಂದು ಸಾವಿರ ರೂ. ವರೆಗೂ ಆದಾಯವಿತ್ತು. ತಿಂಗಳಿಗೆ 20 ಸಾವಿರ ರೂ.ಸಿಗುತ್ತಿತ್ತು. ಮರಳು ಕೊರತೆ ಉದ್ಭವಿಸಿದ ಆರಂಭದಲ್ಲಿ ವಾರಕ್ಕೆ ಎರಡು ಮೂರು ಕೆಲಸ ಸಿಗುತ್ತಿತ್ತು. ಕ್ರಮೇಣ ಅದಕ್ಕೂ ಕುತ್ತಾಯಿತು. ಅವಿವಾಹಿತರಾಗಿದ್ದ ಅವರು ತಂದೆ, ತಾಯಿಯ ಆರೈಕೆ ಹಾಗೂ ತಮ್ಮನ ಶಿಕ್ಷಣದ ಹೊಣೆ ಹೊತ್ತಿದ್ದರು. ಅಲ್ಲಿ ಇಲ್ಲಿ ಓಡಾಡಿ, ಸರಿಯಾದ ಕೆಲಸ ಸಿಗದೇ ಅನಿವಾರ್ಯವಾಗಿ ಬಾರ್‌ವೊಂದರ ಸಪ್ಲೈಯರ್ ಆಗಿ ಸೇರಿದರು. ಈಗ ಕೆಲಸ ಸಿಕ್ಕಿದೆ. ಆದರೆ ತಿಂಗಳಿಗೆ ಸಿಗುತ್ತಿರುವುದು ಸುಮಾರು 6 ಸಾವಿರ ರೂ. ಹೆಚ್ಚು ಮಧ್ಯಮ ವರ್ಗದ ಗ್ರಾಹಕರೇ ಆದ ಕಾರಣ ಟಿಪ್ಸ್ ಬಹಳ ಸಿಗದು. ಎಲ್ಲವೂ ಸೇರಿದರೆ ಹತ್ತು ಸಾವಿರ ರೂ. ದಾಟಿದರೆ ದೊಡ್ಡದು. ಕಳೆದ ವರ್ಷ ಹರಕೆ ಬಯಲಾಟ ಆಡಿಸಿದ್ದು, ತಾಯಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು 1.50 ಲಕ್ಷ ರೂ. ಸಾಲ ಮಾಡಿದ್ದರು. ಅದನ್ನೀಗ ತೀರಿಸುವ ಮಾತಿರಲಿ, ನಿತ್ಯದ ಅನ್ನಕ್ಕೆ ಕುತ್ತು ಬೀಳಬಾರದೆಂದು ಈ ಕೆಲಸ ನಿರ್ವಹಿಸುತ್ತಿದ್ದಾರೆ. ನಿಜ, ಈಗ ಖರ್ಚನ್ನು ಮತ್ತಷ್ಟು ಮಿತಗೊಳಿಸಿದ್ದಾರೆ. ಈ ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಮದುವೆಯನ್ನು ಮೂರು ವರ್ಷ ಮುಂದೂಡುವ ಸ್ಥಿತಿಯಲ್ಲಿದ್ದಾರೆ.
Related Articles
ಸೆಂಟ್ರಿಂಗ್ ಕೆಲಸದಲ್ಲಿ ಮೇಸ್ತ್ರಿಯಾಗಿದ್ದವರು ರಮೇಶ. ಶಿರೂರುಮೂಕೈ ಸಮೀಪದ ಹಳ್ಳಿಯವರು. ವಾರಕ್ಕೆ 4,800 ರೂ. ದುಡಿಯುತ್ತಿದ್ದರು. ಎರಡು ವರ್ಷಗಳ ಹಿಂದೆ ಮನೆಯ ಪಕ್ಕದಲ್ಲಿ ಶೆಡ್ ನಿರ್ಮಿಸಲು 70 ಸಾವಿರ ರೂ. ಸ್ವಸಹಾಯ ಸಂಘದಲ್ಲಿ ಸಾಲ ಮಾಡಿದ್ದರು. ವಾರಕ್ಕೆ 1,500 ರೂ. ಸಾಲದ ಕಂತು. ಉಳಿದದ್ದು ಮನೆ ನಿರ್ವಹಣೆಗೆ. ಇಬ್ಬರು ಪುತ್ರರು. ಪತ್ನಿ ಕೆಲಸಕ್ಕೆ ಹೋಗುತ್ತಿರಲಿಲ್ಲ.
