ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆ ಸಂಬಂಧ ಪ್ರತ್ಯೇಕ ಮರಳು ನೀತಿಯನ್ನು ಶೀಘ್ರ ಅನುಷ್ಠಾನ ಮಾಡುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ಸ್ಪಂದಿಸಿದ ಮುಖ್ಯಮಂತ್ರಿಯವರು ಕರಾವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಈ ಬಗ್ಗೆ ಶೀಘ್ರ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಆರ್‌ಝಡ್ ವ್ಯಾಪ್ತಿಯಲ್ಲಿ 2011ರ ಅನಂತರದ ಸಾಂಪ್ರ ದಾಯಿಕ ಮರಳು ತೆಗೆಯುವ ಬಗ್ಗೆ ಸಂಬಂಧಪಟ್ಟವರಿಗೆ ಅನುಮತಿ ನೀಡಲು ಗಣಿ ಇಲಾಖೆ ನಿರ್ದೇಶನ ನೀಡಬೇಕು. ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈಗಾಗಲೇ ರಾಜ್ಯ ಮಿನರಲ್ ನಿಗಮಕ್ಕೆ ಸಲ್ಲಿಸಿರುವ 30 ಪ್ರಸ್ತಾವನೆಗಳಿಗೆ ಕೂಡಲೇ ಟೆಂಡರ್ ಕರೆದು ಅನುಮತಿ ನೀಡಬೇಕು, ತುಂಬೆ, ಮರವೂರು ವೆಂಟೆಡ್ ಡ್ಯಾಂ ಸಹಿತ ಇತರ ಕಡೆಗಳಲ್ಲಿ ಶೇಖರಣೆಯಾಗಿರುವ ಮರಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.
ಬಳಿಕ ಗಣಿ ಇಲಾಖೆ ಸಚಿವರಾದ ಸಿ.ಸಿ. ಪಾಟೀಲ್ ಅವರ ಜತೆಗೆ ಸಭೆ ನಡೆಸಲಾಯಿತು. ಶಾಸಕರಾದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ರಾಜೇಶ್ ನಾೖಕ್, ಹರೀಶ್ ಪೂಂಜ ಉಪಸ್ಥಿತರಿದ್ದರು.