ಶಿರಸಿ: ಪ್ರಗತಿಗೆ ಅಗತ್ಯವಾದ ಮರಳು ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಜಿಲ್ಲಾ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಅಸಮಧಾನ ವ್ಯಕ್ತಡಿಸಿದ ಸಂಘದ ಜಿಲ್ಲಾ ಅಧ್ಯಕ್ಷ ಶ್ಯಾಂಸುಂದರ ಭಟ್ಟ, ಕಟ್ಟಡ, ರಸ್ತೆ, ಸೇತುವೆ, ಮೋರಿ ಸೇರಿದಂತೆ ಎಲ್ಲ ಅಭಿವೃದ್ದಿಗಳಿಗೆ ಅಗತ್ಯವಾದ ಮರಳು ಲಭ್ಯವಾಗದೇ ಪ್ರಗತಿ ಕುಂಠಿತವಾಗಿದೆ.
ಮಳೆಗಾಲ ಮುಗಿದು ಮೂರು ತಿಂಗಳಾದರೂ ಮರಳು ತೆಗೆಯಲು ಅನುಮತಿ ನೀಡದೇ ಜಿಲ್ಲಾಡಳಿತವು ಕಣ್ಣುಮುಚ್ಚಿ ಕುಳಿತಿರುವುದನ್ನು ನೋಡಿದರೆ ಜಿಲ್ಲಾಡಳಿತಕ್ಕೇ ಕರೋನಾ ತಗಲಿರುವಂತೆ ಕಂಡು ಬರುತ್ತದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಸಪ್ಟೆಂಬರ ಅಥವಾ ಅಕ್ಟೋಬರದಲ್ಲಿ ಮರಳು ತೆಗೆಯಲು ಅನುಮತಿ ನೀಡುವ ನಿರೀಕ್ಷೆ ಇತ್ತು. ಆದರೆ ಜನವರಿ ತಿಂಗಳು ಮುಗಿಯುತ್ತ ಬಂದರೂ ಇನ್ನೂ ಆ ಬಗ್ಗೆ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಜಿಲ್ಲಾಡಳಿತವು ಜಿಲ್ಲಾ ಅಭಿವೃದ್ಧಿಗೆ ವಂಚಿಸುತ್ತಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ತಕ್ಕ ಮಾರ್ಗದರ್ಶನ ನೀಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮರೆತಂತೆ ಕಾಣುತ್ತಿದ್ದು ಬೇಸರ ತರಿಸುತ್ತಿದೆ. ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ನದಿಗಳಲ್ಲಿ ಮರಳಿನ ಕೊರತೆ ಇಲ್ಲ. ಯಾಕೆಂದರೆ ಗುತ್ತಿಗೆದಾರರೊಬ್ಬರು ಶರಾವತಿ ನದಿಯಲ್ಲಿ ಬ್ರಿಜ್ ಮಾಡಲು ಅಡಿಪಾಯಕ್ಕೆ ತೆಗೆಯಲು ಹೋದಾಗ 15 ಮೀ ಆಳದವರೆಗೆ ರೇತಿ ಇರುವುದು ಕಂಡು ಬಂದಿದೆ ಎಂದಿದ್ದಾರೆ.
ಕರಾವಳಿ ಭಾಗದಲ್ಲಿ ಕೆಲವು ಅಧಿಕಾರಿಗಳನ್ನು ತೃಪ್ತಿಪಡಿಸಿ ಅನಧಿಕೃತ ಮರಳು ತೆಗೆದು ಸಣ್ಣ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದು ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಈ ಸಂಗತಿ ಜನ ಪ್ರತಿನಿಧಿಗಳಿಗೂ ತಿಳಿದಿದೆ. ಆದರೂ ಜಿಲ್ಲೆಯಲ್ಲಿ ಸರಕಾರಿ ಕಾಮಗಾರಿಗಳಿಗೆ, ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳ ಕಟ್ಟಡಗಳಿಗೆ ಮರಳು ಸಿಗಲು ಇನ್ನೂ ಪ್ರಯತ್ನಿಸದಿರುವು ಹಾಗೂ ನಿರ್ದಿಷ್ಟ ಸೂಚನೆ ನೀಡಿ ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಅನುಮತಿ ನೀಡಲು ಕ್ರಮವಾಗದಿರುವುದು ಬೇಸರ ತಂದಿದೆ ಎಂದಿದ್ದಾರೆ.
ಜಿಲ್ಲೆಯ ಎಲ್ಲ ನದಿಗಳಲ್ಲಿ ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಈ ಕೂಡಲೇ ಪರವಾನಿಗೆ ನೀಡಲು ಜಿಲ್ಲಾ ಗುತ್ತಿಗೆದಾರರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಮರಳು ತೆಗೆಯಲು ಅನುಮತಿ ನೀಡಬೇಕು. ವರ್ಷ ಪೂರ್ತಿ ಮರಳು ಸಿಗಲು ಪ್ರತಿ ತಾಲೂಕಿನಲ್ಲಿ ದಾಸ್ತಾನು ಯಾರ್ಡಗಳನ್ನು ನಿರ್ಮಿಸಿ ರಾಜಧನ ಸಹಿತ ದರ ನಿಗದಿಪಡಿಸಬೇಕು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಇದರಿಂದ ಮರಳು ಮಾಫಿಯಾ ನಿಲ್ಲುತ್ತದೆ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಮರಳು ಸಮಸ್ಯೆ ಕೇವಲ ಗುತ್ತಿಗೆದಾರರದ್ದಲ್ಲ.ಜನ ಸಾಮಾನ್ಯರದ್ದೂ ಹೌದು. ಈ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತಬೇಕಾಗಿದೆ.
– ಶ್ಯಾಂಸುಂದರ ಭಟ್ಟ, ಜಿಲ್ಲಾ ಅಧ್ಯಕ್ಷ, ಗುತ್ತಿಗೆದಾರ ಸಂಘ