Advertisement
ಮರಳು ಕೊರತೆ ಬಳಿಕ ತಿಂಗಳಿಗೆ ನಾಲ್ಕೈದು ಕೆಲಸಗಳೂ ಸಿಗುತ್ತಿಲ್ಲ. ಸೆಂಟ್ರಿಂಗ್, ಗದ್ದೆ ಕೆಲಸ ಬಿಟ್ಟರೆ ಬೇರೆ ಬಾರದು. ಮನೆ ನಿರ್ವಹಣೆ-ಸಂಘದ ಸಾಲದ ಕಂತು ಕಟ್ಟಲೂ ಸಮಸ್ಯೆಯಾಯಿತು. ಹಾಗೆಂದು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸಿಕ್ಕಿದ ಕೆಲಸ ಮಾಡತೊಡಗಿದರು, ಆದರೂ ಸಾಕಾಗಲಿಲ್ಲ. ಈಗ ಪತ್ನಿಯೂ ಹತ್ತಿರದ ಗೇರುಬೀಜ ಕಾರ್ಖಾನೆಗೆ ಸೇರಿದ್ದಾರೆ. ದಿನಕ್ಕೆ 200-300 ರೂ. ಬರುತ್ತಿರುವುದರಿಂದ ಸ್ವಲ್ಪ ನಿರಾಳವಂತೆ. ಇನ್ನು ಒಂದು ತಿಂಗಳು ಕೆಲಸ ಸಿಗದಿದ್ದರೆ ಬೆಂಗಳೂರಿಗೆ ಹೋಗಿ ಕೆಲಸ ಹುಡುಕುವ ನಿರ್ಧಾರ ಮಾಡಿದ್ದಾರೆ.
ಪ್ರಕರಣ 03 : ಪ್ರತೀ ಕಾಸಿಗೂ ಲೆಕ್ಕಾಚಾರಹೆಸರು ಕೃಷ್ಣ (ಹೆಸರು ಬದಲಿಸಲಾಗಿದೆ). ಸಾಲಿಗ್ರಾಮದ ಹತ್ತಿರದವರು. ಗಾರೆ ಕೆಲಸಕ್ಕೆ ಹೋಗುತ್ತಿದ್ದರು. ದಿನಕ್ಕೆ 500ರಿಂದ 600 ರೂ. ಸಿಗುತ್ತಿತ್ತು. ಕೆಲಸಕ್ಕೇನೂ ಬರವಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ವಾರಕ್ಕೆ ಒಂದು ದಿನ ಕೆಲಸ ಸಿಕ್ಕರೂ ಸಣ್ಣಪುಟ್ಟ ಕೆಲಸ. ಸಿಕ್ಕಿದುದರಲ್ಲೇ ನಿರ್ವಹಿಸಬೇಕು. ಹಾಗಾಗಿ ಗದ್ದೆ ಕೆಲಸ ಇತ್ಯಾದಿಯನ್ನೂ ಮಾಡತೊಡಗಿದ್ದಾರೆ. ಯಾವುದೂ ಗಟ್ಟಿ ಆದಾಯವಲ್ಲ. ತಮ್ಮ ಇಬ್ಬರು ಮಕ್ಕಳನ್ನು ಖಾಸಗಿ ಅನುದಾನಿತ ಶಾಲೆಗೆ ಕಳುಹಿಸುತ್ತಿದ್ದರು. ನಾಲ್ಕು ತಿಂಗಳಿಂದ ಶಾಲೆಯ ವ್ಯಾನ್‌ನ್ನು ಕಡಿತಗೊಳಿಸಿ ಖಾಸಗಿ ಬಸ್ಸನ್ನು ಆಶ್ರಯಿಸಿದ್ದಾರೆ. ಇದರಿಂದ ಇಬ್ಬರು ಮಕ್ಕಳ ಲೆಕ್ಕಾಚಾರದಲ್ಲಿ ತಿಂಗಳಿಗೆ 1,500 ರೂ. ಪಾವತಿಸಬೇಕಿತ್ತು. ಜತೆಗೆ ಮಧ್ಯಾಹ್ನದ ಊಟವನ್ನೂ ಮನೆಯಿಂದಲೇ ಕಳಿಸಲಾಗುತ್ತಿದೆ. ಇದಕ್ಕೂ ಸುಮಾರು 1,300 ರೂ. ವರೆಗೂ ಪಾವತಿಸಬೇಕಿತ್ತು. ಮನೆಗೆ ಪಡೆಯವ ಸಾಮಾನುಗಳಲ್ಲೂ ಕಡಿತಗೊಳಿಸಿದ್ದಾರೆ. ಏನಿದ್ದರೂ ತೀರಾ ಅಗತ್ಯವಾದದ್ದು ಮಾತ್ರ ಪಟ್ಟಿ ಮಾಡಿ, ತಿಂಗಳಿಗೊಮ್ಮೆಯೇ ಖರೀದಿಸತೊಡಗಿದ್ದಾರೆ. ರವಿವಾರವಾದರೂ ಸಿಕ್ಕ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. — ರಾಜೇಶ್ ಗಾಣಿಗ ಅಚ್ಲಾಡಿ