Advertisement
2.5 ಕೋಟಿ ರೂ. ಖರ್ಚಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಸ್ಥಳೀಯ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ. ಹೆಚ್ಚು ನೀರು ಸಂಗ್ರಹಿಸುವ ಉದ್ದೇಶದಿಂದ ಈ ಮೊದಲಿದ್ದ ಸಣ್ಣ ಕಿಂಡಿ ಅಣೆಕಟ್ಟು ಬದಲು ಹೊಸದಾಗಿ ವಿದ್ಯುತ್ ಚಾಲಿತ ಗೇಟ್‌ಗಳುಳ್ಳ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ.
Related Articles
Advertisement
ಮಾರ್ಚ್ ತಿಂಗಳಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭವಾಗಿದ್ದು ಸುಮಾರು ಒಂದು ತಿಂಗಳ ಕಾಲ ನದಿಯಲ್ಲಿದ್ದ ಕಲ್ಲು ಒಡೆಯುವ ಕಾಮಗಾರಿ ನಡೆದಿತ್ತು. ಮಳೆಗಾಲಕ್ಕೂ ಮೊದಲು ಸಂಪೂರ್ಣ ಕಾಮಗಾರಿ ಮುಗಿಸಿ ಜನಸಂಚಾರಕ್ಕೆ ಅನುವು ಮಾಡಿಕೊಡುವ ಗುತ್ತಿಗೆದಾರರ ಯೋಜನೆೆ ಸರಕಾರದ ಮರಳು ನೀತಿಯಿಂದಾಗಿ ಕುಂಟುತ್ತಾ ಸಾಗುವಂತಾಗಿದೆ.
ಸ್ಥಳೀಯ ಶಾಂಭವಿ ನದಿಯಿಂದಲೇ ಮರಳು ತೆಗೆಯಲೂ ಸರಕಾರದ ನೀತಿ ಅಡ್ಡಗಾಲಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮರಳಿಗೆ ಪರ್ಯಾಯವಾಗಿ ಬಳಸುವ ಕ್ರಶರ್ ಹುಡಿ (ಎಂ-ಸ್ಯಾಂಡ್) ಪೂರೈಕೆ ಕೂಡ ಸರಿಯಾಗಿ ಆಗುತ್ತಿಲ್ಲ. ಎಂ ಸ್ಯಾಂಡ್‌ನಿಂದ ಮಾಡಿದ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಜನರು ಅಸಮಾಧಾನ ಹೊಂದಿದ್ದಾರೆ.
ಮಳೆಗಾಲದಲ್ಲಿ ಸಮಸ್ಯೆ
ಈ ಹಿಂದೆ ಇಲ್ಲಿ ಇದ್ದ ಸಣ್ಣ ಸೇತುವೆ ಕಲ್ಲು ಬ್ಲಾಸ್ಟಿಂಗ್ ವೇಳೆ ಮುರಿದು ಹೋಗಿದೆ. ಮಳೆಗಾಲಕ್ಕಿಂತ ಮೊದಲು ಸೇತುವೆ ನಿರ್ಮಾಣವಾಗುತ್ತದೆ ಎಂದು ಭಾವಿಸಿದ್ದ ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ. ನದಿಯ ಮತ್ತೂಂದು ಕಡೆ ವಾಸಿಸುವ 50ಕ್ಕೂ ಹೆಚ್ಚು ಕುಟುಂಬಗಳು ಮಳೆಗಾಲದಲ್ಲಿ ಸುಮಾರು 200 ಮೀಟರ್ ದೂರಕ್ಕೆ ಹೋಗಲು 4 ಕಿ.ಮೀ. ದೂರ ನಡೆಯಬೇಕಾದ ಅನಿವಾರ್ಯ ಇದೆ. ಬೋಳ ದೇವಸ್ಥಾನದ ಬಳಿ ಇರುವ ಸೇತುವೆ ಜೀರ್ಣಾವಸ್ಥೆಯಲ್ಲಿದ್ದು ಮಳೆಯರು, ಮಕ್ಕಳು ನಡೆದಾಡಲು ಭಯಪಡುತ್ತಾರೆ.
ಮರಳು ವ್ಯವಸ್ಥೆ ಮಾಡಿ
ಈ ಹೊಸ ಅಣೆಕಟ್ಟು ನಿರ್ಮಾಣ ಆದ ಅನಂತರ ಇಲ್ಲಿನ ನೀರಾವರಿ ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆ ಇದೆ. ಮಳೆಗಾಲಕ್ಕಿಂತ ಮೊದಲು ಕಾಮಗಾರಿ ಆಗದಿದ್ದರೆ ಸಂಚಾರ ವ್ಯವಸ್ಥೆಗೆ ಅನನುಕೂಲವಾಗಲಿದೆ. ಇದರಿಂದ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮರಳು ವ್ಯವಸ್ಥೆ ಮಾಡಿ ಕಾಮಗಾರಿ ಪೂರ್ಣಗೊಳ್ಳಲು ಅವಕಾಶ ನೀಡಬೇಕು.
-ಬಾಲಕೃಷ್ಣ ಶೆಟ್ಟಿ, ಸ್ಥಳೀಯರು
ಎಂ ಸ್ಯಾಂಡ್ ಬಳಕೆ ಮಾಡಬಹುದು
ಪಶ್ಚಿಮ ವಾಹಿನಿ ಯೋಜನೆಯಲ್ಲಿ ಮಂಜೂರಾದ ಕಾರ್ಕಳ ತಾಲೂಕಿನ ಅಣೆಕಟ್ಟುಗಳಲ್ಲಿ ಬೋಳ ಪಾಲಿಂಗೇರಿ ಅಣೆಕಟ್ಟು ಒಂದು. ಈ ಭಾಗದ ಸಾಕಷ್ಟು ರೈತರಿಗೆ ಇದರಿಂದ ಲಾಭವಾಗಲಿದೆ. ಮರಳು ಸಮಸ್ಯೆ ಇದ್ದರೂ ಇಲ್ಲಿ ಎಂ ಸ್ಯಾಂಡ್ ಬಳಸಬಹುದು. ಶಿವಮೊಗ್ಗ ಕ್ವಾಲಿಟಿ ಕಂಟ್ರೋಲ್ನಲ್ಲಿ ಪರೀಕ್ಷೆ ನಡೆಸಿ ಕ್ರಶರ್ ಹುಡಿ ಬಳಕೆಗೆ ಅನುಮತಿ ನೀಡಿದ್ದೇವೆ. ಗುಣಮಟ್ಟದಲ್ಲಿ ಏನೂ ವ್ಯತ್ಯಾಸವಾಗದು. -ಸುರೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಉಪ ವಿಭಾಗ ಉಡುಪಿ.